ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ಕೃಷಿ ತರಬೇತಿ ಕೇಂದ್ರ ಹಾಗೂ ದಾವಣಗೆರೆ ಐಕಾಂತಿಕ ಸಮುದಾಯ ಸಹಯೋಗದಲ್ಲಿ ಹಿರಿಯೂರು ತಾಲ್ಲೂಕು ಬಬ್ಬೂರು ಫಾರಂನಲ್ಲಿ ಜಿಲ್ಲೆಯ ರೈತರಿಗೆ “ಸಹಜ ಕೃಷಿ – ಸಂತೃಪ್ತ ಜೀವನಕ್ಕೆ ದಾರಿ’’ಎಂಬ ವಿಷಯದ ಕುರಿತು ಮೂರು ದಿನದ ತರಬೇತಿ ಕಾರ್ಯಗಾರವನ್ನು ಸೋಮವಾರ ಉದ್ಘಾಟನೆ ಮಾಡಲಾಯಿತು.
ಅ.15 ರಿಂದ ಅ.17 ವರೆಗೆ ನಡೆಯುವ ಕಾರ್ಯಗಾರದ ನಡೆಯಲಿದೆ. ಉದ್ಘಾಟನೆ ಕಾರ್ಯಕ್ರಮದಲ್ಲಿ ದಾವಣಗೆರೆಯ ಐಕಾಂತಿಕ ತೋಟದ ರಾಘವ ಅವರು ನಮ್ಮ ಸುತ್ತಲಿನ ಪ್ರಪಂಚದಲ್ಲಿ ಪ್ರಸ್ತುತ ಆಗು ಹೋಗುಗಳು – ಕುಟುಂಬದ ಆರ್ಥಿಕತೆ, ದೇಶ ಮತ್ತು ಪ್ರಪಂಚದ ಆರ್ಥಿಕತೆ ಕುರಿತು ವಿಷಯ ಮಂಡನೆ ಮಾಡನೆ ಮಾಡಿದರು.
ಸಹಜ ಜೀವನ ಶೈಲಿಯ ನಿಜವಾದ ಆಹಾರ, ನೈಸರ್ಗಿಕ ಆರೋಗ್ಯ ಚಿಕಿತ್ಸಾ ಪರಿಹಾರಗಳು, ನೈಸರ್ಗಿಕ ಕಟ್ಟಡ, ಸ್ವಚ್ಛತೆಯ ಸಹಜ ವಸ್ತುಗಳ ಕುರಿತು ರೈತಬಾಂಧವರಿಗೆ ಮನದಟ್ಟು ಮಾಡಿಕೊಟ್ಟರು. ಸಹಜ ಕೃಷಿ ಅಳವಡಿಸಿ ಯಶಸ್ವಿಯಾದ ಐಕಾಂತಿಕ ಸಮುದಾಯದ
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ವಿವಿಧ ಭಾಗದ ಪ್ರಗತಿಪರ ಸಹಜ ಕೃಷಿಕರ ಯಶೋಗಾಥೆಗಳನ್ನು ಮತ್ತು ಜಪಾನಿನ ಸಹಜ ಕೃಷಿಯ ಹರಿಕಾರರಾದ ಮಸನೊಬು ಫುಕುವೋಕ ಅವರ ಸಹಜ ಕೃಷಿಯ ಅನುಭವಗಳ ಚಿತ್ರಗಳು ಹಾಗೂ ದೃಶ್ಯಗಳನ್ನು ರಾಘವವರು ರೈತರೊಂದಿಗೆ ಹಂಚಿಕೊಂಡರು.
ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ರಜನೀಕಾಂತ. ಆರ್ ಇವರು ರೈತರನ್ನು ಮತ್ತು ಆಗಮಿಸಿದ ಐಕಾಂತಿಕ ಸಮುದಾಯದ ಪ್ರಗತಿಪರ ಸಹಜ ಕೃಷಿಕರನ್ನು ಸ್ವಾಗತಿಸಿ ಪ್ರಸ್ತುತ ಸಹಜ ಜೀವನ ಮತ್ತು ಸಹಜ ಕೃಷಿಯ ಅನಿವಾರ್ಯತೆ ಕುರಿತು ಪ್ರಸ್ತಾವಿಕವಾಗಿ ಮಾತನಾಡಿದರು.
ಮೊದಲ ದಿನದ ಕಾರ್ಯಾಗಾರದಲ್ಲಿ ಐಕಾಂತಿಕ ಸಮುದಾಯದ ಅಭಿಷೇಕ್ಅವರು ದಿನ ನಿತ್ಯ ಜೀವನದಲ್ಲಿ ಬಳಸುವ ಪ್ಲಾಸ್ಟಿಕ್ ನಿಂದ ಆಗುವ ದುಷ್ಪರಿಣಾಮ ಕುರಿತು ಅರಿವು ಮೂಡಿಸುತ್ತಾ ಪರ್ಯಾಯ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಪಾಂಡುರಂಗ ಅವರು ನೈಸರ್ಗಿಕ ಉಡುಪು ಹಾಗೂ ಬರಿಗಾಲಿನ ನಡಿಗೆಯಿಂದ ಆಗುವ ಅನುಕೂಲತೆಯನ್ನು ವಿವರಿಸಿದರು. ನಿರಂಜನ್ ಅವರು ಕೃಷಿಯು ಬೆಳೆದು ಬಂದ ಹಾದಿಯ ಕುರಿತು ವಿವರಿಸುತ್ತಾ ಭೂಗೋಳದಲ್ಲಿ ಮಣ್ಣು, ಸಸ್ಯರಾಶಿ, ಜೀವರಾಶಿ ಹಾಗೂ ಈ ಮೂರರ ಸಮತೋಲನ ವ್ಯವಸ್ಥೆ ಕುರಿತು ತಿಳಿಸಿದರು.
ಸುಜಿತ್ ಮತ್ತು ಪಾಂಡುರಂಗಚಾರಿ ಅವರು ಪ್ರಸ್ತುತ ಇರುವ ತೋಟವನ್ನು ಸಹಜ ಕೃಷಿ ಅಳವಡಿಸಿ ಉತ್ತಮಪಡಿಸುವ ವಿಚಾರಗಳನ್ನು ತಿಳಿಸಿದರು. ವೀರೇಶ್ ಅವರು ಸಜೀವ ಮಣ್ಣಿನ ಪ್ರಾಮುಖ್ಯತೆ ಕುರಿತು ರೈತರಲ್ಲಿ ವಿಷಯ ಪ್ರಸ್ತಾಪಿಸಿದರು.
ನಂತರ ರೈತರಲ್ಲಿ ಉದ್ಬವಿಸಿದ ವಿವಿಧ ಪ್ರಶ್ನೆ ಸಂದೇಹಗಳ ಬಗ್ಗೆ ಚರ್ಚಾ ಗೋಷ್ಠಿ ನಡೆಸಲಾಯುತು. ಕಾರ್ಯಗಾರಕ್ಕೆ ಹಾಜರಾದ ಆಸಕ್ತ 60 ಜನ ರೈತರಿಗೆ ಗಾಣದಿಂದ ತೆಗೆದ ಶುದ್ಧ ಕೊಬ್ಬರಿ ಎಣ್ಣೆ, ವಿಷಮುಕ್ತವಾಗಿ ಬೆಳೆದ ಕಂದು ಬಣ್ಣದ ಅಕ್ಕಿ, ಕೆಂಪಕ್ಕಿ ಮತ್ತು ಸಿರಿಧಾನ್ಯಗಳಿಂದ ತಯಾರಿಸಿದ ಸಾತ್ವಿಕ ಆಹಾರ, ರಾಗಿ ಅಂಬಲಿ ಮತ್ತು ಕಷಾಯವನ್ನು ನೀಡಲಾಯಿತು.