ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಹಿಳೆಯ ಶವವು ಕೊಲೆ ಮಾಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೇ ಸಂದರ್ಭದಲ್ಲಿ ಮನೆ ಕೆಲಸದ ವ್ಯಕ್ತಿಯೂ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರದ ಸಿಲ್ಕ್ ಬೋರ್ಡ್ ಸಮೀಪದ ಕೆಎಎಸ್ ಕಾಲೋನಿಯಲ್ಲಿ ತಡರಾತ್ರಿ ನಡೆದಿದೆ.
ಸುಮಾರು 55 ವರ್ಷದ ಮಹಿಳೆ ಮನೆಯ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅದೇ ಮನೆಯಲ್ಲಿ ಕೆಲಸ ಮಾಡುತ್ತಿದ್ದ ದೇವರಾಜು (50) ಎಂಬಾತ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿದೇಶಕ್ಕೆ ತೆರಳಿದ್ದ ಮೃತ ಮಹಿಳೆಯ ಪತಿ ಮುಂಜಾನೆ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುಬೈಗೆ ತೆರಳಿದ್ದ ಮೃತಳ ಪತಿ ಮುಂಜಾನೆ 4.30ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ್ದರು. ಮೊದಲ ಮಹಡಿಯಲ್ಲಿ ಇದ್ದ 27 ವರ್ಷದ ಮಗಳು ಬಂದು ಬಾಗಿಲು ತೆರೆದು ತನ್ನ ಕೋಣೆಗೆ ತೆರಳಿದ್ದಳು.
ಬಳಿಕ ಪತಿ ಕೆಳ ಮಹಡಿಯಲ್ಲಿದ್ದ ರೂಮ್‌ಗೆ ತೆರಳಿದಾಗ ಪತ್ನಿ ಶವವಾಗಿ ಪತ್ತೆಯಾಗಿದ್ದಾರೆ. ಕೆಲಸಗಾರ ದೇವರಾಜ್ ಸಹ ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಘಟನೆ ನಡೆದ ಸಮಯದಲ್ಲಿ ಮನೆಯ ಮೊದಲ ಮಹಡಿಯಲ್ಲಿ ಮಗಳಿದ್ದರೂ ಆಕೆಗೆ ಗಮನಕ್ಕೆ ಬಾರದೇ ಕೃತ್ಯ ನಡೆದಿದೆ.
ಹತ್ಯೆ ಹೇಗೆ ನಡೆದಿದೆ? ಆತ್ಮಹತ್ಯೆಗೆ ಮಾಡಿಕೊಂಡ ಕೆಲಸಗಾರನೇ ಕೃತ್ಯ ಎಸಗಿದ್ದಾನಾ? ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೂರ್ವ ವಲಯದ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.

