ಚಂದ್ರವಳ್ಳಿ ನ್ಯೂಸ್, ನವದೆಹಲಿ:
ದೆಹಲಿಯ NSD (ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ) ದಲ್ಲಿ ದಿನಾಂಕ 01/07/2025 ರಿಂದ 04/07/2025 ರವರಿಗೆ ನಾಲ್ಕು ದಿನಗಳು “ಗುರುದಕ್ಷಿಣೆ” (ಮಹಾಭಾರತದ ಏಕಲವ್ಯನ ಭಾಗ) ಎಂಬ ಯಕ್ಷಗಾನ ನಾಟಕವನ್ನು ಏರ್ಪಡಿಸಿದ್ದರು.
ಈ ನಾಟಕದಲ್ಲಿ ಎಲ್ಲಾ ಪಾತ್ರಧಾರಿಗಳು ಅದ್ಭುತವಾಗಿ ಅಭಿನಯಿಸಿದರು. ವಿಶೇಷವೆಂದರೆ ಪಾತ್ರಧಾರಿಗಳಲ್ಲಿ ಒಬ್ಬರೂ ಕನ್ನಡಿಗರಿರಲಿಲ್ಲ ಎಲ್ಲರೂ ಬೇರೆ ಬೇರೆ ರಾಜ್ಯದವರು ಅನ್ಯ ಭಾಷಿಕರು ಎನ್ನುವುದು ಮುಖ್ಯ. ಆದರೆ ಎಲ್ಲರು ಕನ್ನಡದಲ್ಲಿಯೇ ಸಂಭಾಷಣೆ ಹೇಳಿ ತುಂಬಾ ಮನೋಜ್ಞವಾಗಿ ಅಭಿನಯಿಸಿದರು. ದೆಹಲಿಯ NSD (ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ) ದಲ್ಲಿ ಮೊದಲನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾಡಿದ ನಾಟಕವನ್ನು ನೋಡಿ ಎಲ್ಲರೂ ತಲೆದೂಗಿದರು.
ಈ ನಾಟಕವನ್ನು ಗುರು ಬನ್ನಂಜೆ ಸಂಜೀವ ಸುವರ್ಣ ಅವರು ನಿರ್ದೇಶನ ಮಾಡಿದ್ದಾರೆ. ನಮ್ಮ ಕನ್ನಡ ಭಾಷೆಯ ಘಮಲನ್ನು ಏನು ಅರಿಯದೆ ಇರುವಂತಹ ನಟನೆಯಲ್ಲಿ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಬಂದಂತಹ ಅನ್ಯ ಭಾಷಿಕರಿಂದ ಅದ್ಭುತವಾಗಿ ಕನ್ನಡದಲ್ಲಿಯೇ ಸಂಭಾಷಣೆ ಹೇಳಿಸಿ ಅವರಿಂದ ಉತ್ತಮ ಅಭಿನಯ ಮೂಡಿಸಿದ್ದಾರೆ.
ಭಾಗವತರಾದ ಲಂಬೋದರ ಹೆಗ್ಡೆ ನಿಟ್ಟೂರು ಇವರ ಕಂಠಸಿರಿಗೆ ಮನಸೋಲದವರಿಲ್ಲ. ನಾಟಕದ ಅಂತಿಮದಲ್ಲಿ ಇವರನ್ನು ಪರಿಚಯಿಸುವಾಗ ಪ್ರೇಕ್ಷಕರಿಂದ ಅತಿ ಹೆಚ್ಚು ಕರತಾಡನ ಕೇಳಿ ಬಂತು. ಆಟದ ಉದ್ದಕ್ಕೂ ಭಾಗವತರ ಕಂಠಸಿರಿಯೂ ಪ್ರೇಕ್ಷಕರಿಗೆ ಎಲ್ಲೂ ಒಂದು ಕ್ಷಣಕ್ಕೂ ಬೇಸರ ಮೂಡಿಸಲಿಲ್ಲ ಬದಲಿಗೆ ಕರ್ಣಾನಂದ ಆಗುವುದಂತೂ ಸತ್ಯಾನುಸತ್ಯ.
ಗುರುದಕ್ಷಿಣೆ ನಾಟಕದ ವಿಮರ್ಶೆ;
ತನ್ನ ತಂದೆಯ ಹಳೆಯ ಒಂದು ಬಿಲ್ಲು ಸಿಕ್ಕಾಗ ಅದನ್ನು ತನ್ನಮ್ಮನಿಗೆ ತೋರಿಸಿ ಬಿಲ್ವಿದ್ಯೆ ಕಲಿಯುವ ತನ್ನಿಚ್ಚೆ ತಿಳಿಸಲು ಏಕಲವ್ಯನ ತಾಯಿ ಅದು ರಾಜ ಮಕ್ಕಳ ವಿದ್ಯೆ ನಮ್ಮಂತ ಕಿರಾತರು ಆ ವಿದ್ಯೆ ಕಲಿಯುವಂತಿಲ್ಲ ಹಾಗೂ ಅದನ್ನು ಯಾರು ನಮಗೆ ಕಲಿಸುವುದು ಇಲ್ಲ ಎಂದು ಎಷ್ಟು ಬೇಡವೆಂದರೂ ಹಠ ಹಿಡಿದು ದ್ರೋಣಾಚಾರ್ಯರನ್ನು ಕಂಡು ತನ್ನ ಬಯಕೆ ತಿಳಿಸಲು ಅವರು ಇದು ಸಾಧ್ಯವಿಲ್ಲ ನಿನಗೆ ಕಲಿಸಲು ನನಗೆ ಇಚ್ಚೆ ಇದ್ದರೂ ರಾಜ ಮಕ್ಕಳಿಗಷ್ಟೇ ಸೀಮಿತವಾಗಿರುವ ವಿದ್ಯೆಯನ್ನು ನಿನಗೆ ಕಳಿಸಲು ಸಾಧ್ಯವಿಲ್ಲ ಎಂದು ಹೇಳಲು ಹಾಗಾದ್ರೆ
ನಮ್ಮಂತವರು ವಿದ್ಯೆಯಿಂದ ವಂಚಿತರಾಗಬೇಕೆ ಎಂಬ ಮಾತಿಗೆ ಏಕಲವ್ಯನ ಇಚ್ಛಾಶಕ್ತಿ ನೋಡಿ ದ್ರೋಣಾಚಾರ್ಯರು ಏಕಲವ್ಯಗೆ ಬಿಲ್ಲನ್ನು ಹಿಡಿಯುವ ಮತ್ತು ಹೇಗೆ ಬಾಣವನ್ನ ಬಿಡಬೇಕು ಎಂದು ತೋರಿಸಿ ಮತ್ತೆಂದು ಇಲ್ಲಿಗೆ ಬರಬೇಡ ಹೋಗು ಎನ್ನಲು ಆಶೀರ್ವಾದ ಪಡೆದು ಬಂದ ಏಕಲವ್ಯ ಗುರು ದ್ರೋಣಾಚಾರ್ಯರ ಪ್ರತಿಬಿಂಬ ಮಾಡಿ ಅಭ್ಯಾಸ ಮಾಡುತ್ತಾನೆ.
ಏಕಲವ್ಯ ತನ್ನ ಆಸಕ್ತಿ ಮತ್ತು ಸತತ ಪ್ರಯತ್ನದಿಂದ ಬಿಲ್ವಿದ್ಯೆಯಲ್ಲಿ ಪರಿಣತಿ ಹೊಂದುತ್ತಾನೆ ಒಮ್ಮೆ ತನ್ನ ಬಿಲ್ವಿದ್ಯೆಯ ಕೌಶಲ್ಯದಿಂದ ಶಬ್ದ ಬಂದ ಕಡೆ ಶಬ್ಧವೇದಿ ವಿದ್ಯೆಯಿಂದ ಶ್ವಾನಗಳ ಬಾಯಿ ಹುರಿಕಟ್ಟುವಂತೆ ಬಿಲ್ಲನ್ನು ಬಿಟ್ಟದ್ದನ್ನು ಕಂಡ ಅರ್ಜುನ, ದ್ರೋಣಚಾರ್ಯರೊಂದಿಗೆ ನನಗಿಂತಲೂ ಚೆನ್ನಾಗಿ ಬಿಲ್ವಿದ್ಯೆ ಕೌಶಲ್ಯ ಹೊಂದಿರುವ ಒಬ್ಬ ಕಿರಾತನನ್ನು ಕಂಡೆ ನೀವು ಅವನಿಗೆ ಬಿಲ್ವಿದ್ಯೆಯಲ್ಲಿ ಪ್ರವೀಣನನ್ನಾಗಿ ಮಾಡಿ ನನಗೆ ಮೋಸ ಮಾಡಿದಿರಿ ಎಂದಾಗ ದ್ರೋಣಾಚಾರ್ಯರು ನನ್ನ ಮಗನಿಗೆ ಹೇಳಿಕೊಡದಂತಹ ಹಲವು ವಿದ್ಯೆಗಳನ್ನು ನಿನಗೆ ಹೇಳಿ ಕೊಟ್ಟಿದ್ದೇನೆ.
ನಿನಗೆ ನಾನು ಮೋಸ ಮಾಡಿಲ್ಲ ಎನ್ನುತ್ತಾರೆ. ಆದರೂ ಅರ್ಜುನ ಗುರುಗಳೇ ಧನುರ್ಧಾರಿ ಒಬ್ಬನೇ ಇರಬೇಕು ಎಂದ ಮಾತಿನ ಇಕ್ಕಟ್ಟಿಗೆ ಸಿಲುಕಿ ದ್ರೋಣಾಚಾರ್ಯರು ಏಕಲವ್ಯ ಒಬ್ಬ ಕಿರಾತ ಅವನು ಬಿಲ್ವಿದ್ಯೆ ಪ್ರವೀಣನಾದರೆ ಬೇರೆಯವರು ಅವನಿಂದ ಅವನ ವಿದ್ಯೆಯನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಯೋಚಿಸಿ, ಏಕಲವ್ಯನ ಬಳಿ ಬಂದಾಗ ಗುರುಗಳನ್ನು ಆದರಿಂದ ಬರಗೊಳ್ಳುತ್ತಾನೆ ಆದರೆ ದ್ರೋಣಾಚಾರ್ಯರು ಗುರುದಕ್ಷಿಣೆಯಾಗಿ ಹೆಬ್ಬೆರಳನ್ನು ಕೇಳಿದ್ದೇ ತಡ ಏಕಲವ್ಯ ತನ್ನ ಹೆಬ್ಬೆರಳನ್ನು ತಕ್ಷಣ ಕೊಯ್ದು ಕೊಟ್ಟು ಅಲ್ಲಿಯೇ ಬಿದ್ದು ನರಳಾಡುತ್ತಿದ್ದ ಏಕಲವ್ಯನನ್ನು ಕಂಡು ಅವನ ತಾಯಿ ದ್ರೋಣಚಾರ್ಯರಿಗೆ ಶಾಪ ಕೊಡುತ್ತಾಳೆ.
ನಾಟಕ ಮುಗಿದ ನಂತರ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮದಲ್ಲಿ ಆಡಳಿತ ವಿಭಾಗದ ನಮ್ಮ ಕನ್ನಡದವರಾದ ಶ್ರೀಮತಿ ಮೀತಾ ಮಿಶ್ರ ಅವರೊಂದಿಗೆ ಹಾಗೂ ನಮ್ಮ ರಾಜ್ಯದಿಂದ ಬಂದಿದ್ದ ನೀನಾಸಂನ ಶ್ರೀ ಗಣಪತಿ ಹೋಬಳಿದಾರ್ ಜೊತೆ ನಾಟಕದ ಬಗ್ಗೆ ವಿಚಾರ ಮಂಥನ ಮಾಡಿದೆವು.
ಮೀತಾ ಮಿಶ್ರ ಅವರು ನೋಡಿ ಬೆಂಗಳೂರಿನಲ್ಲಿ ಅನ್ಯಭಾಷಿಕರು ಕನ್ನಡ ಕಲಿಯುತ್ತಿಲ್ಲ ಎಂದು ಒಂದು ಕಡೆ ನಾವು ಹೇಳುತ್ತಿದ್ದೇವೆ ಆದರೆ ಇಲ್ಲಿ ನೋಡಿ ಎಲ್ಲರೂ ಅನ್ಯಭಾಷಿಕರೆ ಆದರೂ ಕನ್ನಡದಲ್ಲಿ ಸಂಭಾಷಿಸಿ ಅಭಿನಯಿಸಿದ್ದಾರೆ ಇದನ್ನು ನೋಡಿ ನಾವೆಲ್ಲರೂ ನಾವು ಸಂಭ್ರಮಿಸಬೇಕು ಮತ್ತು ಅನ್ಯರು ಇದನ್ನು ನೋಡಿ ಕಲಿಯಬೇಕು ಎಂದರು.
ಲೇಖನ-ವೆಂಕಟೇಶ.ಹೆಚ್, ಚಿತ್ರದುರ್ಗ. 7760023887