ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಶಿವಮೊಗ್ಗ ನಗರದ ಹೊರವಲಯ ಅಬ್ಬಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶ್ರೀ ಬಡಾವಣೆ ನಿವಾಸಿಯಾದ ಖಾಸಗಿ ಸಂಸ್ಥೆಯೊಂದರ ಉದ್ಯೋಗಿ ಗುರುಚರಣ್, ಏಕಾಂಗಿಯಾಗಿ ರಸ್ತೆಯ ಗುಂಡಿ – ಗೊಟರುಗಳಿಗೆ ಮಣ್ಣು ಹಾಕಿ ಮುಚ್ಚುತ್ತಿದ್ದಾನೆ. ಹಲವು ದಿನಗಳಿಂದ ರಸ್ತೆ ಅವ್ಯವಸ್ಥೆ ಸರಿಪಡಿಸುವ ಕಾರ್ಯವನ್ನು ಈತ ನಡೆಸುತ್ತಿದ್ದಾನೆ.
ಅಬ್ಬಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆ.ಹೆಚ್.ಬಿ. ಪ್ರೆಸ್ ಕಾಲೋನಿ, ಮಹಾಲಕ್ಷ್ಮೀ, ಶ್ರೀ ಬಡಾವಣೆ ಹಾಗೂ ಸುತ್ತಮುತ್ತಲಿನ ತೋಟ-ಗದ್ದೆಗಳಿಗೆ ಸುಮಾರು ೧ ಕಿ.ಮೀ. ಉದ್ದವಿರುವ ೬೦ ಅಡಿ ಅಗಲದ ಸ್ವಾಮಿ ವಿವೇಕಾನಂದ ಮುಖ್ಯ ರಸ್ತೆ ಯು ಪ್ರಮುಖ ಸಂಪರ್ಕ ಕೊಂಡಿಯಾಗಿದೆ.
ಭಾರೀ ಮಳೆಯಿಂದ ಕೆರೆ ನೀರು ನುಗ್ಗುವುದು ಸೇರಿದಂತೆ ಭಾರೀ ಸರಕು ಸಾಗಾಣೆ ಲಾರಿಗಳ ಸಂಚಾರದಿಂದ, ಸದರಿ ರಸ್ತೆಯು ಗುಂಡಿ – ಗೊಟರು ಬಿದ್ದಿದೆ. ಜನ – ವಾಹನ ಸಂಚಾರಕ್ಕೆ ದುಸ್ತರವಾಗಿ ಪರಿಣಮಿಸಿದೆ. ಕಳೆದ ಹಲವು ವರ್ಷಗಳಿಂದ ಇದೇ ದುಃಸ್ಥಿತಿಯಿದೆ. ಕಳೆದ ವರ್ಷ ಕರ್ನಾಟಕ ನೀರಾವರಿ ನಿಗಮದ ಅನುದಾನದಲ್ಲಿ, ಸದರಿ ರಸ್ತೆಯ ಅಲ್ಪ ಭಾಗಕ್ಕೆ ಡಾಂಬರೀಕರಣ ನಡೆಸಲಾಗಿತ್ತು. ಆದರೆ ಉಳಿದ ಭಾಗದ ರಸ್ತೆ ಅವ್ಯವಸ್ಥೆ ಹಾಗೆಯೇ ಇದೆ.
ರಸ್ತೆಯ ಉಳಿದ ಭಾಗಕ್ಕೂ ಡಾಂಬರೀಕರಣ ನಡೆಸುವಂತೆ ಈಗಾಗಲೇ ಕರ್ನಾಟಕ ನೀರಾವರಿ ನಿಗಮ, ಅಬ್ಬಲಗೆರೆ ಗ್ರಾಮ ಪಂಚಾಯ್ತಿ ಆಡಳಿತ ಸೇರಿದಂತೆ ತಾಲೂಕು, ಜಿಪಂ ಎಂಜಿನಿಯರಿಂಗ್ ವಿಭಾಗಕ್ಕೆ ಮನವಿ ಮಾಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ. ಭಾರೀ ಮಳೆಗೆ ರಸ್ತೆಯಲ್ಲಿ ದೊಡ್ಡ ಪ್ರಮಾಣದ ಗುಂಡಿಗಳು ಬಿದ್ದಿವೆ.
‘ಬಿಡುವಿನ ವೇಳೆ ರಸ್ತೆಯಲ್ಲಿ ಬಿದ್ದ ಗುಂಡಿ-ಗೊಟರುಗಳಿಗೆ ಮಣ್ಣು ಹಾಕಿ ಮುಚ್ಚುವ ಕಾರ್ಯ ನಡೆಸುತ್ತಿದ್ದೇನೆ. ಸ್ಥಳೀಯ ನಿವಾಸಿ ಕೃಷ್ಣಪ್ಪ ಎಂಬುವರು ಎರಡು ಟ್ರ್ಯಾಕ್ಟರ್ ನಷ್ಟು ಮಣ್ಣು ಕೊಡಿಸಿದ್ದಾರೆ. ಇನ್ನಾದರೂ ಆಡಳಿತ ಎಚ್ಚೆತ್ತುಕೊಳ್ಳಬೇಕು. ರಸ್ತೆ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕು’ ಎಂದು ಗುರುಚರಣ್ ಆಗ್ರಹಿಸಿದ್ದಾರೆ.