ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ತನ್ನ ಅಣ್ಣನೊಂದಿಗೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಯುವತಿಯೋರ್ವಳನ್ನು ಕಾಮುಕರು ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವ ಪೈಶಾಚಿಕ ಕೃತ್ಯ ಬೆಂಗಳೂರು ನಗರದಲ್ಲಿ ಬುಧವಾರ ಜರುಗಿದೆ.
ಮಹದೇವಪುರ ಠಾಣೆ ಪೊಲೀಸರು ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ ಪರಿಶೀಲಿಸುತ್ತಿದ್ದಾರೆ.
ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಸಂತ್ರಸ್ತೆ ಬಿಹಾರ ಮೂಲದವಳೆಂದು ಗುರುತಿಸಲಾಗಿದೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಆಸೀಫ್ ಸೇರಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದಒಂದು ತಿಂಗಳಿನಿಂದ ಕೇರಳದ ಎರ್ನಾಕುಲಂನಲ್ಲಿ ಬಿಹಾರದ ಯುವತಿ ಕೆಲಸ ಮಾಡುತ್ತಿದ್ದಳು. ಆದರೆ ಆಕೆಗೆ ಕೆಲಸ ಇಷ್ಟವಾಗದ ಕಾರಣ ಊರಿಗೆ ವಾಪಸ್ಗೆ ಹೋಗಲು ನಿರ್ಧರಿಸಿದ್ದಳು. ಊರಿಗೆ ಹೋಗಲು ಎರ್ನಾಕುಲಂನಿಂದ ರೈಲು ಹತ್ತಿದ್ದ ಯುವತಿಯು ತನ್ನ ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು.
ಆಗ ಸಹೋದರ ಕೆ.ಆರ್.ಪುರಂ ರೈಲು ನಿಲ್ದಾಣದಲ್ಲಿ ಇಳಿದುಕೊಳ್ಳುವಂತೆ ಸಹೋದರಿಗೆ ಸೂಚಿಸಿದ್ದ. ಅದರಂತೆ ಏಪ್ರಿಲ್ 2ರ ಮಧ್ಯರಾತ್ರಿ 1ಗಂಟೆ ಸುಮಾರಿಗೆ ನಗರದ ಕೆ.ಆರ್.ಪುರಂ ರೈಲುನಿಲ್ದಾಣದಲ್ಲಿ ಯುವತಿ ಇಳಿದಿದ್ದಳು. ರೈಲ್ವೆ ನಿಲ್ದಾಣದಿಂದ ಸಹೋದರಿಯನ್ನು ಕರೆದುಕೊಂಡು ಬರುತ್ತಿದ್ದ ಸಹೋದರ ಊಟ ಮಾಡಲು ಮಹದೇವಪುರ ಕಡೆಗೆ ನಡೆದುಕೊಂಡು ಹೋಗುತ್ತಿದ್ದರು.
ದಾರಿಮಧ್ಯೆ ಆರೋಪಿಗಳು ಅಣ್ಣ-ತಂಗಿಯನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ಯುವತಿಯ ಸಹೋದರನ ಮೇಲೆ ಹಲ್ಲೆ ಮಾಡಿ, ಯುವತಿಯನ್ನು ಎಳೆದೊಯ್ದು ನಿರ್ಜನ ಪ್ರದೇಶದಲ್ಲಿ ಆಕೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಯುವತಿ ಕಿರುಚಾಡಿದ್ದರಿಂದ ಸಾರ್ವಜನಿಕರು ಕಂಡು ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ ಎಂದು ವರದಿಯಾಗಿದೆ.