ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತಾಲ್ಲೂಕಿನ ಅಬ್ಬಿನಹೊಳೆ ಗ್ರಾಮದಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ವಾರ್ಷಿಕ ಬ್ರಹ್ಮರಥೋತ್ಸವವು ಏಪ್ರಿಲ್ 3ರ ಶುಕ್ರವಾರದಂದು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಲಿದೆ.
ಸ್ವಸ್ತಿಶ್ರೀ ಪರಾಭವನಾಮ ಸಂವತ್ಸರದ ಚೈತ್ರ ಶುದ್ಧ ತದಿಗೆಯ ಶುಭ ಸಂದರ್ಭದಲ್ಲಿ, ಮಾರ್ಚ್ 21ರಿಂದ ಏಪ್ರಿಲ್ 7ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಈಗಾಗಲೇ ಮಾ. 21ರಂದು ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಚಾಲನೆ ನೀಡಲಾಗಿದೆ. ಮಾ. 31ರಂದು ಅಂಕುರಾರ್ಪಣ, ಕಳಸ ಸ್ಥಾಪನೆ ಹಾಗೂ ಹೋಮಾದಿ ಕಾರ್ಯಕ್ರಮಗಳು ನಡೆಯದಿವೆ. ಏಪ್ರಿಲ್ 1ರಂದು ರಾತ್ರಿ ಗರುಡೋತ್ಸವ ಹಾಗೂ ಕಲ್ಯಾಣೋತ್ಸವ ಸೇವೆಗಳು ಜರುಗಲಿವೆ.
ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆ:
ಉತ್ಸವದ ಪ್ರಮುಖ ಘಟ್ಟವಾದ ಬ್ರಹ್ಮರಥೋತ್ಸವವು ಏಪ್ರಿಲ್ 3ರಂದು ಮಧ್ಯಾಹ್ನ 12:00 ಗಂಟೆಯ ಶುಭ ಲಗ್ನದಲ್ಲಿ ನೆರವೇರಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನದ ವತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಏ. 7ರ ಮಂಗಳವಾರ ಸಂಜೆ ಶ್ರೀ ಕಣಿವೆಮಾರಮ್ಮ ದೇವಿಗೆ ಸುಮಂಗಲೆಯರಿಂದ ಅಕ್ಕಿ ತಂಬಿಟ್ಟಿನ ಆರತಿ ಸೇವೆ ನಡೆಯುವುದರೊಂದಿಗೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಜಾತ್ರಾ ಪ್ರಯುಕ್ತ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ದೇವಸ್ಥಾನದ ಅಭಿವೃದ್ಧಿ ಸಮಿತಿ ಹಾಗೂ ಅಬ್ಬಿನಹೊಳೆ ಮತ್ತು ಕಂಬತ್ತನಹಳ್ಳಿ ಗ್ರಾಮಸ್ಥರು ಕಾರ್ಯಕ್ರಮದ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಮಂಡಳಿಯು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆಗಳಾದ 9980607889, 8762219413, 9448372586ಕರೆ ಮಾಡಬಹುದು.
ಏ. 3 ರಂದು ಅಂಬಲಗೆರೆ ಶ್ರೀರಂಗನಾಥಸ್ವಾಮಿ ಬ್ರಹ್ಮರಥೋತ್ಸವ
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕಿನ ಧಾರ್ಮಿಕ ಪುಣ್ಯಕ್ಷೇತ್ರವಾದ ಅಂಬಲಗೆರೆ ಗ್ರಾಮದಲ್ಲಿ ನೆಲೆಸಿರುವ ಶ್ರೀ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವವು ಏಪ್ರಿಲ್ 1 ರಿಂದ ಏಪ್ರಿಲ್ 4 ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ. ಪೂಜಾ ಕಾರ್ಯಕ್ರಮಗಳ ಪ್ರಮುಖ ಘಟ್ಟವಾದ ‘ಬ್ರಹ್ಮ ರಥೋತ್ಸವ‘ವು ಏಪ್ರಿಲ್ 3 ರಂದು ನಡೆಯಲಿದೆ ಎಂದು ದೇವಸ್ಥಾನದ ಸಮಿತಿ ತಿಳಿಸಿದೆ.
ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ 1948ನೇ ಶ್ರೀ ಪರಾಭವ ನಾಮ ಸಂವತ್ಸರದ ಚೈತ್ರ ಶುದ್ಧ ಚತುರ್ದಶಿಯ ಪ್ರಯುಕ್ತ ಈ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಏಪ್ರಿಲ್ 1 ರ ಬುಧವಾರ ರಾತ್ರಿ 8 ಗಂಟೆಗೆ ಗರುಡೋತ್ಸವದೊಂದಿಗೆ ಚಾಲನೆ ದೊರೆಯಲಿದೆ. ಏಪ್ರಿಲ್ 2 ರಂದು ರಾತ್ರಿ 10 ಗಂಟೆಗೆ ಪುಣ್ಯಾಹ, ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ ಹಾಗೂ ಕುಂಕುಮಾರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಲಿವೆ. ಗ್ರಾಮಸ್ಥರು ಹಾಗೂ ಭಕ್ತಾದಿಗಳಿಂದ ಅರತಿ ರಥೋತ್ಸವ ನೆರವೇರಲಿದೆ.
ಏಪ್ರಿಲ್ 3 ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ವೈಭವದ ಬ್ರಹ್ಮ ರಥೋತ್ಸವ ಜರುಗಲಿದ್ದು, ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಅಂದು ಸಹಸ್ರನಾಮ ಪೂಜೆ ಹಾಗೂ ರಾತ್ರಿ ಪಂಜಿನ ಸೇವೆ ನಡೆಯಲಿದೆ. ಏಪ್ರಿಲ್ 4 ರ ಶನಿವಾರದಂದು ಓಕುಳಿ ಬಂಡಿ ಕಾರ್ಯಕ್ರಮ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗದೊಂದಿಗೆ ಜಾತ್ರಾ ಮಹೋತ್ಸವವು ಮುಕ್ತಾಯಗೊಳ್ಳಲಿದೆ.
ಈ ಧಾರ್ಮಿಕ ಕೈಂಕರ್ಯಗಳಲ್ಲಿ ಅರ್ಚಕರಾದ ಎಸ್. ತಿಮ್ಮರಾಯಪ್ಪ ಮತ್ತು ಸಿಬ್ಬಂದಿ ವರ್ಗ, ಗ್ರಾಮದ ಆಡಳಿತಾಧಿಕಾರಿ ಹರ್ಷ ಜಿ., ಕಂದಾಯ ನಿರೀಕ್ಷಕ ಎನ್. ವರದರಾಜು, ಉಪ ತಹಶೀಲ್ದಾರ್ ನವೀನ್ ಕುಮಾರ್ ಡಿ. ಹಾಗೂ ಮುಜರಾಯಿ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಅಂಬಲಗೆರೆ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ.

