ಒಪ್ಪಿತ ಸಂಬಂಧಗಳಲ್ಲಿ ಪೊಕ್ಸೋ ಕಾಯ್ದೆ ದುರ್ಬಳಕೆ-ಸುಪ್ರೀಂ ಕಳವಳ

News Desk

ಒಪ್ಪಿತ ಸಂಬಂಧಗಳಲ್ಲಿ ಪೊಕ್ಸೋ ಕಾಯ್ದೆ ದುರ್ಬಳಕೆ-ಸುಪ್ರೀಂ ಕಳವಳ
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ವೈವಾಹಿಕ ಜಗಳ ಮತ್ತು ಹದಿಹರೆಯದರ ನಡುವಿನ ಒಪ್ಪಿತ ಸಂಬಂಧಗಳಲ್ಲಿ ಪೊಕ್ಸೋ ಕಾಯ್ದೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿ ಈ ಕಾಯ್ದೆ ಬಗ್ಗೆ ಪುರುಷರು ಮತ್ತು ಬಾಲಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಒತ್ತಿ ಹೇಳಿದೆ.

ದೇಶದಲ್ಲಿ ಬಾಲಕಿಯರು ಮತ್ತು ಮಹಿಳೆಯರಿಗೆ ಸುರಕ್ಷಿತ ತಾಣ ಒದಗಿಸಲು ಅತ್ಯಾಚಾರಕ್ಕೆ ಶಿಕ್ಷೆ ವಿಧಿಸುವ ನಿಬಂಧನೆಗಳು ಮತ್ತು ಪೊಕ್ಸೋ ಕಾಯ್ದೆಯ ಬಗ್ಗೆ ಜನರನ್ನು ಸಂವೇದನಾಶೀಲಗೊಳಿಸಲು ನಿರ್ದೇಶನಗಳನ್ನು ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ. ವಿ. ನಾಗರತ್ನ ಮತ್ತು ಆರ್ ಮಹಾದೇವನ್ ಅವರ ಪೀಠವು ಮಂಗಳವಾರ  ನಡೆಸಿತು.

- Advertisement - 

ನಾವು ಒಂದು ವಿಷಯ ಗಮನಿಸಿದ್ದೇವೆ. ವೈವಾಹಿಕ ವೈಮನಸ್ಸು ಪ್ರಕರಣಗಳಲ್ಲಿ ಮತ್ತು ಹದಿಹರೆಯದವರ ನಡುವಿನ ಒಮ್ಮತದ ಸಂಬಂಧಗಳ ವಿಷಯಗಳಲ್ಲಿ ಪೊಕ್ಸೋ ಕಾಯ್ದೆ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಈ ಕಾನೂನಿನ ಬಗ್ಗೆ ಬಾಲಕರು ಮತ್ತು ಪುರುಷರಲ್ಲಿ ಜಾಗೃತಿ ಮೂಡಿಸಬೇಕು ಎಂದು ಪೀಠ ಮೌಖಿಕವಾಗಿ ಸೂಟನೆ ನೀಡಿದೆ.

ಈ ವಿಷಯದಲ್ಲಿ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿಕ್ರಿಯೆಯನ್ನು ಸಲ್ಲಿಸಿಲ್ಲ ಎಂದು ತಿಳಿಸಿ, ಪಿಐಎಲ್ ಮುಂದಿನ ವಿಚಾರಣೆ ಡಿಸೆಂಬರ್ 2ಕ್ಕೆ ಸುಪ್ರೀಂ ಮುಂದೂಡಿ ಆದೇಶಿಸಿತು.

- Advertisement - 

ಹಿರಿಯ ವಕೀಲ ಆಬಾದ್ ಹರ್ಷದ್ ಪೊಂಡಾ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಸುಪ್ರೀಂ ಕೋರ್ಟ್ ಈ ಹಿಂದೆ ಕೇಂದ್ರ, ಶಿಕ್ಷಣ ಮತ್ತು ಮಾಹಿತಿ ಹಾಗೂ ಪ್ರಸಾರ ಸಚಿವಾಲಯಗಳು, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ)ಗೆ ನೋಟಿಸ್ ಜಾರಿ ಮಾಡಿತ್ತು.

ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನುಗಳು ಮತ್ತು ಅದರಲ್ಲಿನ ಬದಲಾವಣೆಯ ಬಗ್ಗೆ ನಿರ್ಭಯಾ ಪ್ರಕರಣದ ನಂತರ ಜನರಿಗೆ ತಿಳಿಸುವ ಅಗತ್ಯವಿದೆ ಎಂದು ಪೊಂಡಾ ಹೇಳಿದರು.

14 ವರ್ಷ ವಯಸ್ಸಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವ ಎಲ್ಲಾ ಶಿಕ್ಷಣ ಸಂಸ್ಥೆಗಳು ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳಿಗೆ ಸಂಬಂಧಿಸಿದ ದಂಡದ ನಿಬಂಧನೆಗಳನ್ನು ಸೇರಿಸಲು ಶಿಕ್ಷಣ ಸಚಿವಾಲಯಕ್ಕೆ ನಿರ್ದೇಶನ ನೀಡುವುದು ಸೇರಿದಂತೆ ಹಲವಾರು ಕ್ರಮಗಳ ಬಗ್ಗೆ ಅರ್ಜಿಯಲ್ಲಿ ಕೋರಲಾಗಿದೆ.

ಮಹಿಳೆಯರ ಮತ್ತು ಬಾಲಕಿಯರ ಲೈಂಗಿಕ ಸಮಾನತೆ, ಹಕ್ಕುಗಳು ಮತ್ತು ಘನತೆಯಿಂದ ಬದುಕುವ ಅವರ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಲು ನೈತಿಕ ತರಬೇತಿ ವಿಷಯ ಸಹ ಸೇರಿಸಬೇಕಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಈ ದೇಶದಲ್ಲಿ ಹುಡುಗರ ಮನಸ್ಥಿತಿ ಬದಲಾಯಿಸಲು ವಿಶೇಷವಾಗಿ ಪ್ರಯತ್ನ ಮಾಡಬೇಕಾಗಿದೆ, ಇದು ಶಾಲಾ ಹಂತದಿಂದಲೇ ಪ್ರಾರಂಭವಾಗಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅತ್ಯಾಚಾರದ ಮೂರ್ಖತನ ಮತ್ತು ಅದಕ್ಕೆ ವಿಧಿಸಲಾಗುವ ಶಿಕ್ಷೆಗಳ ಬಗ್ಗೆ ಜಾಗೃತಿ ಮೂಡಿಸಲು, ಪೊಕ್ಸೋ ಕಾಯ್ದೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಸಿಬಿಎಫ್‌ಸಿ ಮತ್ತು ಇತರ ಪ್ರಸಾರ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಲಾಗಿತ್ತು.

 

Share This Article
error: Content is protected !!
";