ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಾರ್ಮಿಕ ಇಲಾಖೆ ವತಿಯಿಂದ ದಿನಪತ್ರಿಕೆ ವಿತರಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆ ರಾಜ್ಯದ ನಿವಾಸಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಅರ್ಜಿದಾರರ ವಯೋಮಿತಿ 16 ರಿಂದ 59 ವರ್ಷದ ಒಳಗಿರಬೇಕು. ಕೇಂದ್ರ ಸರ್ಕಾರದ ಇ–ಶ್ರಮ್ ಪೋರ್ಟಲ್ನಲ್ಲಿ “News paper boy” ಎಂಬ ವರ್ಗದಡಿ ನೊಂದಣಿಯಾಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಹುದು. ಇ.ಎಸ್.ಐ ಮತ್ತು ಇ.ಪಿ.ಎಫ್ ಸೌಲಭ್ಯ ಹೊಂದಿರಬಾರದು.
ಯೋಜನೆಯಡಿ ನೋಂದಣಿಯಾದ ದಿನಪತ್ರಿಕೆ ವಿತರಕರಿಗೆ ಅಪಘಾತ ಪರಿಹಾರವಾಗಿ ಮರಣ ಹೊಂದಿದಲ್ಲಿ ನಾಮ ನಿರ್ದೇಶಿತರಿಗೆ ರೂ.2 ಲಕ್ಷ ಪರಿಹಾರ, ಅಪಘಾತದಲ್ಲಿ ಸಂಪೂರ್ಣ ಅಥವಾ ಭಾಗಶಃ ದುರ್ಬಲತೆ ಹೊಂದಿದಲ್ಲಿ ಶೇಕಡವಾರು ದುರ್ಬಲತೆ ಆಧಾರದ ಮೇಲೆ ರೂ.2 ಲಕ್ಷದ ವರೆಗೆ ಪರಿಹಾರ, ರೂ.1 ಲಕ್ಷದವರೆಗೆ ಆಸ್ಪತ್ರೆ ವೆಚ್ಚ ಮರುಪಾವತಿ ದೊರಕಲಿದೆ. ಎಲ್ಲಾ ಪತ್ರಿಕಾ ವಿತರಕರು ಇ–ಶ್ರಮ್ ಪೋರ್ಟ್ಲ್ನಲ್ಲಿ ಸ್ವಯಂಯಾಗಿ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೊಂದಾಯಿಸಿ ಯೋಜನೆಯ ಪ್ರಯೋಜನ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿ, ಕಾರ್ಮಿಕ ನಿರೀಕ್ಷಕರು ಅಥವಾ ತಾಲ್ಲೂಕು ಮಟ್ಟದ ಕಾರ್ಮಿಕ ಇಲಾಖೆ ಕಚೇರಿಗಳಿಗೆ ಭೇಟಿ ನೀಡಬಹುದು. ಸಹಾಯವಾಣಿ ಸಂಖ್ಯೆ 155214 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.