ಚಂದ್ರವಳ್ಳಿ ನ್ಯೂಸ್, ರಾಮನಗರ:
ಚಲಿಸುತ್ತಿದ್ದ ರೈಲಿನ ಇಂಜಿನ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಗುರುವಾರ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬಳಿ ನಡೆದಿದೆ. ಪೈಲಟ್ ತಕ್ಷಣವೇ ರೈಲು ನಿಲ್ಲಿಸಿ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆಯ (ರಾಮನಗರ) ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಬಳಿ ಘಟನೆ ಜರುಗಿದೆ. ಮೈಸೂರು ಮೂಲಕ ರಾಜಸ್ತಾನದ ಉದಯಪುರಕ್ಕೆ ರೈಲು ತೆರಳುತ್ತಿತ್ತು.
ಈ ವೇಳೆ ರೈಲಿನ ಇಂಜಿನ್ನಲ್ಲಿ ಹಠಾತ್ ಬೆಂಕಿ ಕಾಣಿಸಿದೆ. ಮುಂದಿನ ಭಾಗದಲ್ಲಿ ದಟ್ಟ ಹೊಗೆ ಆವರಿಸಿದ ತಕ್ಷಣವೇ ಸಮಯಪ್ರಜ್ಞೆ ಮೆರೆದ ಚಾಲಕ ರೈಲನ್ನು ನಿಲ್ಲಿಸಿ ರೈಲ್ವೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದಾನೆ. ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಈ ಮೂಲಕ ದೊಡ್ಡ ದುರಂತವೊಂದು ತಪ್ಪಿ ಹೋಗಿದ್ದು ಚಾಲಕರ ಸಮಯ ಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ರೈಲಿಗೆ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ. ರೈಲಿನಲ್ಲಿ ನೂರಾರು ಪ್ರಯಾಣಿಕರು ಆಕಸ್ಮಿಕ ಘಟನೆಯಿಂದ ಆತಂಕಕ್ಕೀಡಾಗಿದ್ದರು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸದೆ ಪಾರಾಗಿದ್ದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.
ರೈಲ್ವೆ ಇಂಜಿನ್ಗೆ ಬೆಂಕಿ ಹೊತ್ತಿಕೊಂಡಿದ್ದು, ಹಳಿಗಳ ಪಕ್ಕದ ಕಟ್ಟಡದಲ್ಲಿನ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಬೆಂಕಿಯಿಂದ ಎಂಜಿನ್ನ ಭಾಗ ಹಾನಿಗೀಡಾಗಿದೆ. ಸ್ಥಳಕ್ಕೆ ರೈಲ್ವೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ, ಉನ್ನತ ಮಟ್ಟದ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.