ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಭದ್ರಾ ಜಲಾಶಯದ ಬಲದಂಡೆ ಕಾಲುವೆ ಸೀಳಿ ನೀರನ್ನು ಬೇರೆಡೆ ಹರಿಸಲು ಮುಂದಾಗಿರುವ ಕಾಮಗಾರಿ ವಿರೋಧಿಸಿದ ದಾವಣಗೆರೆ ಭದ್ರಾ ಕಾಲುವೆ ಬಲದಂಡೆ ನಾಲೆಯ ಕೊನೆ ಭಾಗದ ರೈತರ ನಿಯೋಗವು ಬೆಂಗಳೂರಿನ ಕುಮಾರಕೃಪಾ ಸರ್ಕಾರಿ ನಿವಾಸದಲ್ಲಿ ರೈತರು, ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನ ನಿವಾಸದಲ್ಲಿ ರೈತರೊಂದಿಗೆ ಮಹತ್ವದ ಸಭೆ ನಡೆಸಿದರು.
ಭದ್ರಾ ಬಲದಂಡೆ ಕಾಲುವೆಯನ್ನು ತಿರುಗಿಸಿ ಅಲ್ಲಿಂದ ತರೀಕೆರೆ, ಅಜ್ಜಂಪುರ, ಹೊಸದುರ್ಗದ 1,200 ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಯೋಜಿಸಲಾಗಿದೆ. ಇದು ಜಿಲ್ಲೆಯ ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರಿಗೆ ನೀರು ತಲುಪುವುದು ಅನುಮಾನ. ಈ ಸಮಸ್ಯೆಯನ್ನು ತಪ್ಪಿಸುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ರೈತರು ಮನವಿ ಮಾಡಿದರು.
ಜಲಸಂಪನ್ಮೂಲ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಈ ಸಂದರ್ಭದಲ್ಲಿ ರೈತರ ಅಹವಾಲುಗಳನ್ನು ಆಲಿಸಿ ಮಾತನಾಡಿ ಭದ್ರಾ ಯೋಜನೆ ರೈತರ, ಅಲ್ಲಿನ ಸುತ್ತಮುತ್ತಲಿನ ಗ್ರಾಮಸ್ಥರ ಅನುಕೂಲಕ್ಕಾಗಿ ಕೈಗೊಳ್ಳುತ್ತಿರುವ ಯೋಜನೆ ಆಗಿದೆ.
ನಮ್ಮ ಸರ್ಕಾರ ರೈತರ ಹಿತ ಕಾಪಾಡಲು ಬದ್ಧವಾಗಿದೆ. ಈ ಭಾಗದ ರೈತರ ಅಹವಾಲುಗಳನ್ನು ಆಲಿಸಿದ್ದು, ಯೋಜನೆಯಿಂದ ಯಾವುದೇ ಅನಾನುಕೂಲಗಳು ಆಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.
ಹೊಸದುರ್ಗ, ತರೀಕೆರೆ, ಅಜ್ಜಂಪುರ ಭಾಗದ ಜನಪ್ರತಿನಿಧಿಗಳು ನಮಗೆ ನೀರು ಹರಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇತ್ತ ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರು ಈ ಕಾಮಗಾರಿ ನಿಲ್ಲಿಸಿ ಎಂದು ಒತ್ತಾಯಿಸುತ್ತಿದ್ದೀರಿ. ಇದು ಇಕ್ಕಟ್ಟಿನ ಪರಿಸ್ಥಿತಿ ಉಂಟಾಗಿದೆ ಎಂದರು.
ಕೊನೆ ಭಾಗದ ರೈತರ ಪರಿಸ್ಥಿತಿ ಅರ್ಥವಾಗುತ್ತದೆ. ಮಂಡ್ಯದಲ್ಲೂ ಇಂಥದ್ದೇ ಸಮಸ್ಯೆ ಎದುರಾಗಿತ್ತು. ದೊಡ್ಡ ಹೋರಾಟ ಮಾಡಿ ನೀರು ಹರಿಸಿದ್ದೇವೆ. ನಾನು ಸ್ಥಳಪರಿಶೀಲನೆ ನಡೆಸಲಿದ್ದೇನೆ. ನೀವು ಯಾರು ಅಲ್ಲಿಗೆ ಬರಬಾರದು. ಬಂದು ಅಲ್ಲಿನ ಜನರೊಂದಿಗೆ ವಾಗ್ವಾದ ಮಾಡಬಾರದು. ಸ್ಥಳ ಪರಿಶೀಲನೆ ಬಳಿಕ ನಿರ್ಧಾರ ಕೈಗೊಳ್ಳೋಣ ಎಂದು ಡಿಸಿಎಂ ಶಿವಕುಮಾರ್ ತಿಳಿಸಿದರು.
ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮಾತನಾಡಿ, ಹೊನ್ನಾಳಿ, ಚನ್ನಗಿರಿ, ದಾವಣಗೆರೆ, ಹರಪನಹಳ್ಳಿ, ಹರಿಹರ ತಾಲೂಕುಗಳು ಭದ್ರಾದ ಜೀವನಾಡಿ. ಭದ್ರಾ ನೀರು ಬಳಸಿಕೊಂಡು ಭತ್ತ, ಅಡಿಕೆ ಬೆಳೆಯಲಾಗುತ್ತದೆ. ಕುಡಿಯುವ ನೀರಿಗೆ ನಮ್ಮ ವಿರೋಧ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆ ಮೂಲಕ 15 ಟಿಎಂಸಿ ನೀರು ಬರಬೇಕು. ಅದು ಕೂಡ ಬಂದಿಲ್ಲ ಎಂದು ಸಚಿವರು ತಿಳಿಸಿದರು.
ಕಾಮಗಾರಿ ಸ್ಥಳದಿಂದ 100 ಮೀಟರ್ ದೂರದಲ್ಲಿರುವ ಭದ್ರಾ ನದಿ ಬಳಿ ಜಾಕ್ವೆಲ್ ಮಾಡಿ, ಅದನ್ನು ಬಿಟ್ಟು ಬಲದಂಡೆಯ ಕೆಳ ಭಾಗದಲ್ಲಿ ಕಾಮಗಾರಿ ಮಾಡಿದ್ದಾರೆ. ಈ ರೀತಿ ಮಾಡಿದರೆ ನೀರು ಬರುವುದಿಲ್ಲ. ರೈತರು ನಾಟಿ ಮಾಡಲು ಸಿದ್ಧರಾಗಿದ್ದಾರೆ. ಕಾಲುವೆ ಒಡೆದು ಕಾಮಗಾರಿ ಮಾಡಿದ್ದಾರೆ. ಸ್ಥಳ ಪರಿಶೀಲನೆ ಮಾಡಿ ಒಂದು ನಿರ್ಣಯ ಕೈಗೊಳ್ಳಿ ಎಂದು ಡಿಕೆ ಶಿವಕುಮಾರ್ ಅವರ ಬಳಿ ಸಚಿವರು ಮನವಿ ಮಾಡಿದರು.
ಹರಿಹರದ ಮಾಜಿ ಶಾಸಕ ಎಸ್.ರಾಮಪ್ಪ, ರೈತ ಮುಖಂಡರಾದ ಮುದೇಗೌಡ್ರ ಗಿರೀಶ್, ಮಾಗನಹಳ್ಳಿ ಪರಶುರಾಮ್, ನಂದಿಗಾವಿ ಶ್ರೀನಿವಾಸ್, ತೇಜಸ್ವಿ ಪಟೇಲ್ ಸೇರಿದಂತೆ ನೂರಾರು ರೈತರು ನಿಯೋಗದಲ್ಲಿದ್ದರು.