ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶೈಕ್ಷಣಿಕ ವರ್ಷದಲ್ಲಿ ಮೊದಲನೇ ಹಂತದಲ್ಲಿ ಜಿಲ್ಲಾವಾರು ಬೇಡಿಕೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ. ಖಾಲಿ ಇರುವ ಹುದ್ದೆಗಳಿಗೆ ಎದುರಾಗಿ ಈಗಾಗಲೇ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡು ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವರು ತಿಳಿಸಿದರು.
ಇಂದು ವಿಧಾನಸಭೆಯ ಕಲಾಪದ ಪ್ರಶ್ನೋತ್ತರ ವೇಳೆಯಲ್ಲಿ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಯ್ಯ ಇವರ ಪ್ರಶ್ನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರ ಪರವಾಗಿ ಉತ್ತರಿಸಿದ ಉನ್ನತ ಶಿಕ್ಷಣ ಸಚಿವರು, ಪ್ರಸ್ತುತ ಶೈಕ್ಷಣಿಕ ವರ್ಷದ ವರ್ಗಾವಣೆ ಮತ್ತು ಹೆಚ್ಚುವರಿ ಶಿಕ್ಷಕರ ಮರು ಹೊಂದಾಣಿಕೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು,
ಖಾಲಿ ಇರುವ 38666 ಹುದ್ದೆಗಳಿಗೆ ಎದುರಾಗಿ ಶೇ 90%ನ್ನು 34027 ಅತಿಥಿ ಶಿಕ್ಷಕರನ್ನು (ಪಿ.ಎಸ್.ಟಿ ಮತ್ತು ಜಿಪಿಟಿ ಸೇರಿದಂತೆ) ಮೊದಲನೇ ಹಂತದಲ್ಲಿ ಜಿಲ್ಲಾವಾರು ಬೇಡಿಕೆಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ. ಉಳಿದ ಶೇ 10 ಪ್ರಸ್ತುತ ಶೈಕ್ಷಣಿಕ ವರ್ಷದ ವರ್ಗಾವಣೆ ಪ್ರಕ್ರಿಯೆಯ ನಂತರ ಅಗತ್ಯಗೆ ಅನುಗುಣವಾಗಿ ಹುದ್ದೆ ಹಂಚಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

