ಪಶು ವೈದ್ಯಾಧಿಕಾರಿಗಳ ನೇಮಕಕ್ಕೆ ಕ್ರಮ- ಸಚಿವ ಕೆ.ವೆಂಕಟೇಶ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಶು ಸಂಗೋಪನೆ ಇಲಾಖೆಯಲ್ಲಿ ಖಾಲಿಯಿರುವ 400 ಪಶು ವೈದ್ಯಾಧಿಕಾರಿಗಳನ್ನು ಕರ್ನಾಟಕ ಲೋಕ ಸೇವಾ ಆಯೋಗದ ಮುಖಾಂತರ ಭರ್ತಿ ಮಾಡಲು ಕ್ರಮ ವಹಿಸಲಾಗಿದ್ದು, ದಿನಾಂಕ: 08-04-2025 ರಿಂದ 09-4-2025ರವರೆಗೆ ಪರೀಕ್ಷೆಗಳನ್ನು ನಡೆಸಲು ತಾತ್ಕಾಲಿಕವಾಗಿ ದಿನಾಂಕಗಳನ್ನು ನಿಗದಿಪಡಿಸಲಾಗಿರುತ್ತದೆ ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವರಾದ ಕೆ.ವೆಂಕಟೇಶ್ ತಿಳಿಸಿದರು.

ಇಂದು ವಿಧಾನ ಸಭೆಯಲ್ಲಿ ಪ್ರಶ್ತೋತ್ತರ ವೇಳೆಯಲ್ಲಿ ಗುರುಮಿಠಕಲ್ ಕ್ಷೇತ್ರದ ಶರಣಗೌಡ ಕಂದಕೂರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಲೋಕ ಸೇವಾ ಆಯೋಗದ ಮೂಲಕ ಭರ್ತಿ ಮಾಡುವವರೆಗೂ ಗುತ್ತಿಗೆ ಆಧಾರದಲ್ಲಿ ಪಶುವೈದ್ಯಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಕ್ರಮವಹಿಸಲಾಗಿದೆ.

360 ಪಶು ವೈದ್ಯಾಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಿರುತ್ತಾರೆ. ಕಲ್ಯಾಣ ಕರ್ನಾಟಕ ಅನುಚ್ಛೇದ371(ಜೆ)ರಡಿ 32 ಪಶುವೈದ್ಯಕೀಯ ಪರೀಕ್ಷಕರ ಹುದ್ದೆಗಳಿಗೆ ವಿಶೇಷ ನೇಮಕಾತಿಯಡಿ ನೇಮಕಾತಿ ಮಾಡಿಕೊಳ್ಳಲು ಕ್ರಮ ವಹಿಸಲಾಗಿದ್ದು, 27 ಅರ್ಹ ಅಭ್ಯರ್ಥಿಗಳಿಗೆ ಆದೇಶವನ್ನು ನೀಡಲಾಗಿದೆ. ಉಳಿದ 5 ಅಭ್ಯರ್ಥಿಗಳಿಗೆ ಸಿಂಧುತ್ವ ಪ್ರಮಾಣ ಪತ್ರಗಳ ವರದಿ ಬಂದ ನಂತರ ಆದೇಶ ಪತ್ರ ನೀಡಲಾಗವುದು. 700 ಡಿ ದರ್ಜೆ ನೌಕರರನ್ನು ಹೊರಗುತ್ತಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಪ್ರಸ್ತಾವನೆಯು ಪರಿಶೀಲನೆಯಲ್ಲಿರುತ್ತದೆ. ಯಾದಗಿರಿ ಜಿಲ್ಲೆಯಲ್ಲಿ 60 ಡಿ ದರ್ಜೆ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

Share This Article
error: Content is protected !!
";