ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ನಾಯಕರು ಟಾರ್ಗೆಟ್ ಮಾಡಿ ಸದೆಬಡಿಯುವಕೆಲಸ ನಡೆಯುತ್ತಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿಯ ಸಕ್ರಿಯ ಕಾರ್ಯಕರ್ತ ವಿನಯ್ ಸೋಮಯ್ಯ ಕಾಂಗ್ರೆಸ್ ಶಾಸಕರ ಬೆಂಬಲಿಗರ ವಿರುದ್ಧ ಆರೋಪಗಳನ್ನು ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಅಂತಿಮ ದರ್ಶನ ಪಡೆದ ಬಳಿಕ ಅವರು ಮಾಧ್ಯಮದವರೊಂದಿಗೆ ಛಲವಾದಿ ನಾರಾಯಣಸ್ವಾಮಿ ಮಾತನಾಡಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಿಂದಾಗಿ ಕಾಂಗ್ರೆಸ್ ಪಕ್ಷದ ನಾಯಕರು, ಶಾಸಕರ ಅಧಿಕಾರದ ಅಟ್ಟಹಾಸ ಹೆಚ್ಚಾಗಿದೆ ಎಂದು ಅವರು ಆರೋಪಿಸಿದರು.
ಈ ಹಿಂದೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಹೆಸರು ಉಲ್ಲೇಖಿಸಿ ಪಿಎಸ್ಐ ಪರಶುರಾಮ್ ಆತ್ಮಹತ್ಯೆಗೆ ಶರಣಾದರು. ಬೆಳಗಾವಿಯಲ್ಲಿ ರುದ್ರಣ್ಣ ಯಡವಣ್ಣ ಎಂಬವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕನ ಹೆಸರು ಉಲ್ಲೇಖಿಸಿ ಆತ್ಮಹತ್ಯೆಗೆ ಶರಣಾದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಹಾಗೂ ಸಚಿವ ಬಿ.ನಾಗೇಂದ್ರ ಹೆಸರು ಉಲ್ಲೇಖಿಸಿ ಚಂದ್ರಶೇಖರ್ ಎಂಬ ಅಧಿಕಾರಿ ಆತ್ಮಹತ್ಯೆಗೆ ಶರಣಾದರು. ಆ ಯಾವ ಪ್ರಕರಣಗಳೂ ನ್ಯಾಯ ಸಮ್ಮತವಾಗಿ ತನಿಖೆ ಆಗಿಲ್ಲ ಮತ್ತು ಸೂಕ್ತವಾಗಿ ಇತ್ಯರ್ಥವಾಗಲಿಲ್ಲ. ಈಗ ವಿನಯ್ ಸೋಮಯ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ನಾರಾಯಣಸ್ವಾಮಿ ತಿಳಿಸಿದರು.
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಜಾಮೀನು ಪಡೆದು ಬಂದ ಬಳಿಕವೂ ಬಂಧನದ ಬೆದರಿಕೆ, ರೌಡಿಶೀಟ್ ತೆರೆಯುವ ಬೆದರಿಕೆಯನ್ನು ಪೊಲೀಸರು ಹಾಕಿದ್ದಾರೆ. ಆ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ವಿನಯ್ ಸೋಮಯ್ಯ ತಮ್ಮ ಡೆತ್‌ನೋಟ್‌ನಲ್ಲಿ ಶಾಸಕರೂ ಸೇರಿದಂತೆ ಯಾರ್ಯಾರ ಹೆಸರುಗಳನ್ನು ಬರೆದಿದ್ದಾರೋ ಅವರೆಲ್ಲರ ಬಂಧನವಾಗಬೇಕು ಎಂದು ವಿಪ ಸದಸ್ಯರು ಆಗ್ರಹಿಸಿದರು.