ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮೂರು ವಿಧಾನಸಭಾ ಕ್ಷೇತ್ರಗಳ ಎನ್ ಡಿಎ ಅಭ್ಯರ್ಥಿಗಳ ಸೋಲು ಒಂದು ಕಡೆಯಾದರೆ ಬಿಜೆಪಿಯಲ್ಲಿನ ಒಳ ಜಗಳ ಬಿಜೆಪಿ ನಾಯಕರಿಗೆ ಸಂಕಷ್ಟ ತಂದೊಡ್ಡಿದೆ.
ರಾಜ್ಯದಲ್ಲಿ ರೈತರು, ಮಠ ಮಾನ್ಯಗಳು, ದೇವಸ್ಥಾನಗಳು, ಸರ್ಕಾರಿ ಗೋಮಾಳವನ್ನು ವಕ್ಫ್‌ಮಂಡಳಿಗೆ ಪಹಣಿ ಮಾಡುತ್ತಿರುವ ವಿವಾದ ಗಲಾಟೆ ಮುಗಿದಿಲ್ಲ. ವಕ್ಫ್ ಮಂಡಳಿ, ರಾಜ್ಯ ಕಾಂಗ್ರೆಸ್‌ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಿದೆ. ಆದರೆ ಈ ಮಧ್ಯೆ ಬಿಜೆಪಿ ಬಣಗಳ ಮಧ್ಯೆಯೇ ಸಂಘರ್ಷ ಉಂಟಾಗಿರುವುದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ತಂಡದಿಂದ ಪ್ರತಿಭಟನೆ ಮಾಡಿದರೆ, ಬಿಜೆಪಿ ರಾಜ್ಯಾಧ್ಯಕ್ಷ ವಿವೈ ವಿಜಯೇಂದ್ರ ನೇತೃತ್ವದಲ್ಲೂ ವಕ್ಫ್ ಮಂಡಳಿ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.
ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಜಯೇಂದ್ರ ವಿರುದ್ಧ ತೀವ್ರ ರೀತಿಯಲ್ಲಿ ಟೀಕಿಸುತ್ತಿದ್ದರೆ ಅತ್ತ ಮಂಡ್ಯ ಬಿಜೆಪಿ ಕಾರ್ಯಕರ್ತರು ಯತ್ನಾಳ್ ವಿರುದ್ಧ ಸಿಡಿದೆದ್ದಿದ್ದಾರೆ.
ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಕಳೆದ ಕೆಲವು ದಿನಗಳಿಂದ ವಕ್ಫ್‌ವಿರುದ್ಧ ಪ್ರತಿಭಟನೆ ಮಾಡುತ್ತಲೇ ಇದ್ದಾರೆ. ಆದರೆ ಬಿಜೆಪಿ ಅಧಿಕಾರದ ಹಂಚಿಕೆಯ ಮನಸ್ತಾಪದಿಂದಾಗಿ ಇಂದು ಭಾರತೀಯ ಜನತಾ ಪಾರ್ಟಿ ಒಡೆದ ಮನೆಯಂತಾಗಿದೆ. ಈ ಪರಿಣಾಮ ಎರಡು ಬಣಗಳಾಗಿ ರೂಪುಗೊಂಡಿದೆ. ಅತ್ತ ರೆಬೆಲ್‌ಟೀಮ್‌ಕೆಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಬಿಜೆಪಿ ನಾಯಕ ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರ ವಿರುದ್ಧ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.
ಶಿಸ್ತುಕ್ರಮಕ್ಕೆ ರಕ್ತದ ಸಹಿ!
ಯತ್ನಾಳ್‌ವಿರುದ್ಧ ಸೂಕ್ತ ಶಿಸ್ತುಕ್ರಮ ಕೈಗೊಳ್ಳುವಂತೆ ಬಿಜೆಪಿ ಕಾರ್ಯಕರ್ತರು ಸಿಡಿದೆದ್ದಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರಿಗೆ ಬಿಜೆಪಿ ಕಾರ್ಯಕರ್ತರು ರಕ್ತದಿಂದ ಸಹಿ ಮಾಡಿ ಪತ್ರವನ್ನೂ ಕಳುಹಿಸಿದ್ದಾರೆ.
ಬಸವನಗೌಡ ಪಾಟೀಲ್ ಯತ್ನಾಳ್ ಮಾತಿಗೆ ಕಡಿವಾಣ ಹಾಕಲು, ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬಗ್ಗೆ ನೀಡುತ್ತಿರುವ ಹೇಳಿಕೆ ಕುರಿತು ಯತ್ನಾಳ್ ವಿರುದ್ದ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಅಮಿತ್ ಷಾ ಗೆ ಮಂಡ್ಯ ಬಿಜೆಪಿ ಕಾರ್ಯಕರ್ತರು ಪತ್ರ ಬರೆದಿದ್ದಾರೆ.