ಬಳ್ಳಾರಿ ಜೈಲು ಕಷ್ಟ, ಆರೋಗ್ಯ ಹದಗೆಡ್ತಿದೆ, ಬೇರೆ ಕಡೆ ಶಿಫ್ಟ್ ಮಾಡಿ: ನಟ ದರ್ಶನ್
ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ನಟ ದರ್ಶನ್ ಗೆ ರಾಜಾತಿಥ್ಯ ನೀಡಿದ ಹಿನ್ನೆಲೆಯಲ್ಲಿ ನಟ ದರ್ಶನ್ ರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಆದರೆ ಬಳ್ಳಾರಿ ಜೈಲಿನಲ್ಲಿ ಇರಲು ನಟ ದರ್ಶನ್ ಗೆ ಕಷ್ಟವಾಗುತ್ತಿದೆಯಂತೆ.
ಹೌದು, ಹೀಗೆ ನಟ ದರ್ಶನ್ ಅವರೇ ನೋವು ತೋಡಿಕೊಂಡಿದ್ದಾರಂತೆ. ಬಳ್ಳಾರಿ ಜೈಲಿನಲ್ಲಿರಲು ಕಷ್ಟವಾಗುತ್ತಿದೆ. ನನ್ನ ಆರೋಗ್ಯವೂ ಹದಗೆಡುತ್ತಿದೆ. ಬೆಂಗಳೂರಿನಿಂದ ಕುಟುಂಬ ಸದಸ್ಯರು ಬಳ್ಳಾರಿಗೆ ಬರುವುದು ತೀವ್ರ ಸಮಸ್ಯೆಯಾಗಿದೆ. ಹೀಗಾಗಿ ನನ್ನನ್ನು ಬೆಂಗಳೂರು ಅಥವಾ ಸುತ್ತಮುತ್ತಲಿನ ಜೈಲಿಗೆ ಶಿಫ್ಟ್ ಮಾಡಿ ಎಂದು ನಟ ದರ್ಶನ್ ಕೋರಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಜೈಲು ಸ್ಥಳಾಂತರ ಕೋರಿ ನ್ಯಾಯಾಲಯಕ್ಕೆ ನಟ ದರ್ಶನ್ ಮೊರೆ ಹೋಗುವ ಸಾಧ್ಯತೆಯಿದೆ.
ಬಳ್ಳಾರಿ ಜೈಲು ಪಾಲಾದ ಬಳಿಕ ಮಾನಸಿಕವಾಗಿ ಕುಗ್ಗಿ ಹೋಗಿರುವ ದರ್ಶನ್ ಗೆ ಜೈಲಿನ ನಿಯಮಗಳು ನುಂಗದ ತುತ್ತಾಗಿ ಪರಿಣಮಿಸಿದೆ. ತನ್ನ ಬಟ್ಟೆಯನ್ನು ತಾನೇ ಶುಭ್ರ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಜೈಲಿನಲ್ಲಿ ಎಲ್ಲ ಕೈದಿಗಳಿಗೆ ನೀಡುವ ಊಟವನ್ನೇ ಸೇವಿಸುವುದು ಕಷ್ಟವಾಗಿದ್ದರೂ ವಿಧಿಯಿಲ್ಲದೆ ಊಟ, ಉಪಹಾರ ಮಾಡುವಂತಾಗಿದೆ.
ಇನ್ನು ಟಿವಿ ನೀಡದಿರುವುದಕ್ಕೆ ನಟ ದರ್ಶನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ವಿಚಾರಣಾಧೀನ ಕೈದಿಗಳಿಗೆ ಟಿವಿ ನೀಡಬೇಕು ಎನ್ನುವ ನಿಯಮವಿದ್ದರೂ ಏಕೆ ನೀಡುತ್ತಿಲ್ಲ.
ಅದಕ್ಕೂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಬೇಕಾ ಎಂದು ಪ್ರಶ್ನಿಸಿದ್ದು, ನಾನು ಜೈಲು ಅಧೀಕ್ಷಕರ ಜೊತೆ ಮಾತನಾಡಬೇಕು. ಅವಕಾಶ ಮಾಡಿಕೊಡಿ ಎಂದು ನಟ ದರ್ಶನ್ ಜೈಲು ಸಿಬ್ಬಂದಿಗೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.