ಗಣಿ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ನಟ ಅಹಿಂಸಾ ಚೇತನ್

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಗಣಿ ಧಣಿ ಜನಾರ್ಧನರೆಡ್ಡಿ ವಿರುದ್ದ ತೊಡೆ ತಟ್ಟಿ ರಾಜಧಾನಿಯಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದ ಮೇಲೆ ಗಣಿ ಧಣಿಗಳ ವಿರುದ್ದ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆಂದು ನಟ ಅಹಿಂಸಾ ಚೇತನ್ ವಿಷಾದಿಸಿದರು.

ಕರ್ನಾಟಕ ರಾಜ್ಯ ಗಣಿ ಭಾದಿತ ಹೋರಾಟ ಸಮಿತಿಯಿಂದ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ ಗಣಿ ಬಾಧಿತ ಪ್ರದೇಶಗಳ ಜನರ ಸಂಕಷ್ಟಗಳು, ಪರಿಸರ ಅಸಮತೋಲನ ಮತ್ತು ಚಿತ್ರದುರ್ಗ ಜಿಲ್ಲೆ ಅಭಿವೃದ್ದಿಯಲ್ಲಿ ಗಣಿಗಳ ಮಹತ್ವ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

- Advertisement - 

ಸಿ.ಎಂ.ಸಿದ್ದರಾಮಯ್ಯನವರಿಗೂ ಗಣಿಗಾರಿಕೆಗೂ ಏನೋ ನಂಟಿದೆ. ಸಿಂಗಲ್ ವಿಂಡೋ ಎಂದು ಘೋಷಿಸಿ ಈಗ ಗಣಿಗಾರಿಕೆ ನಡೆಸುವವರಿಗೆ ಸಹಾಯ ಮಾಡಿದ್ದಾರೆ. ಸರ್ಕಾರ ಇದನ್ನು ಮತ್ತೊಮ್ಮೆ ಪರಿಶೀಲಿಸಬೇಕು. ಪದೇ ಪದೇ ತಪ್ಪು ಎಸಗಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವವರಿಗೆ ಲೈಸೆನ್ಸ್ ಕೊಡಬಾರದೆಂದು ಒತ್ತಾಯಿಸಿದರು.

ಪರಿಸರಕ್ಕೆ ಗಣಿಗಾರಿಕೆ ಎನ್ನುವುದು ಅತ್ಯಂತ ಅಪಾಯಕಾರಿ. ಕೊಡಗು, ಸಂಡೂರು, ಚಿತ್ರದುರ್ಗದಲ್ಲಿ ಗಣಿಗಾರಿಕೆಯಿಂದ ಹಲವು ಸಮಸ್ಯೆಗಳು ಉದ್ಬವಿಸಿದೆ. ಗಣಿಗಾರಿಕೆಗೆ ನೆರವು ನೀಡುವ ಸರ್ಕಾರ ಬೇಡ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಸರ್ಕಾರ ಬೇಕು. ಮುಂದಿನ ದಿನಗಳಲ್ಲಿ ಗಣಿಗಾರಿಕೆಯಿಂದಾಗುವ ಅಪಾಯಗಳ ನಿರ್ಮೂಲನೆಗೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದೆಂದರು.

- Advertisement - 

ಚಿತ್ರದುರ್ಗದ ಕಾವಾಡಿಗರಹಟ್ಟಿಯಲ್ಲಿ ಸಂಭವಿಸಿದ ದುರ್ಘಟನೆ ಬಗ್ಗೆ ಪ್ರಸ್ತಾಪಿಸಿ ಕಲುಷಿತ ನೀರು ಸೇವನೆಯಿಂದ ಸಾವು-ನೋವು ಸಂಭವಿಸಿ ನೂರಾರು ಮಂದಿ ಆಸ್ಪತ್ರೆ ಸೇರಿದ್ದರು. ಪರಿಸರ ಸ್ವಚ್ಚತೆ ಇಲ್ಲದ್ದರಿಂದ ಇಂತಹ ಅನಾಹುತಕ್ಕೆ ಕಾರಣ ಎಂದು ಅಹಿಂಸಾ ಚೇತನ್ ಹೇಳಿದರು.

ಕರ್ನಾಟಕ ರಾಜ್ಯ ಗಣಿ ಬಾಧಿತ ಪ್ರದೇಶ ಹೋರಾಟ ಸಮಿತಿ ಅಧ್ಯಕ್ಷ ರಮೇಶ್ ಬಿ.ದುರ್ಗ ಮಾತನಾಡಿ ಪರಿಸರ ಅಸಮತೋಲನದಿಂದ ಜೇನುನೊಣಗಳು ಮಾಯವಾಗಿವೆ. ಗಣಿಬಾಧಿತ ಪ್ರದೇಶಗಳ ಜನರ ಸಂಕಷ್ಟಗಳು ದಿನೆ ದಿನೆ ಹೆಚ್ಚುತ್ತಿದ್ದು, ಕ್ಯಾನ್ಸರ್ ರೋಗಕ್ಕೆ ಜನ ತುತ್ತಾಗುತ್ತಿದ್ದಾರೆ. ಮಕ್ಕಳು ನಾನಾ ರೀತಿಯ ರೋಗಗಳಿಂದ ಬಳಲುವಂತಾಗಿದೆ. ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಹೂಡಿ ಸಮಸ್ಯೆಗಳನ್ನು ಅರಿತರೆ ಒಳ್ಳೆಯದೆಂದು ವಿನಂತಿಸಿದರು.

ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷ ಮಾಲತೇಶ್ ಅರಸ್ ಮಾತನಾಡುತ್ತ ಪರಿಸರ ಮತ್ತು ವನ್ಯಜೀವಿಗಳ ಮೇಲಿನ ದೌರ್ಜನ್ಯ, ಹೆಚ್ಚಾಗಿದ್ದು, ಮಾನವ ಮತ್ತು ಕಾಡು ಪ್ರಾಣಿಗಳ ನಡುವೆ ಸಂಘರ್ಷವೇರ್ಪಟ್ಟಿದೆ. ಮೀಸಲು ಅರಣ್ಯ ಪ್ರದೇಶಗಳಲ್ಲಿ ಲಾರಿಗಳ ಸಂಚಾರ ಎಗ್ಗಿಲ್ಲದೆ ಸಾಗುತ್ತಿದೆ. ಕರಡಿ, ಚಿರತೆಗಳು ಕಾಡಿನಿಂದ ನಾಡಿಗೆ ಬರಲು ಆರಂಭಿಸಿವೆ. ಈ ಸಂಬಂಧ ಪರಿಸರವಾದಿಗಳ ಸಭೆ ನಡೆಸಿ ವನ್ಯಜೀವಿಗಳ ಸಂರಕ್ಷಣೆಗೆ ಆಂದೋಲನ ನಡೆಸುವುದಾಗಿ ತಿಳಿಸಿದರು.

ಜಲ ಜಾಗೃತಿ ವಿಭಾಗದ ಉಪಾಧ್ಯಕ್ಷ ಕೆ.ಓಂಕಾರಪ್ಪ ಮೌರ್ಯ, ಕರ್ನಾಟಕ ರಾಜ್ಯ ಗಣಿಬಾಧಿತ ಪ್ರದೇಶ ಹೋರಾಟ ಸಮಿತಿ ಮುಖಂಡ ಓಂಕಾರಪ್ಪ ಇವರುಗಳು ಸಂವಾದದಲ್ಲಿ ಸಮಗ್ರ ಮಾಹಿತಿ ನೀಡಿದರು.

ಪದಾಧಿಕಾರಿಗಳಾದ ರಮೇಶ್‌ನಾಯ್ಕ, ಜಿ.ಸಿ.ಮಹೇಶ್, ಈಶ್ವರಪ್ಪ, ಮರುಳಪ್ಪ, ಮಹಾದೇವಪ್ಪ, ರಂಗಸ್ವಾಮಿ, ಪುಟ್ಟನಾಯ್ಕ, ಮಹೇಶ್ವರಪ್ಪ, ಶಿವಕುಮಾರ್, ಬಿ.ಆರ್.ಲೋಹಿತ್, ವೀರೇಶ್ ಭೀಮಸಮುದ್ರ ಇವರುಗಳು ಸಂವಾದದಲ್ಲಿ ಭಾಗವಹಿಸಿದ್ದರು.

ಗಣಿ ಬಾಧಿತ ಪ್ರದೇಶಗಳಾದ ತಣಿಗೇಹಳ್ಳಿ, ವಿ.ಪಾಳ್ಯ, ಮದಕರಿಪುರ ಗ್ರಾಮಗಳಲ್ಲಿ ಅಧ್ಯಯನ ಮತ್ತು ಸಂಶೋಧನಾ ತಂಡದೊಂದಿಗೆ ಅಹಿಂಸಾ ಚೇತನ್ ಭೇಟಿ ನೀಡಿ ಅಲ್ಲಿನ ಜನರ ಕುಂದುಕೊರತೆ ಸಮಸ್ಯೆಗಳನ್ನು ಆಲಿಸಿದರು.

 

Share This Article
error: Content is protected !!
";