ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಟ ಪ್ರಥಮ್ ಗೆ ದುಷ್ಕರ್ಮಿಗಳು ಮಾರಕಾಸ್ತ್ರ ತೋರಿಸಿ ಜೀವ ಬೆದರಿಕೆ ಹಾಕಿರುವ ಘಟನೆ ತಾಲೂಕಿನ ಎಲ್ಲಮ್ಮ ದೇವಸ್ಥಾನದ ಸಮೀಪ ಜರುಗಿದೆ. ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಅಡ್ಡಗಟ್ಟಿ ನಟ ಪ್ರಥಮ್ ಗೆ ಜೀವ ಬೆದರಿಗೆ ಹಾಕಲಾಗಿದೆ ಎಂದು ಅವರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ತಾಲೂಕಿನ ರಾಮಯ್ಯನಪಾಳ್ಯದ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಕಳೆದ ಐದಾರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಜೀವ ಬೆದರಿಕೆ ಹಾಕಿದ ಆರೋಪದ ಹಿನ್ನೆಲೆಯಲ್ಲಿ ದರ್ಶನ್ ಅಭಿಮಾನಿಗಳೆಂದು ಹೇಳಿಕೊಂಡಿರುವ ಯಶಸ್ವಿನಿ, ಬೇಕರಿ ರಘು ಎಂಬವರ ಮೇಲೆ ಭಾರತೀಯ ದಂಡ ಸಂಹಿತೆ ಅಡಿ 351(2)(3), 352,126(2) 3(5) ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜುಲೈ 22ರಂದು ದೇವಸ್ಥಾನಕ್ಕೆ ಹೋಗಿದ್ದಾಗ ದುಷ್ಕರ್ಮಿಗಳ ಗುಂಪು ತಮಗೆ ಜೀವ ಬೆದರಿಕೆ ಹಾಕಿರುವುದಾಗಿ ಪ್ರಥಮ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಜುಲೈ 29ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನ ವಿವರ:
ಸಿನಿಮಾ ಪ್ರಮೋಟರ್ ಮಹೇಶ್ ಎಂಬವರ ಆಹ್ವಾನದ ಮೇರೆಗೆ ಜುಲೈ22ರಂದು ನಾನು ತಾಲೂಕಿನ ರಾಮಯ್ಯನಪಾಳ್ಯದ ಯಲ್ಲಮ್ಮ ದೇವಸ್ಥಾನದ ಪೂಜೆ ಕಾರ್ಯಕ್ರಮಕ್ಕೆ ಹೋಗಿದ್ದೆ.
ಪೂಜೆ ಮುಗಿಸಿ ಮಧ್ಯಾಹ್ನ 3:50ರ ಸುಮಾರಿಗೆ ವಾಪಸ್ ಬರುವಾಗ ನನ್ನ ಕಾರನ್ನು ಸುತ್ತುವರೆದ ಯಶಸ್ವಿನಿ, ಬೇಕರಿ ರಘು ಸೇರಿದಂತೆ ಅಪರಿಚಿತ ಕೆಲವರು ತನ್ನನ್ನು ಅಲ್ಲಿಂದ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ದರ್ಶನ್ ಬಾಸ್ ಬಗ್ಗೆ ಮಾತಾಡ್ತಿಯಾ ಅಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಅಲ್ಲದೆ ಡ್ರ್ಯಾಗರ್ ಮತ್ತು ಚಾಕು ತೋರಿಸಿ ಜೀವ ಬೆದರಿಕೆ ಸಹ ಹಾಕಿ ಬ್ಯಾರಕ್ನಲ್ಲಿ ದರ್ಶನ್ ಜೊತೆಗಿದ್ದ ಫೋಟೋವನ್ನು ತೋರಿಸಿ ಬೆದರಿಕೆ ಹಾಕಿದ್ದು, ಹೇಗೋ ಉಪಾಯದಿಂದ ನಾನು ಅಲ್ಲಿಂದ ಪಾರಾಗಿ ಬಂದಿದ್ದಾಗಿ ಪ್ರಥಮ್ ದೂರಿನಲ್ಲಿ ತಿಳಿಸಿದ್ದಾರೆ.
ತೇಜೋವಧೆ:
ನನಗೆ ರಕ್ಷಣೆ ನೀಡಬೇಕು. ಕೆಲವರಿಂದ ನನಗೆ ಜೀವ ಭಯ ಇದೆ. ಬೆದರಿಕೆ ಹಾಕಿದವರ ಮೇಲೆ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿರುವ ನಟ ಪ್ರಥಮ್, ನನಗೆ ತೊಂದರೆ ಮಾಡಿದವರಿಗೆ ಬುದ್ಧಿ ಹೇಳಿ ರಾಜಿಯಾಗಲು ದರ್ಶನ್ ಆಪ್ತರು ಪ್ರಯತ್ನಿಸಿದ್ದಾರೆ.
ಆದರೂ, ಕಳೆದ ಎರಡು ದಿನಗಳಿಂದ ಇಲ್ಲಿಯವರೆಗೂ ದರ್ಶನ್ ಅವರ ಅಧಿಕೃತ ಫ್ಯಾನ್ ಪೇಜ್ಗಳಾದ ಡಿ ಡೈನಾಸ್ಟಿ, ಡಿ ಕಿಂಗ್ಡಮ್, ಡಿ ಯೂನಿವರ್ಸ್, ಡೆವಿಲ್ ಕಿಂಗ್ಡಮ್ ಸೇರಿದಂತೆ 500ಕ್ಕೂ ಹೆಚ್ಚು ಪೇಜ್ಗಳ ಮೂಲಕ ನನ್ನ ವೈಯಕ್ತಿಕ ತೇಜೋವಧೆಗೆ ಇಳಿದಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಥಮ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.

