ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
15 ಲಕ್ಷ ಮೌಲ್ಯದ ಜೀವಂತ ಆನೆ ಹೋಲುವ ರೋಬೋಟಿಕ್ ಆನೆಯೊಂದನ್ನು ನಟ ಸುನೀಲ್ ಶೆಟ್ಟಿ ಅವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರೆಕೆರೆ ಗ್ರಾಮದ ಶಿಲಾಮಠಕ್ಕೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ರೋಬೋಟಿಕ್ ಆನೆಗೆ ಉಮಾಮಹೇಶ್ವರ ಎಂದು ನಾಮಕರಣ ಮಾಡಲಾಗಿದೆ.
ರೋಬೋಟಿಕ್ ಆನೆ-
ರೋಬೋಟಿಕ್ ಆನೆ ಸುಮಾರು 11 ಅಡಿ ಎತ್ತರ, ಕೋರೆ ಹಲ್ಲಿನಿಂದ ಬಾಲದವರೆಗೆ ಹದಿಮೂರುವರೆ ಅಡಿ ಉದ್ದವಿದೆ. ಒಂದೂವರೆ ಅಡಿ ಎತ್ತರದ ಟ್ರ್ಯಾಲಿ ನಿರ್ಮಾಣ ಮಾಡಲಾಗಿದೆ. ಸೋಮವಾರ ಮಠಕ್ಕೆ ಆಗಮಿಸಿದ ಆನೆಯನ್ನು ಸ್ವಾಮೀಜಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.
ಗ್ರಾಮಸ್ಥರೆಲ್ಲರೂ ಸೇರಿ ಟ್ರ್ಯಾಲಿಯಲ್ಲಿ ಆನೆಯ ಮೆರವಣಿಗೆ ಮಾಡಿದರು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮಠದ ಭಕ್ತರು, ಜನಸಾಮಾನ್ಯರು ರೋಬೋಟಿಕ್ ಆನೆಯ ಪಕ್ಕದಲ್ಲಿ ನಿಂತು ಫೋಟೋ ತೆಗೆಸಿಕೊಳ್ಳಲು ಮುಗಬಿದ್ದಿದ್ದು ವಿಶೇಷವಾಗಿತ್ತು.
ರಿಮೋಟ್ ಮೂಲಕ ನಿಯಂತ್ರಣ: ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಮುಂಬೈನ ಕುಪಾ ಆ್ಯಂಡ್ ಪೆಟಾ ಇಂಡಿಯಾ ಸಂಸ್ಥೆಯಿಂದ ಈ ರೋಬೋಟಿಕ್ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ನಾಡಿನಲ್ಲಿ ಆನೆಗಳಿಗೆ ಆಗುವ ಹಿಂಸೆಯನ್ನು ಮನಗಂಡ ಸಂಸ್ಥೆಯವರು ರಾಜ್ಯದ ಪ್ರತಿಷ್ಠಿತ ಸುತ್ತೂರು, ರಂಬಾಪುರಿ, ಎಡೆಯೂರು ಮತ್ತು ತಾವರೆಕೆರೆ ಮಠಗಳಿಗೆ ರೋಬೋಟ್ ಆನೆ ನೀಡಿದ್ದಾರೆ. ಇದೀಗ ಶಿಲಾಮಠಕ್ಕೂ ಸಂಸ್ಥೆ ನೀಡಿದೆ.
ರೋಬೋಟಿಕ್ ಆನೆಯನ್ನು ಟ್ರ್ಯಾಲಿ ಮೇಲೆ ನಿಲ್ಲಿಸಲಾಗಿದ್ದು, ಟ್ರ್ಯಾಲಿ ಮೂಲಕ ಆನೆ ಚಲಿಸುತ್ತದೆ. ರೋಬೋಟಿಕ್ ಆನೆಯನ್ನು ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸಲಾಗುತ್ತದೆ ಎಂದು ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.
ಕಾಡು ಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ನಿಷೇಧಿಸಲಾಗಿದೆ. ಹೀಗಾಗಿ ಪರ್ಯಾಯ ಮಾರ್ಗ ಎಂಬಂತೆ ರೋಬೋಟಿಕ್ ಆನೆಯನ್ನು ಶ್ರೀಮಠ ತರಿಸಿದೆ. ಯಾವುದೇ ಖರ್ಚು-ವೆಚ್ಚವಿಲ್ಲದೆ ಆನೆಯನ್ನು ಪಾಲನೆ ಮಾಡಬಹುದಾಗಿದೆ. ಪ್ರಸಿದ್ಧ ಮಹೇಶ್ವರ ಜಾತ್ರೆ, ಮಠದ ಹಿರಿಯ ಗುರುಗಳ ಸ್ಮರಣೋತ್ಸವ, ಶಿವರಾತ್ರಿ ವೇಳೆ ಈ ಆನೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಸ್ವಾಮೀಜಿಗಳು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬೀರೂರಿನ ರಂಭಾಪುರಿ ಶಾಖಾಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿ ಪ್ರಾಣಿ ಸಂಕುಲ ಉಳಿಸುವ ಉದ್ದೇಶದಿಂದಾಗಿ ತಾವರೆಕೆರೆ ಮಠಕ್ಕೆ ರೋಬೋಟಿಕ್ ಆನೆ ಕೊಡಲಾಗಿದೆ. ಇದನ್ನು ಹಬ್ಬ ಹರಿದಿನಗಳಲ್ಲಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಳಕೆ ಮಾಡಲಾಗುತ್ತದೆ. ಎಲ್ಲಾ ಮಠ ಮಾನ್ಯಗಳಿಗೂ ಈ ರೀತಿಯ ಆನೆ ಕೊಡಲಿ ಎಂಬುದು ನಮ್ಮ ಆಶಯವಾಗಿದೆ ಎಂದು ತಿಳಿಸಿದರು.
ಶಿಲಾಮಠ ಪೀಠಾಧಿಪತಿ ಡಾ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯಗಳನ್ನು ನಡೆಸಲು ಶಿಲಾಮಠಕ್ಕೆ ಆನೆ ಬೇಕು ಎಂದು 50 ವರ್ಷಗಳ ಹಿಂದೆ ಅಂದಿನ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಕಾರಣಗಳಿಂದ ಆನೆ ತರಲಾಗಿರಲಿಲ್ಲ. ಪ್ರಸ್ತುತ ಕುಪಾ ಅಂಡ್ ಪೆಟಾ ಸಂಸ್ಥೆಯವರು ಶಿಲಾಮಠಕ್ಕೆ ರೋಬೋಟ್ ಆನೆ ದಾನವಾಗಿ ನೀಡಿರುವುದು 50 ವರ್ಷಗಳ ಮಠದ ಕನಸು ನನಸಾಗಿದೆ ಎಂದು ತಿಳಿಸಿದರು.
ವೀರೇಂದ್ರ ಪಾಟೀಲ್ ಅವರ ಸಿಎಂ ಆಗಿದ್ದಾಗ ಮಠಕ್ಕೆ ಜೀವಂತ ಆನೆ ಮಂಜೂರಾಗಿತ್ತು. ಕಾರಣಾಂತರಗಳಿಂದ ತೆಗೆದುಕೊಳ್ಳಲು ಆಗಿರಲಿಲ್ಲ. ಇದು ಜಿಲ್ಲೆಯಲ್ಲೇ ಪ್ರಥಮ ರೋಬೋಟಿಕ್ ಆನೆಯಾಗಿದೆ ಎಂದು ತಿಳಿಸಿದರು.
ಸುನೀಲ್ ಶೆಟ್ಟಿ ಅಭಿನಂದನೆ:
ಬೆಳಕೆ ಹಿರೇಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಆನೆಗಳನ್ನು ಉಳಿಸುವ ಕಾರ್ಯದಲ್ಲಿ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ನಟರ ಒಳ್ಳೆಯ ಉದ್ದೇಶ ನಮಗೆ ಅರ್ಥವಾಗಿದೆ. ಅಲ್ಲದೆ ಸಂತಸ ತಂದಿದೆ. ಶಿಲಾಮಠಕ್ಕೆ ರೋಬೋಟಿಕ್ ಆನೆ ಕಳುಹಿಸಿಕೊಟ್ಟಿರುವ ಸುನೀಲ್ ಶೆಟ್ಟಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆಂದು ಅವರು ತಿಳಿಸಿದರು.