ಚಂದ್ರವಳ್ಳಿ ನ್ಯೂಸ್, ತಮಿಳುನಾಡು:
ತಮಿಳು ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಮಿತಿ ಮೀರಿದೆ ಎಂದು ಜನಪ್ರಿಯ ತಮಿಳು ನಟಿ ಮತ್ತು ದೂರದರ್ಶನ ಧಾರಾವಾಹಿ ನಿರ್ಮಾಪಕಿ ಕುಟ್ಟಿ ಪದ್ಮಿನಿ ಹೇಳಿದ್ದಾರೆ.
ಮಲಯಾಳಂ ಸಿನಿಮಾ ರಂಗದಲ್ಲಿ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯು ಸಂಚಲನ ಸೃಷ್ಟಿಸಿರುವ ನಡುವೆ ಕುಟ್ಟಿ ಪದ್ಮಿನಿಯವರ ಹೇಳಿಕೆ ಬಂದಿದೆ.
“ತಮಿಳು ಟೆಲಿವಿಷನ್ ಶೋ ಉದ್ಯಮದಲ್ಲಿ ಮಿತಿ ಮೀರಿ ಲೈಂಗಿಕ ಕಿರುಕುಳ ನಡೆಯುತ್ತಿದೆ. ಇದರಿಂದಾಗಿ ಅನೇಕ ಮಹಿಳೆಯರು ‘ಆತ್ಮಹತ್ಯೆ’ ಮಾಡಿಕೊಂಡಿದ್ದಾರೆ” ಎಂದು ಕುಟ್ಟಿ ಪದ್ಮಿನಿ ಆರೋಪಿಸಿದ್ದಾರೆ.
ಈ ಹಿಂದೆ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಗಾಯಕಿ ಚಿನ್ಮಯಿ ಮತ್ತು ನಟಿ ಶ್ರೀರೆಡ್ಡಿ ಮೇಲೆ ತಮಿಳು ಚಲನಚಿತ್ರೋದ್ಯಮ ನಿಷೇಧ ಹೇರಿತ್ತು ಎಂದಿರುವ ಪದ್ಮಿನಿ, ಈ ಕುರಿತು ಕಳವಳ ವ್ಯಕ್ತಪಡಿಸಿದ್ದಾರೆ. ಗೀತರಚನೆಕಾರ ವೈರಮುತ್ತು ವಿರುದ್ಧ ಗಾಯಕಿ ಚಿನ್ಮಯಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು.
“ನಿರ್ದೇಶಕರು ಮತ್ತು ತಂತ್ರಜ್ಞರು ಟಿವಿ ಧಾರಾವಾಹಿಗಳಲ್ಲಿನ ಮಹಿಳಾ ಕಲಾವಿದರಿಂದ ಲೈಂಗಿಕವಾಗಿ ಸಹಕರಿಸುವಂತೆ ಕೇಳುತ್ತಾರೆ. ಲೈಂಗಿಕ ಕಿರುಕುಳವನ್ನು ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಅನೇಕ ಮಹಿಳೆಯರು ದೂರು ನೀಡುವುದಿಲ್ಲ. ಕೆಲ ಮಹಿಳೆಯರು ಹಣ ಹೆಚ್ಚಾಗಿ ಗಳಿಸಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಈ ಕಿರುಕುಳವನ್ನು ಸಹಿಸಿಕೊಳ್ಳುತ್ತಾರೆ” ಎಂದು ಪದ್ಮಿನಿ ವಿವರಿಸಿದ್ದಾರೆ.
“ಕೇರಳದ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದ ದೂರುಗಳು ದಾಖಲಾದಂತೆ ತಮಿಳುನಾಡಿನಲ್ಲಿ ಯಾವುದೇ ದೂರುಗಳು ದಾಖಲಾಗಿಲ್ಲ. ದೂರು ದಾಖಲಾದರೆ ನಾವು ಸೂಕ್ತ ಕ್ರಮವನ್ನು ಕೈಗೊಳ್ಳುತ್ತೇವೆ” ಎಂದು ತಮಿಳುನಾಡು ಸಚಿವ ಸ್ವಾಮಿನಾಥನ್ ಹೇಳಿದ್ದಾರೆ.
ಮಲಯಾಳಂ ಚಿತ್ರರಂಗದಂತೆ ತಮಿಳು ಚಿತ್ರರಂಗದಲ್ಲೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಕುರಿತು ಅಧ್ಯಯನ ಮಾಡಲು ಸಮಿತಿ ರಚಿಸಲಾಗುವುದು ಎಂದು ತಮಿಳು ಚಲನಚಿತ್ರ ಕಲಾವಿದರ ಸಂಘ (ನಡಿಗರ್ ಸಂಘಂ) ದ ಕಾರ್ಯದರ್ಶಿ ವಿಶಾಲ್ ತಿಳಿಸಿದ್ದಾರೆ.