ನಟಿ ಸರೋಜಾದೇವಿ ಅವರ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು

News Desk

ಚಂದ್ರವಳ್ಳಿ ನ್ಯೂಸ್, ಚನ್ನಪಟ್ಟಣ (ರಾಮನಗರ):
ಅಭಿನಯ ಸರಸ್ವತಿ ಖ್ಯಾತಿಯ ಬಿ.ಸರೋಜಾ ದೇವಿ ಅವರ ಅಂತ್ಯಸಂಸ್ಕಾರ ಅವರ ಹುಟ್ಟೂರಾದ ಚನ್ನಪಟ್ಟಣದ ದಶವಾರ ಗ್ರಾಮದಲ್ಲಿ ಮಂಗಳವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಸರೋಜಾ ದೇವಿ ಅವರ ತಾಯಿಯ ಸಮಾಧಿ ಪಕ್ಕವೇ ಒಕ್ಕಲಿಗ ಸಮುದಾಯ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಿತು.

ಬಿ.ಸರೋಜಾ ದೇವಿ ಅವರ ತೋಟದಲ್ಲಿ ತಾಯಿ ಸಮಾಧಿಯ ಪಕ್ಕವೇ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ವಯೋಸಹಜ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಬಿ.ಸರೋಜಾ ದೇವಿ ಅವರು ಜುಲೈ 14ರ ಸೋಮವಾರ ಬೆಳಗ್ಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ತಮ್ಮ ಸ್ವಗೃಹದಲ್ಲಿ ಕೊನೆ ಉಸಿರೆಳೆದಿದ್ದರು.
ಪಾರ್ಥಿವ ಶರೀರವನ್ನು ಬೆಳಗಿನವರೆಗೂ ಬೆಂಗಳೂರಿನ ಮಲ್ಲೇಶ್ವರಂ ನಿವಾಸದಲ್ಲೇ ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು. ಸಾರ್ವಜನಿಕ ದರ್ಶನದ ಪಾರ್ಥಿವ ಶರೀರದ ಅಂತಿಮಯಾತ್ರೆ ನಡೆಸಲಾಯಿತು.

- Advertisement - 

ಪುಷ್ಪಾಂಲಕೃತ ವಾಹನದಲ್ಲಿ ಪಾರ್ಥೀವ ಶರೀರವನ್ನು ಚನ್ನಪಟ್ಟಣದ ದಶವಾರ ಗ್ರಾಮಕ್ಕೆ ತರಲಾಗಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಅದಕ್ಕೂ ಮುನ್ನ ಚನ್ನಪಟ್ಟಣದಲ್ಲಿ ಕೆಲ ಹೊತ್ತು ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಪೊಲೀಸರು ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ‌ ಗೌರವ ವಂದನೆ ಸಲ್ಲಿಸಿದರು. ನಂತರ ಬಿ.ಸರೋಜಾ ದೇವಿ ಅವರ ಸ್ವಂತ ಭೂಮಿಯಲ್ಲಿ ತಾಯಿ ರುದ್ರಮ್ಮ ಸಮಾಧಿ ಪಕ್ಕದಲ್ಲೇ ಮಣ್ಣಿನಲ್ಲಿ ಸಮಾಧಿ ಮಾಡಲಾಯಿತು.

- Advertisement - 

ದಾರಿ ಉದ್ದಕ್ಕೂ ಅಂತಿಮ ನಮನ:
ಬೆಂಗಳೂರಿನಿಂದ ನೇರವಾಗಿ ದಶವಾರ ಗ್ರಾಮಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು. ಇದಕ್ಕೂ ಮುನ್ನ ಬಿಡದಿ
, ರಾಮನಗರ ಹಾಗೂ ಚನ್ನಪಟ್ಟಣದ ದಾರಿ ಉದ್ದಕ್ಕೂ ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದ್ದಾರೆ.
ಚನ್ನಪಟ್ಟಣದ ಗಾಂಧಿ ಭವನದ ಬಳಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಟ್ಟು
, ಹುಟ್ಟೂರು ದಶವಾರ ಗ್ರಾಮಕ್ಕೆ ವಾಹನ ಸಂಚರಿಸಿತು.

ದಶವಾರ ಗ್ರಾಮದ ಹೊರ ವಲಯದಲ್ಲಿರುವ ಸರೋಜಾದೇವಿ ಅವರ ಮೆಚ್ಚಿನ ತೋಟದಲ್ಲೇ ಸಂಪ್ರದಾಯಗಳ ಪ್ರಕಾರ ಅಂತಿಮ ವಿಧಿವಿಧಾನಗಳು ನೆರವೇರಿತು.

ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಪೂರ್ವ ನಿಗದಿಯಂತೆ ತಾಯಿಯ ರುದ್ರಮ್ಮ ಸಮಾಧಿ ಪಕ್ಕದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಂತ್ಯ ಸಂಸ್ಕಾರಕ್ಕೆ ಯಾವುದೇ ತೊಂದರೆ ಆಗದಂತೆ ಬ್ಯಾರಿಕೇಡ್​ ಹಾಕಿ ಸಿದ್ದತೆ ಮಾಡಿಕೊಳ್ಳಲಾಗಿತ್ತು.

ಡಿಸಿಎಂ ಡಿ.ಕೆ ಶಿವಕುಮಾರ್, ಸ್ಥಳೀಯ ಶಾಸಕ ಸಿ.ಪಿ ಯೋಗೇಶ್ವರ್ ಸೇರಿದಂತೆ ಸ್ಥಳೀಯ ರಾಜಕೀಯ ಮುಖಂಡರು, ಸಂಬಂಧಿಕರು, ಚಲನಚಿತ್ರ ನಟರು, ನಿರ್ಮಾಪಕರು, ನಿರ್ದೇಶಕರು ಹಾಗೂ ಗ್ರಾಮಸ್ಥರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು.

Share This Article
error: Content is protected !!
";