ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ನಟಿ ತಾರಾ ಅನುರಾಧಾ ಅವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಅಂಬರೀಶ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದಾರೆ.
ಕನ್ನಡ ಚಿತ್ರರಂಗ ಕಂಡ ಖ್ಯಾತ ಕಲಾವಿದರಾದ ವಿಷ್ಣುವರ್ಧನ್ ಮತ್ತು ಬಿ.ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಗೌರವ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇದರ ಬೆನ್ನಲ್ಲೇ ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೂ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂಬ ಕೂಗು ಕೇಳಿಬಂದಿದೆ.
ಈ ಹಿನ್ನೆಲೆಯಲ್ಲಿ ಹಿರಿಯ ನಟಿ ತಾರಾ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಅಂಬರೀಶ್ ಅವರಿಗೂ ಕರ್ನಾಟಕ ರತ್ನ ನೀಡಬೇಕು ಎಂದು ಮನವಿ ಮಾಡಿದರು.
ಅಂಬರೀಶ್ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕೆಂಬುದು ಅಂಬಿ ಅಭಿಮಾನಿಗಳ ಒತ್ತಾಸೆಯಾಗಿದೆ. ನೀವೂ ಕೂಡ ಅಂಬಿ ಅವರನ್ನು ತುಂಬಾ ಹತ್ತಿರದಿಂದ ಕಂಡಿದ್ದೀರಿ. ವಿಷ್ಣುವರ್ಧನ್ ಹಾಗೂ ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದ್ದು ಬಹಳ ಸಂತೋಷದ ಸುದ್ದಿ. ಜೊತೆಗೆ ಅಂಬರೀಶ್ ಅವರಿಗೂ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿ ಎಂದು ತಾರಾ ಅನುರಾಧ ಮನವಿ ಮಾಡಿದ್ದಾರೆ.
ವಿಷ್ಣು, ಸರೋಜಾದೇವಿಗೆ ಕರ್ನಾಟಕ ರತ್ನ ನೀಡಲು ಸಚಿವ ಸಂಪುಟ ಸಭೆ ತೀರ್ಮಾನ: ಕಳೆದ ಗುರುವಾರದಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಟರಾದ ಡಾ. ವಿಷ್ಣುವರ್ಧನ್ ಮತ್ತು ಬಿ. ಸರೋಜಾದೇವಿ ಅವರಿಗೆ
ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಿಲಾಗಿತ್ತು. ಈ ಹಿನ್ನೆಲೆ ಕನ್ನಡ ಚಿತ್ರರಂಗದ ಹಿರಿಯ ನಟಿಯರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದ್ದರು.

