ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹನ್ನರೆಡನೇ ಶತಮಾನದ ಶಿವಶರಣರು ವಚನಗಳ ಮೂಲಕ ಹೇಗೆ ಸಮಾಜದ ಸುಧಾರಣೆಗೆ ಶ್ರಮಿಸಿದರೋ, ಅದೇ ಹಾದಿಯಲ್ಲಿ 16ನೇ ಶತಮಾನದಲ್ಲಿ ಮಹಾಕವಿ ಸರ್ವಜ್ಞರು ತಮ್ಮ ತ್ರಿಪದಿಗಳ ಮೂಲಕ ಜನಮಾನಸವನ್ನು ತಲುಪಿ ಸಮಾಜದ ಓರೆಕೋರೆಗಳನ್ನು ತಿದ್ದಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ನಗರಸಭೆ, ಕುಂಬಾರ ಗುಂಡಯ್ಯ ಮಹಾಸಂಸ್ಥಾನ, ಚಿತ್ರದುರ್ಗ ಜಿಲ್ಲಾ ಕುಂಬಾರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಕುಂಬಾರ ಮಹಿಳಾ ಮಹಾಸಭ ಇವರ ಸಂಯುಕ್ತಾಶ್ರಯದಲ್ಲಿ, ಶುಕ್ರವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕವಿ ಸರ್ವಜ್ಞ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸಾಹಿತ್ಯ ಕೇವಲ ಪಂಡಿತರಿಗೆ ಸೀಮಿತವಾಗಿದ್ದ ಕಾಲದಲ್ಲಿ, ಸರ್ವಜ್ಞರು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳ ಕನ್ನಡದಲ್ಲಿ ತ್ರಿಪದಿಗಳನ್ನು ರಚಿಸಿದರು. ಸಮಾಜದಲ್ಲಿದ್ದ ಕಂದಾಚಾರ, ಮೂಢನಂಬಿಕೆ ಮತ್ತು ಜಾತಿ ಪದ್ಧತಿಯನ್ನು ಅವರು ನೇರವಾಗಿ ಖಂಡಿಸಿದರು. ಸರ್ವಜ್ಞ ಎಂಬುದು ಅಹಂಕಾರದಿಂದ ಬಂದ ಹೆಸರಲ್ಲ, ಸರ್ವರೊಳಗೊಂದೊಂದು ನುಡಿ ಕಲಿತು ವಿದ್ಯೆಯ ಪರ್ವತವಾದವರು ಅವರು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಬಣ್ಣಿಸಿದರು.
ಪದವಿಗಳಿಗಿಂತ ಲೋಕಾನುಭವ ದೊಡ್ಡದು ಎಂಬುದಕ್ಕೆ ಸರ್ವಜ್ಞರೇ ಸಾಕ್ಷಿ. ಇಂದಿನ ಕಾಲದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚಿದ್ದರೂ ಕ್ರೌರ್ಯ ಮತ್ತು ಅಪರಾಧಗಳು ಹೆಚ್ಚುತ್ತಿವೆ. ತಂದೆ-ತಾಯಿಯನ್ನು ಕೊಲ್ಲುವಂತಹ ಹೀನ ಕೃತ್ಯಗಳು ನಡೆಯುತ್ತಿರುವುದು ವಿμÁದನೀಯ. ಮಕ್ಕಳಿಗೆ ಕೇವಲ ಅಂಕಗಳಿಕೆಯ ಶಿಕ್ಷಣ ನೀಡದೆ, ಸರ್ವಜ್ಞರ ತತ್ವಗಳನ್ನೊಳಗೊಂಡ ಸಂಸ್ಕಾರಯುತ ಶಿಕ್ಷಣ ನೀಡಬೇಕಾದ ಅಗತ್ಯವಿದೆ ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಇಂದಿನ ಪೀಳಿಗೆ ಮೊಬೈಲ್, ವಾಟ್ಸಾಪ್ ಮತ್ತು ಇನ್‍ಸ್ಟಾಗ್ರಾಮ್‍ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿ ಓದುವ ಹವ್ಯಾಸವನ್ನು ಮರೆಯುತ್ತಿದೆ. ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಓದುವ ಸಂಸ್ಕøತಿಯನ್ನು ಮತ್ತೆ ಬೆಳೆಸಲು ಸರ್ವಜ್ಞರ ವಚನಗಳನ್ನು ಮತ್ತು ಪುಸ್ತಕಗಳನ್ನು ಮನೆಯಲ್ಲಿಟ್ಟುಕೊಂಡು ಅಧ್ಯಯನ ಮಾಡಬೇಕು. “ವಿದ್ಯೆ ಕಲಿಸದ ಗುರು, ಬುದ್ಧಿ ಹೇಳದ ತಂದೆ, ಬಿದ್ದಿರಲು ಬಂದು ನೋಡದ ತಾಯಿ” ಇವರು ವೈರಿಗಳು ಎಂಬ ಸರ್ವಜ್ಞರ ಮಾತನ್ನು ಉಲ್ಲೇಖಿಸಿದ ಅವರು, ಪ್ರತಿಯೊಬ್ಬರೂ ಈ ಮಹಾನ್ ಕವಿಯ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಕರೆ ನೀಡಿದರು.
ಸರ್ವಜ್ಞರ ತ್ರಿಪದಿಗಳು ಬದುಕಿನ ದಾರಿ ದೀಪ:
ಸರ್ವಜ್ಞ ಜಯಂತಿಯಲ್ಲಿ ವಿಶೇಷ ಉಪನ್ಯಾಸ ನೀಡಿದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕ ಸುರೇಶ್.ಬಿ, ಮಹಾಕವಿ ಸರ್ವಜ್ಞರು ಕೇವಲ ಒಬ್ಬ ಕವಿಯಲ್ಲ, ಮಹಾನ್ ದಾರ್ಶನಿಕರೂ ಹೌದು. ಅವರ ತ್ರಿಪದಿಗಳು ಇಂದಿನ ಆಧುನಿಕ ಯುಗಕ್ಕೂ ಅತ್ಯಂತ ಪ್ರಸ್ತುತವಾಗಿವೆ ಎಂದು ಪ್ರತಿಪಾದಿಸಿದರು.
ಸರ್ವಜ್ಞರು ಕೇವಲ ಮೂರು ಸಾಲುಗಳ ತ್ರಿಪದಿಗಳಲ್ಲಿ ಇಡೀ ಲೋಕದ ಜ್ಞಾನವನ್ನು ಅಡಗಿಸಿದ್ದಾರೆ. ಅಲ್ಪ ಅಕ್ಷರಗಳಲ್ಲಿ ಅನಂತ ಅರ್ಥವನ್ನು ನೀಡುವ ಅವರ ಶೈಲಿ ಅನನ್ಯವಾದುದು. “ಜಾತಿ ಹೀನನ ಮನೆಯ ಜ್ಯೋತಿ ತಾ ಹೀನವೇ?” ಎಂದು ಪ್ರಶ್ನಿಸುವ ಮೂಲಕ, ಮನುಷ್ಯನ ಜನ್ಮಕ್ಕಿಂತ ಅವನ ಗುಣ ಮತ್ತು ನಡತೆ ಮುಖ್ಯ ಎಂಬುದನ್ನು ಸರ್ವಜ್ಞರು ಅಂದೇ ಸಾರಿದ್ದರು. ಶ್ರೇಷ್ಠತೆ ಎಂಬುದು ವ್ಯಕ್ತಿಯ ಜ್ಞಾನದಲ್ಲಿರಬೇಕೇ ಹೊರತು ಜಾತಿಯಲ್ಲಿಲ್ಲ ಎಂದು ಅವರು ತಿಳಿಸಿದರು.
ಸರ್ವಜ್ಞರು ಯಾವುದೇ ವಿಶ್ವವಿದ್ಯಾಲಯಕ್ಕೆ ಹೋಗಿ ಓದಿದವರಲ್ಲ. ಅವರು ಲೋಕವನ್ನೇ ಗುರುವನ್ನಾಗಿ ಮಾಡಿಕೊಂಡವರು. “ಸರ್ವರೊಳಗೊಂದೊಂದು ನುಡಿ ಕಲಿತು ವಿದ್ಯೆಯ ಪರ್ವತವೇ ಆದ” ಅವರ ಜೀವನ ನಮಗೆಲ್ಲರಿಗೂ ಆದರ್ಶವಾಗಿದೆ. ಸಮಾಜದಲ್ಲಿನ ಅಸಮಾನತೆ, ಡಂಭಾಚಾರದ ಭಕ್ತಿ ಮತ್ತು ಮೂಢನಂಬಿಕೆಗಳ ವಿರುದ್ಧ ಸರ್ವಜ್ಞರು ತಮ್ಮ ವಚನಗಳ ಮೂಲಕ ಚಾಟಿ ಬೀಸಿದ್ದಾರೆ. ಇಂದಿನ ಯುವ ಪೀಳಿಗೆಗೆ ಅವರ ತತ್ವಗಳ ಅವಶ್ಯಕತೆ ತುಂಬಾ ಇದೆ ಎಂದು ಸುರೇಶ್.ಬಿ ಅವರು ಆಶಯ ವ್ಯಕ್ತಪಡಿಸಿದರು.
ಅತಿಯಾದ ಆಸೆ ಮನುಷ್ಯನ ದುಃಖಕ್ಕೆ ಕಾರಣ. ಸರ್ವಜ್ಞರ ಸರಳ ಜೀವನ ಮತ್ತು ನೇರ ನುಡಿಗಳು ನಮ್ಮ ಬದುಕಿನ ದಾರಿಯನ್ನು ಸುಗಮಗೊಳಿಸುತ್ತವೆ. ಸರ್ವಜ್ಞರ ಜಯಂತಿಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಅವರ ಒಂದೊಂದು ತ್ರಿಪದಿಯ ಅರ್ಥವನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಇಂತಹ ಕಾರ್ಯಕ್ರಮಗಳಿಗೆ ಸಾರ್ಥಕತೆ ದೊರೆಯುತ್ತದೆ ಎಂದು ಸುರೇಶ್.ಬಿ ಹೇಳಿದರು.
ಚಳ್ಳಕೆರೆ ತಾಲ್ಲೂಕಿನ ಬೋಸೇದೇವರಹಟ್ಟಿ ಮಂಜಣ್ಣ ಮತ್ತು ತಂಡ ನಾಡಗೀತೆ ಹಾಡುವುದರೊಂದಿಗೆ ಗೀತಗಾಯನ ಪ್ರಸ್ತುತ ಪಡಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಬಿ.ಎಂ.ಗುರುನಾಥ ಸ್ವಾಗತಿಸಿದರು. ಆಕಾಶವಾಣಿ ಡಾ.ನವೀನ್ ಮಸ್ಕಲ್ ನಿರೂಪಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಗಂಜಿಗಟ್ಟೆ, ಆಹಾರ ಇಲಾಖೆ ಜಂಟಿ ನಿರ್ದೇಶಕ ಶಿದ್ರಾಮ ಮಾರಿಹಾಳ, ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಉಪವಿಭಾಗಾಧಿಕಾರಿಗಳ ಕಚೇರಿ ತಹಶೀಲ್ದಾರ್ ನರಸಿಂಹಮೂರ್ತಿ, ಚಿತ್ರದುರ್ಗ ಕುಂಬಾರ ಗುಂಡಯ್ಯ ಮಹಾಸಂಸ್ಥಾನದ ಕುಂಬಾರ ಗುಂಡಯ್ಯ ಸ್ವಾಮೀಜಿ, ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ಜಿಲ್ಲಾಧ್ಯಕ್ಷ ಎಸ್.ಯರ್ರಿಸ್ವಾಮಿ, ಕಾರ್ಯದರ್ಶಿಗಳಾದ ವೈ. ಮೃತ್ಯುಂಜಯ, ಎ.ಸಿದ್ದೇಶ, ಕರ್ನಾಟಕ ಕುಂಬಾರ ಮಹಿಳಾ ಮಹಾಸಭಾ ಅಧ್ಯಕ್ಷೆ ಎಸ್.ಬೈಲಮ್ಮ, ಕಾರ್ಯದರ್ಶಿ ಹೇಮಾವತಿ, ಸಮಾಜದ ಮುಖಂಡರು ಉಪಸ್ಥಿತರಿದ್ದರು.

