ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸನ್ಮಾನ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ರವರ ಸೂಚನೆ ಮೇರೆಗೆ “ಹೊರರಾಜ್ಯಗಳ ಗಡಿ ಕನ್ನಡಿಗರ ಸಮಸ್ಯೆಗಳ ಕುರಿತು” ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜಿನೀಶ್ ರವರ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭೆ ನಡೆಯಿತು.
ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು “ಹೊರರಾಜ್ಯದ ಗಡಿ ಕನ್ನಡಿಗರ ಸಮಸ್ಯೆಗಳ ಬಗ್ಗೆ” ಸವಿಸ್ತಾರವಾಗಿ ಸಭೆಗೆ ವಿಷಯ ಮಂಡನೆ ಮಾಡುತ್ತಾ, ಹೊರ ರಾಜ್ಯಗಳಲ್ಲಿರುವ 658 ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿಧ್ಯಾರ್ಥಿಗಳು ಇರುವ ಬಗ್ಗೆ ತಿಳಿಸಿದರು.
ಗಡಿ ಭಾಗದ ವಿಧ್ಯಾರ್ಥಿಗಳು ಮತ್ತು ಹೊರನಾಡ ಕನ್ನಡಿಗರು ದಿನ ನಿತ್ಯ ಅನುಭವಿಸುವ ಶೈಕ್ಷಣಿಕ, ಔದ್ಯೋಗಿಕ ಹಾಗೂ ಮೂಲಭೂತ ಸೌಕರ್ಯಗಳ ಸಮಸ್ಯೆಗಳ ಕುರಿತು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರುತ್ತಾ, ಇವುಗಳ ಪರಿಹಾರದ ಬಗ್ಗೆ, ಇಲಾಖಾವಾರು ಚರ್ಚಿಸಿ, ಕ್ರಮಕೈಗೊಳ್ಳುವಂತೆ ಕೋರಿದರು. ಈಗಾಗಲೇ ಹೊರರಾಜ್ಯದ ಕನ್ನಡ ಶಾಲೆಗಳಿಗೆ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಶಿಕ್ಷಣ ಇಲಾಖೆ ಸೇರಿ ಕನ್ನಡ ಮಾಧ್ಯಮದ ನಲಿ–ಕಲಿ ಸಾಮಗ್ರಿಗಳನ್ನು ವಿತರಿಸುತ್ತಿರುವ ಬಗ್ಗೆ, ವಿವರಿಸಿ ಶಿಕ್ಷಣ ಇಲಾಖೆಗೆ ಅಭಿನಂದನೆ ಸಲ್ಲಿಸಿದರು.
ಹೊರರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಿಗೆ ಶಿಕ್ಷಕರ ನೇಮಕಾತಿ, ವಿದ್ಯಾರ್ಥಿಗಳಿಗೆ ಮುರಾರ್ಜಿ, ರಾಣಿಚನ್ನಮ್ಮ ಮುಂತಾದ ವಸತಿನಿಲಯಗಳಿಗೆ ಪ್ರವೇಶಾತಿ, ಶಾಲಾ ಕೊಠಡಿಗಳ / ಗ್ರಂಥಾಲಯ / ಕನ್ನಡ ಭವನ ನಿರ್ಮಾಣ, ಉನ್ನತ ಶಿಕ್ಷಣಗಳಿಗೆ ರಾಜ್ಯದ ವಿದ್ಯಾರ್ಥಿಗಳಂತೆ ಹೊರರಾಜ್ಯದವರಿಗೆ ಸಮಾನ ಅವಕಾಶ, ಹೊರನಾಡ ಕನ್ನಡಿಗರಿಗೆ ಮೀಸಲಾತಿ ನಿಯಮಗಳ ಪರಿಷ್ಕರಣೆ, ರಾಜ್ಯದ ಶಾಲಾ–ಕಾಲೇಜುಗಳಿಗೆ ಹೊರನಾಡ ಕನ್ನಡಿಗರ ವಿದ್ಯಾರ್ಥಿಗಳು ತೆರಳಲು ಮತ್ತು ಹೊರನಾಡ ಪತ್ರಕರ್ತರಿಗೆ ರಾಜ್ಯದ ಸರ್ಕಾರಿ ಬಸ್ ಗಳಲ್ಲಿ ಸಂಚರಿಸಲು ರಿಯಾಯಿತಿ ಪಾಸ್ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಇಲಾಖೆಗಳ ಕಾರ್ಯದರ್ಶಿಗಳ ಗಮನಕ್ಕೆ ತರಲಾಯಿತು.
ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು ಮಾತನಾಡಿ, ರಾಜ್ಯದ ವಿವಿಧ ವಸತಿ ನಿಲಯಗಳ ಪ್ರವೇಶಾತಿಗೆ ಹೊರ ರಾಜ್ಯದ ಗಡಿ ಕನ್ನಡಿಗರಿಗೆ ಅವಕಾಶ ಮಾಡಿಕೊಡುವುದಾಗಿ ತಿಳಿಸಿದರು.
ಕೇರಳ ರಾಜ್ಯದ ಗಡಿ ಕನ್ನಡ ಪ್ರದೇಶಗಳ ಹೆಸರುಗಳನ್ನು ಮಲೆಯಾಳಿಕರಣ ಮಾಡುತ್ತಿರುವ ಬಗ್ಗೆ, ಇರುವ ಕಾನೂನಾತ್ಮಕ ಅವಕಾಶಗಳನ್ನು ಪರಿಶೀಲಿಸಿ, ವರದಿ ನೀಡಲು, ಸಂಸದೀಯ ವ್ಯವಹಾರಗಳ ಇಲಾಖಾ ಕಾರ್ಯದರ್ಶಿಗಳಿಗೆ ಮುಖ್ಯ ಕಾರ್ಯದರ್ಶಿಗಳು ಸೂಚಿಸಿದರು.
ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಮಾತನಾಡಿ, ರಾಜ್ಯದ ಹಾಗೂ ಹೊರರಾಜ್ಯದ ಗಡಿ ಸಮಸ್ಯೆಗಳ ಬಗ್ಗೆ ಪರಿಶೀಲಿಸಲು ಒಂದೊಂದು ಇಲಾಖೆಗೆ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಸೂಚಿಸಿದರು. ಪ್ರಸ್ತುತ ಕರ್ನಾಟಕ ಸರ್ಕಾರದಿಂದ ಹೊರನಾಡ ಕನ್ನಡಿಗರಿಗೆ ಇರುವ ಸವಲತ್ತುಗಳ ಬಗ್ಗೆ, ಹೊರರಾಜ್ಯಗಳಲ್ಲಿ ವ್ಯಾಪಕ ಪ್ರಚಾರ ಮಾಡುವಂತೆ ಸೂಚನೆ ನೀಡಿದರು.
ಪ್ರತಿ ಗಡಿ ಜಿಲ್ಲೆಯಲ್ಲಿ ನಡೆಯುವ ಕೆಡಿಪಿ ಸಭೆಯಲ್ಲಿ ಗಡಿ ಸಮಸ್ಯೆಗಳ ವಿಷಯಗಳನ್ನು ಗಂಭೀರವಾಗಿ ಚರ್ಚಿಸುವಂತೆ ಸೂಚನೆ ನೀಡುವುದಾಗಿ ಹಾಗೂ ಈ ಸಭೆಗಳಿಗೆ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ವಿಶೇಷ ಆಹ್ವಾನಿತರಾಗಿ ಆಹ್ವಾನಿಸಲು ಸೂಚನೆ ನೀಡಿದರು. ಗಡಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕೂಡ ಗಡಿ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕಿಸಿ, ಅವರು ನಡೆಸುವ ಸಭೆಯಲ್ಲಿ ಚರ್ಚಿಸುವಂತೆ ತಿಳಿಸಿದರು.
ಒಟ್ಟಾರೆ ಕರ್ನಾಟಕದ ಇತಿಹಾಸದಲ್ಲಿ ಪಥಮ ಬಾರಿ ಹೊರರಾಜ್ಯಗಳ ಗಡಿ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರ ಕಂಡುಕೊಳ್ಳಲು ಸೂಚಿಸಿದ ಮುಖ್ಯ ಕಾರ್ಯದರ್ಶಿಗಳನ್ನು 6 ಹೊರರಾಜ್ಯಗಳ ಗಡಿ ಕನ್ನಡಿಗರ ಪರವಾಗಿ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ರವರು ವೈಯಕ್ತಿಕವಾಗಿ ಅಭಿನಂದನೆ ತಿಳಿಸಿದರು.
ಕೆ.ಡಿ.ಪಿ ಸಭೆಗಳಲ್ಲಿ ಗಡಿ ವಿಷಯವನ್ನು ಪ್ರತ್ಯೇಕವಾಗಿ ಚರ್ಚಿಸಲಾಯಿತು. ಎಲ್ಲಾ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಸೋಮಣ್ಣ ಬೇವಿನಮರದ, ಹಾಗೂ ಗಡಿ ಕಾರ್ಯದರ್ಶಿಗಳಾದ ಪ್ರಕಾಶ್ ಮತ್ತೀಹಳ್ಳಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.