ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಾದಿಗ ಬಂಧುಗಳೇ “ಮನೆಗೊಬ್ಬ ಮಗನನ್ನು ದತ್ತು ಕೊಡಿ” ಒಳ ಮೀಸಲಾತಿ ಜಾರಿಯ ಜೀವನ್ಮರಣ ಹೋರಾಟದ ಅಂತಿಮ ಕಾಲಘಟ್ಟವಿದು ಎಂದು ಅಂಬೇಡ್ಕರ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ ಬಿ.ಪಿ.ತಿಪ್ಪೇಸ್ವಾಮಿ ಕರೆ ನೀಡಿದರು.
ಚಿತ್ರದುರ್ಗ ನಗರದ ಕೋಟೆನಾಡು ಬುದ್ಧ ವಿಹಾರದಲ್ಲಿ ಭಾನುವಾರ ನಡೆದ ಒಳ ಮೀಸಲಾತಿ ಜಾರಿ ಮೇಲ್ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್ ತೀರ್ಪಿನ ನಂತರದ ಮುಂದಿನ ನಡೆ ಕುರಿತು ಆಯೋಜಿಸಿದ್ದ ಚರ್ಚಾಗೋಷ್ಠಿಯಲ್ಲಿ ಮಾತನಾಡಿದರು.
ಒಳಮೀಸಲಾತಿ ಜಾರಿ ಬಗ್ಗೆ ಸರಕಾರ ಸಬೂಬು ಹೇಳುತ್ತಾ ಮುಂದೂಡುತ್ತಿರುವುದು ತಿರಸ್ಕರಿಸಿದಂತೆಯೇ ಸರಿ. ಸುಪ್ರೀಂ ಕೋರ್ಟು ಒಳ ಮೀಸಲಾತಿ ಜಾರಿಗೆ ಇರುವ ಎಲ್ಲಾ ಆತಂಕಗಳನ್ನು ದೂರಪಡಿಸಿದಾಗಲೂ ಸಬೂಬು ಹೇಳುತ್ತಿರುವುದು ಆಂತರ್ಯದಲ್ಲಿ ವಿರೋಧ ಅಡಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಮನಸೋ ಇಚ್ಛೆ ಮೀಸಲಾತಿಯ ಫಲ ಉಣ್ಣುತ್ತಿರುವ ಸ್ಪೃಶ್ಯ ಬಲಾಢ್ಯರ ಒತ್ತಡಕ್ಕೆ ಸರ್ಕಾರ ಮಣಿದಂತಿದೆ ಎಂದು ಆರೋಪಿಸಿದರು.
ಇನ್ನು ಮುಂದೆ ಯಾವುದೇ ರಾಜಕಾರಣಿಗಳ, ರಾಜಕೀಯ ಪಕ್ಷಗಳ ಸಾಂತ್ವನದ ಸಿಹಿ ಮಾತುಗಳನ್ನ ನಂಬುವ ಅವಶ್ಯಕತೆಯಿಲ್ಲ. ನಮ್ಮ ಮಾದಿಗ ಜನಾಂಗದೊಳಗೆ ಒಗ್ಗಟ್ಟ ಗಟ್ಟಿಗೊಳಿಸಿ ಪ್ರದರ್ಶಿಸುವುದೇ ಅಂತಿಮ ಮಾರ್ಗ. ವೈಯಕ್ತಿಕ ತ್ಯಾಗವಿಲ್ಲದೆ ಪ್ರಪಂಚದಲ್ಲಿ ಯಾವ ಚಳುವಳಿ ಯಶಸ್ವಿಯಾದ ಚರಿತ್ರೆಯಿಲ್ಲ.
ಹಳ್ಳಿಗಾಡಿನ ಅಶಕ್ತ ಮಾದಿಗ ಯುವಕರ ಮೇಲೆ ಚಳುವಳಿಯ ಪೂರ್ಣ ಭಾರ ಹೇರದೆ, ಜನಾಂಗದ ಪ್ರತಿಯೊಬ್ಬರೂ ಮನೆಯ ದೈನಂದಿನ ಕಾರ್ಯದಂತೆ ಹೋರಾಟದ ಚಳುವಳಿಯಲ್ಲಿ ಪಾಲ್ಗೊಳ್ಳಬೇಕಿದೆ ಎಂದು ಕರೆ ನೀಡಿದರು.
ಕಾಂಗ್ರೆಸ್ ಸಮಾವೇಶದ ಪ್ರಣಾಳಿಕೆಯ ಪ್ರಥಮ ಸಂಪುಟದ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ತರುವ ಬಗ್ಗೆ ಚಿತ್ರದುರ್ಗ ಡಿಕ್ಲರೇಷನ್‌ನಲ್ಲಿ ಘೋಷಿಸಿದನ್ನು ಮರೆತಿರುವ ಕಾಂಗ್ರೆಸ್ ಪಕ್ಷಕ್ಕೆ ಚಿತ್ರದುರ್ಗದಿಂದಲೇ ಚಳುವಳಿ ಆರಂಭಿಸುವ ಮೂಲಕ ಎಚ್ಚರಿಕೆ ನೀಡಬೇಕಾಗಿದೆ.
ಮಾದಿಗ ನೌಕರರ ಪಾತ್ರವಿಲ್ಲದೇ ಒಳ ಮೀಸಲಾತಿ ಜಾರಿ ಚಳುವಳಿ ಯಶಸ್ವಿಯಾಗುವುದಿಲ್ಲ. ಮೈಚಳಿ ಬಿಟ್ಟು ಹೊರಬನ್ನಿ, ಪಕ್ಷ-ತತ್ವ-ಸಿದ್ಧಾಂತ- ಮಠಗಳ ಹಿತಾಸಕ್ತಿಯ ಚೌಕಟ್ಟು ಮೀರಿ ಒಂದಾಗದಿದ್ದರೆ ಜನಾಂಗದ ಸೋಲಿಗೆ ನಾವೇ ಕಾರಣವಾಗುತ್ತೇವೆ ಎಂದು ಅವರು ಎಚ್ಚರಿಸಿದರು.
ಡಿಎಸ್‌ಎಸ್ ರಾಜ್ಯ ಸಂಚಾಲಕ ತರುವನೂರು ರಾಜಣ್ಣ ಮಾತನಾಡಿ ಪರಿಶಿಷ್ಟ ಜಾತಿಗಳಲ್ಲಿ ಎಡ ಮತ್ತು ಬಲ ಜಾತಿಗಳಿಗಿರುವ ವ್ಯತ್ಯಾಸಗಳನ್ನು ವಿವರಿಸಿದರು. ೧೯೧೧ ರಲ್ಲಿ ಬ್ರಿಟಿಷ್ ಸರಕಾರ ಆರಂಭಿಸಿದ ಅಸ್ಪೃಶ್ಯರಿಗೆ ಪ್ರತ್ಯೇಕ ಸೌಕರ್ಯಗಳ ಮಾಹಿತಿ ನೀಡುವುದರ ಜೊತೆಗೆ ಇತ್ತೀಚಿನ ಸುಪ್ರೀಂ ಕೋರ್ಟ್ನ ತೀರ್ಪಿನವರೆಗೂ ಒಳ ಮೀಸಲಾತಿ ನಡೆದ ಬಂದ ದಾರಿ ಬಗ್ಗೆ ವಿವರಿಸಿದರು.
ಇದು ಮಾದಿಗರ ನಿಜವಾದ ಸ್ವಾತಂತ್ರ‍್ಯ ಸಂಗ್ರಾಮ. ಬೀದರ್-ಚಾಮರಾಜದನಗರದವರೆಗೆ ಪ್ರತಿ ಹಳ್ಳಿಯಲ್ಲಿಯೂ ತುಂಬಿರುವ ಮಾದಿಗ ಜನಾಂಗವು ಒಳ ಮೀಸಲಾತಿ ಜಾರಿಯಾಗುವವರೆಗೂ ವಿರಮಿಸಬಾರದೆಂದು ಅವರು ಕರೆ ನೀಡಿದರು.
ಈ ಸಂದರ್ಭದಲ್ಲಿ ಚಳ್ಳಕೆರೆ ಬಿಎಸ್‌ಐ ಅಧ್ಯಕ್ಷ ನನ್ನಿವಾಳ ರವಿ, ಡಿಎಸ್‌ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ, ಉಪನ್ಯಾಸಕ ಈ.ನಾಗೇಂದ್ರಪ್ಪ, ರೇವಣ್ಣ, ಹಿಂದೂಧರ ಗೌತಮ್, ಬೆಸ್ಕಾಂ ತಿಪ್ಪೇಸ್ವಾಮಿ, ರಮೇಶ್ ಬನ್ನಿಕೋಡ್, ಶಿಕ್ಷಕಿ ಗಿರಿಜಾ, ಶಾಂತ, ಶಕುಂತಲಾ, ಉಷಾ ರೈಲ್ವೆ ನಿವೃತ್ತ ಮುಖ್ಯ ಇಂಜಿನಿಯರ್ ರಂಗಸ್ವಾಮಿ ಇತರರಿದ್ದರು.