ಕನ್ನಡ ಭಾಷೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ- ಎಂ.ಸಿದ್ದೇಶ್

News Desk

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕನ್ನಡ ನಾಡು, ನುಡಿ, ಸಂಸ್ಕೃತಿ, ಸಾಹಿತ್ಯ ಹಾಗೂ ಕಲೆಯ ಬಗೆಗೆ ಅಭಿರುಚಿ ಬೆಳೆಸಿಕೊಳ್ಳುವ ಮೂಲಕ ನಮ್ಮ ಶ್ರೀಮಂತ ಪರಂಪರೆಯನ್ನು ನೈಜ ವಾರಸುದರರಾಗಿ ಕನ್ನಡತನವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಹಶೀಲ್ದಾರ್ ಎಂ. ಸಿದ್ದೇಶ್ ತಿಳಿಸಿದರು.

ನಗರದ ನೆಹರು ಮೈದಾನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ನಗರಸಭೆ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 70ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳಿಂದ ಧ್ವಜವಂದನೆ ಸ್ವೀಕರಿಸಿ ನಂತರ ಮಾತನಾಡಿದರು. 

- Advertisement - 

ಕರ್ನಾಟಕದ ಏಕೀಕರಣಕ್ಕಾಗಿ ಶ್ರಮಿಸಿದ ಕನ್ನಡದ ಕುಲಪುರೋಹಿತರಾದ ಆಲೂರು ವೆಂಕಟರಾಯರು, ಸಾಹಿತಿಗಳಾದ ಕುವೆಂಪು, ಬಿ.ಎಂ.ಶ್ರೀಕಂಠಯ್ಯ, ಶಿವರಾಮ್ ಕಾರಂತರು, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಅ.ನ.ಕೃಷ್ಣರಾಯರು ಸೇರಿದಂತೆ ಅನೇಕ ಗಣ್ಯರು ಜೀವನವಿಡೀ ಹೋರಾಡಿದ್ದು, ಅವರ ಹೋರಾಟದ ಫಲವಾಗಿ ಕನ್ನಡನಾಡು ರಚನೆಯಾಗಿದೆ.

ಕನ್ನಡ ನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಗುರುತರವಾದ ಜವಾಬ್ದಾರಿ ಕನ್ನಡಿಗರಾದ ನಮ್ಮೆಲ್ಲರ ಮೇಲಿದೆ. ಸುಮಾರು 2 ಸಾವಿರ ವರ್ಷಗಳ ಪ್ರಾಚೀನ ಪರಂಪರೆ ಹೊಂದಿದ್ದು, ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಪ್ರಕೃತಿ, ಪರಿಸರ, ಭಾಷೆ, ಬರಹ ಧರ್ಮ ಇವೆಲ್ಲವುಗಳಲ್ಲಿ ಮಹತ್ತರವಾದ ಒಲವು-ಚೆಲುವುಗಳನ್ನು ಪಡೆದಿರುವುದು ನಮಗೆಲ್ಲಾ ಹೆಮ್ಮೆಯ ಸಂಗತಿಯಾಗಿದೆ.

- Advertisement - 

ಭಾಷೆಯ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ರೂಪಿಸಿ ಕಲಾವಿದರಿಗೆ ಸಂಭಾವನೆ, ಪಿಂಚಣಿ ನೀಡಿ ಗೌರವಿಸಲಾಗುತ್ತಿದೆ. ನಾವೆಲ್ಲರೂ ಯಾವ ಸಂದರ್ಭದಲ್ಲಿ ಸಹ ನಾಡು, ನುಡಿ, ಗಡಿಯ ಬಗ್ಗೆ ಅಭಿಮಾನ ಇಟ್ಟುಕೊಂಡು ಈ ನೆಲ, ಜಲದ ಸಂರಕ್ಷಣೆ ಬಗ್ಗೆ ಕಾಳಜಿ ವಹಿಸೋಣ ಮತ್ತು ಈ ನಾಡಿನಲ್ಲಿ ಜನಿಸಿರುವ ನಾವು ರಾಜ್ಯ, ಭಾಷೆ, ಸಂಸ್ಕೃತಿಯ ಬಗ್ಗೆ ಹೆಮ್ಮೆ ಪಡೋಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ಪ್ರೆಸಿಡೆನ್ಸಿ ಶಾಲೆ ಪ್ರಥಮ, ಸೆಂಟ್ ಆನ್ಸ್ ಶಾಲೆ ದ್ವಿತೀಯ, ಅಸಂಷನ್ ಶಾಲೆ ತೃತೀಯ ಹಾಗೂ ಜೈಮಿನಿ ಪಬ್ಲಿಕ್ ಶಾಲೆ ಸಮಾಧಾನಕರ ಬಹುಮಾನ ಪಡೆದುಕೊಂಡವು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಯಶಸ್ವಿ ಕಾರ್ಯನಿರ್ವಹಿಸಿದವರನ್ನು ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷ ಬಾಲಕೃಷ್ಣ, ಉಪಾಧ್ಯಕ್ಷೆ ಮಂಜುಳಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಈರಲಿಂಗೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಂಡಿ ಸಣ್ಣಪ್ಪ, ಮಮತಾ , ರತ್ನಮ್ಮ,ಕಸಾಪ ಅಧ್ಯಕ್ಷ ಸಿ.ರಾಮಚಂದ್ರಪ್ಪ, ನಗರಸಭೆ ಸದಸ್ಯೆ ಶಿವರಂಜನಿ ಯಾದವ್, ನಗರಸಭೆ ಪೌರಾಯುಕ್ತ ಎ.ವಾಸೀಂ, ಬಿಇಒ ಸಿ.ಎಂ.ತಿಪ್ಪೇಸ್ವಾಮಿ, ಡಿವೈಎಸ್ಪಿ ಶಿವಕುಮಾರ್, ಸಿಪಿಐ ರಾಘವೇಂದ್ರ ಕಾಂಡಿಕೆ, ಆನಂದ್

ತಾಲ್ಲೂಕು ಪಂಚಾಯಿತಿ ಇಒ  ಡಾ.ಪ್ರಮೋದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್, ಕರವೇ ಅಧ್ಯಕ್ಷ  ರಾಮಕೃಷ್ಣಪ್ಪ, ರೈತ ಸಂಘದ ಜಿಲ್ಲಾಧ್ಯಕ್ಷ ಕೆಟಿ ತಿಪ್ಪೇಸ್ವಾಮಿ, ತಾಲ್ಲೂಕು ರೈತ ಸಂಘದ ಅಧ್ಯಕ್ಷ ಆಲೂರು ಸಿದ್ದರಾಮಣ್ಣ ಸೇರಿದಂತೆ ನಗರಸಭಾ ಸದಸ್ಯರು, ವಿವಿಧ ಸಂಘಟನೆಗಳ ಕಾರ್ಯಕರ್ತರು, ಪದಾಧಿಕಾರಿಗಳು, ಅಧಿಕಾರಿಗಳ ವರ್ಗ ಸೇರಿದಂತೆ ಮತ್ತಿತರರು ಹಾಜರಿದ್ದರು.

 

Share This Article
error: Content is protected !!
";