ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇಲ್ಲಿನ ಚಿತ್ರದುರ್ಗ ಲೋಕೋಪಯೋಗಿ ಇಲಾಖೆಯ ಗುಣ ಭರವಸೆ ಉಪ ವಿಭಾಗದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಖಂಡೇನಹಳ್ಳಿಯ ಜಿ.ಕೃಷ್ಣಪ್ಪ ಹಾಗೂ ಇದೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಹಾಯಕ ಇಂಜಿನಿಯ್ ಟೋಗ್ಯಾನಾಯ್ಕ್ ಇವರಿಗೆ ಇಲಾಖೆ ಮತ್ತು ಸ್ನೇಹಿತರ ವತಿಯಿಂದ ಸೋಮವಾರ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.
ಸಹಾಯಕ ಇಂಜಿನಿಯರ್ ಶ್ರೀಮತಿ ಹಬೀಬಾ ಕೌಸರ್ ಮಾತನಾಡಿ ಇಲಾಖೆಯಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ತೆಗೆಯುತ್ತಿದ್ದ ಕೃಷ್ಣಪ್ಪ ಅವರು ಸಾಕಷ್ಟು ಸ್ನೇಹ ಜೀವ, ಭಾವುಕ ಜೀವಿಯಾಗಿದ್ದರು. ನಮ್ಮ ಇಲಾಖೆಗೆ ಇವರು ಆಸ್ತಿಯಾಗಿದ್ದಾರೆ, ಇವರಿಬ್ಬರ ಸೇವೆ ಗಮನಾರ್ಹವಾಗಿದೆ. ಇಲಾಖೆ ಮುನ್ನಡೆಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ನಿಷ್ಠೆ ಹಾಗೂ ಪ್ರೀತಿಯಿಂದ ನಿಸ್ವಾರ್ಥ ಸೇವೆ ನೀಡಿದ್ದಾರೆ. ಇವರಿಬ್ಬರಿಗೂ ನಿವೃತ್ತಿ ಜೀವನದಲ್ಲಿ ದೇವರು ಆರೋಗ್ಯ ಮತ್ತು ನೆಮ್ಮದಿ ನೀಡಲಿ ಎಂದು ಅವರು ಶುಭ ಹಾರೈಸಿದರು.
ಸಹಾಯಕ ಇಂಜಿನಿಯರ್ ಕವಿತಾ ಮಾತನಾಡಿ ನಿವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ಇವರಿಗೆ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ನುಡಿಮುತ್ತುಗಳನ್ನು ತಿಳಿಸಿ ಅರುವತ್ತರ ನಂತರ ಮರಳಿ ಅರಳಬೇಕು, ಆಸರೆಗೊಂದು ವ್ಯವಸ್ಥೆ, ಕೇಳಲಿಕ್ಕೊಂದು ಕಿವಿ ಇದ್ದರೆ ಬದುಕು ನೆಮ್ಮದಿಯಾಗಿರುತ್ತದೆ ಎಂದು ತಿಳಿಸಿದರು.
ವೃತ್ತಿಯಿಂದ ನಿವೃತ್ತಿ ಅನಿವಾರ್ಯ, ನಿವೃತ್ತಿಯವರೆಗೆ ಪ್ರತಿಯೊಬ್ಬರಿಗೂ ದುಡಿಮೆ ಅನಿವಾರ್ಯ ಮುಂದಿನ ಜೀವನವನ್ನು ನಮ್ಮದಾಗಿ ಕಳೆಯೋಣ. ಇಬ್ಬರೂ ಅಚ್ಚುಕಟ್ಟಾಗಿ ತಮ್ಮ ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ತಮಗೆ ಬಯಸಿದ್ದು ದೇವರು ಕರುಣಿಸಲಿ ಎಂದು ಅವರು ಶುಭ ಹಾರೈಸಿದರು.
ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಜಿ.ಕೃಷ್ಣಪ್ಪ ಸನ್ಮಾನ ಸ್ವೀಕರಿಸಿ ಮಾತನಾಡಿ ಸರ್ಕಾರಿ ಸೇವೆಯನ್ನು ಅತ್ಯಂತ ನಿಷ್ಠೆ ಮತ್ತು ಪ್ರಮಾಣಿಕವಾಗಿ ಮಾಡಿದ್ದೇನೆ. ಇಲಾಖೆಯಲ್ಲಿ ಎಂದೂ ನಾನು ಮೇಲಾಧಿಕಾರಿಯಂತೆ ನಡೆದುಕೊಳ್ಳದೆ ಪ್ರತಿಯೊಬ್ಬರನ್ನು ಸಮಾನವಾಗಿ ಕಂಡಿದ್ದೇನೆ. ಇಲಾಖೆಯ ಸಿಬ್ಬಂದಿ ವರ್ಗದವರು ನನಗೆ ಸೇರಿಸಿದ ಪ್ರೀತಿ ವಿಶ್ವಾಸ, ಕಾಳಜಿ ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಸೇವಾ ನಿವೃತ್ತಿ ಹೊಂದುತ್ತಿರುವ ಜಿ.ಕೃಷ್ಣಪ್ಪ ಮತ್ತು ಟೋಗ್ಯಾನಾಯ್ಕ್ ಇವರುಗಳಿಗೆ ಶಾಲು ಹೊದಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ವೀಣಾ ಕೃಷ್ಣಪ್ಪ, ಡಾ.ಕೆ ರಕ್ಷಿತ್, ಡಾ.ಕೆ ಕಾವ್ಯ, ಡಾ.ಜಿ.ರಘು, ಸಹಾಯಕ ಇಂಜಿನಿಯರುಗಳಾದ ಶಶಿಕಾಂತ್, ಚೇತನ್, ಕವಿತಾ, ನವೀನ್, ಪ್ರಥಮ ದರ್ಜೆ ಸಹಾಯಕಿ ತಸ್ಲೀಮಾ ಬಾನು, ದ್ವಿತೀಯ ದರ್ಜೆ ಸಹಾಯಕಿ ಕೃಪಾ ಇತರೆ ಸಿಬ್ಬಂದಿಗಳು ಮತ್ತು ಹೊರಗುತ್ತಿಗೆ ನೌಕರರು, ಗುತ್ತಿಗೆದಾರರು, ಆತ್ಮೀಯ ಸ್ನೇಹೀತರು ಹಾಜರಿದ್ದರು.