ಸೌಂದರ್ಯ ಪ್ರಜ್ಞೆ ಮತ್ತು ಜಾಹೀರಾತು    

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸೌಂದರ್ಯ ಪ್ರಜ್ಞೆ ಮತ್ತು ಜಾಹೀರಾತು……ಮನುಷ್ಯ ರೂಪದ ಸೌಂದರ್ಯ ಪ್ರಜ್ಞೆ ಎಂಬ ವಿಸ್ಮಯ………..
 ಒಬ್ಬ ಅತ್ಯಂತ ಸುಂದರ ಯುವಕ/ ಯುವತಿ ನಮಗೆ ಪರಿಚಯವಾಗುತ್ತಾರೆ. ಕೊನೆಗೆ ಅದು ಆತ್ಮೀಯ ಸ್ನೇಹವಾಗಿ ಮುಂದೆ ವ್ಯಾವಹಾರಿಕ ಸಂಬಂಧವೂ ಏರ್ಪಡುತ್ತದೆ. ಆಗ ಆ ವ್ಯಕ್ತಿ ನಮ್ಮ ಜೊತೆ ಉತ್ತಮ ಬಾಂಧವ್ಯ ಹೊಂದಿರುವವರೆಗೂ ಆತ ಅಥವಾ ಆಕೆ ಸುಂದರವಾಗಿಯೇ ಕಾಣುತ್ತಾರೆ. ಆದರೆ ಏನೋ ಕಾರಣದಿಂದಾಗಿ  ಆ ಸುಂದರ ವ್ಯಕ್ತಿಯಿಂದ ನಮಗೆ ಮೋಸವಾಗುತ್ತದೆ ಎಂದು ಭಾವಿಸಿ. ಆಗ

ಯಾವ ಸುಂದರ ವ್ಯಕ್ತಿ ತನ್ನ ಸೌಂದರ್ಯದಿಂದ ನಮ್ಮ ಮನ ಗೆದ್ದಿದ್ದರೋ ಅದೇ ವ್ಯಕ್ತಿ ಈಗ ನಮಗೆ ಕೆಟ್ಟದಾಗಿ, ಕುರೂಪಿಯಾಗಿ ಕಾಣತೊಡಗುತ್ತಾರೆ. ಅವರ ಮುಖ ನೋಡಲೇ ಅಸಹ್ಯವಾಗುತ್ತದೆ‌.

ಅದೇ ಬಾಹ್ಯ ಸೌಂದರ್ಯ ವ್ಯಾವಹಾರಿಕ ವ್ಯತ್ಯಾಸದಿಂದ ನಮಗೆ ಆ ರೀತಿಯ ಭಾವನೆ ಉಂಟು ಮಾಡುತ್ತದೆ….
 ಅದೇ ರೀತಿ ಒಬ್ಬ ಕುರೂಪಿ ವ್ಯಕ್ತಿ ಅಥವಾ ನೋಡಲು ಅಷ್ಟೇನು ಚಂದವಿಲ್ಲದ ವ್ಯಕ್ತಿ ನಮ್ಮ ಜೀವನದ ಅತ್ಯಂತ ಕಷ್ಟದ ದಿನಗಳಲ್ಲಿ ನಮಗೆ ಸಹಾಯ ಮಾಡಿದರೆ ಅದೇ ಕುರೂಪಿ ವ್ಯಕ್ತಿಯ ಚಿತ್ರಣ ನಮ್ಮ ಮನಸ್ಸಿನಲ್ಲಿ ಬದಲಾವಣೆ ಹೊಂದಿ ಸುಂದರವಾಗಿ ಕಾಣತೊಡಗುತ್ತಾರೆ. ಅವರ ನಡವಳಿಕೆಗಳು ನಮಗೆ ಆತ್ಮೀಯತೆಯ‌ ಅನುಭವ ನೀಡುತ್ತದೆ….

 ಅಂದರೆ ವ್ಯಕ್ತಿಯ  ಸೌಂದರ್ಯ ಆತ ನಮ್ಮೊಡನೆ ಹೊಂದಿರುವ ಸಂಬಂಧದಿಂದ ಮತ್ತು ಆತನ ಬಗೆಗಿನ ನಮ್ಮ ಅಭಿಪ್ರಾಯದಿಂದ ನಿರ್ಧರಿಸಲ್ಪಡುತ್ತದೆ ಎಂದಾಯಿತು. ಹಾಗಾದರೆ ಮೇಲ್ನೋಟದ ಸೌಂದರ್ಯವನ್ನು ದೀರ್ಘಕಾಲದಲ್ಲಿ ನಿರ್ಧರಿಸುವುದು ನಮ್ಮ ಗುಣ – ನಡವಳಿಕೆ ಎಂದು ಭಾವಿಸಬಹುದಲ್ಲವೇ……

 ಇದೇ ಆಧಾರದ ಮೇಲೆ ಬಹುತೇಕ ಸಿನಿಮಾಗಳು, ಅದರಲ್ಲಿ ನಟಿಸುವ ನಟ ನಟಿಯರ ಗುಣ ರೂಪಗಳು ಸೃಷ್ಟಿಯಾಗಿವೆ. ಒಬ್ಬ  ಯುವತಿಯನ್ನು 5/6 ಜನ ಯುವಕರು ಅತ್ಯಾಚಾರ ಮಾಡಲು ಪ್ರಯತ್ನಿಸುತ್ತಾರೆ. ಆಕೆ ಆ ಸಮಯದಲ್ಲಿ ಅಸಹಾಯಕಳಾಗಿರುತ್ತಾಳೆ. ಅದೇ ಸಮಯಕ್ಕೆ ಆಪದ್ಭಾಂದವನಂತೆ ಪ್ರತ್ಯಕ್ಷವಾಗುವ  ನಾಯಕ ಆಕ್ರೋಶದಿಂದ ಆ ಎಲ್ಲಾ ಜನರನ್ನು ಹೊಡೆದು ನಾಯಕಿಯನ್ನು ರಕ್ಷಿಸುತ್ತಾನೆ.

ನೋಡುವ ಪ್ರೇಕ್ಷಕನಿಗೆ ಅವನ ಒಳ್ಳೆಯತನದಿಂದಲೇ ಸುಂದರ ನಾಯಕನಾಗಿ ಕಾಣುತ್ತಾನೆ. ಆ ಯುವಕರು ನೋಡಲು ಸುಂದರವಾಗಿದ್ದರೂ ವಿಲನ್ ಗಳಂತೆ ಕೆಟ್ಟದಾಗಿ ಕಾಣುತ್ತಾರೆ. ಅಂದರೆ ಬಾಹ್ಯ ಸೌಂದರ್ಯ ಭ್ರಮೆ ಮತ್ತು ತಾತ್ಕಾಲಿಕ. ಆತನ ಒಳ್ಳೆಯತನವೇ ನಿಜ ಮತ್ತು ಶಾಶ್ವತ ಸೌಂದರ್ಯ ಎಂದು ಪರಿಗಣಿಸಬಹುದಲ್ಲವೇ……

 ಇದೇ ಸತ್ಯವಾದಲ್ಲಿ ಎಷ್ಟೊಂದು ಚೆಂದ ಅಲ್ಲವೆ. ಒಂದು ವೇಳೆ ನಮ್ಮ ಸೌಂದರ್ಯವನ್ನು ನಮ್ಮ ಒಳ್ಳೆಯ ನಡತೆ ನಿರ್ಧರಿಸುವುದಾದರೆ ಅದು ಅನೇಕರಿಗೆ ಉತ್ತಮ ನಾಗರಿಕ ನಡವಳಿಕೆಯನ್ನು ರೂಪಿಸಿಕೊಳ್ಳಲು ಪ್ರೇರಣೆಯಾಗಬಹುದಲ್ಲವೇ.

 ಬಾಹ್ಯ ಸೌಂದರ್ಯ ಕೇವಲ ಮೊದಲ ನೋಟದ Physical ಅಪಿಯರೆನ್ಸ್ ಮಾತ್ರ ಮತ್ತು ಭ್ರಮೆ. ನಿಮ್ಮ ಗುಣವೇ ಶಾಶ್ವತ ಸೌಂದರ್ಯ….ಸಮಾಜದ ಎಲ್ಲರ ಮನಸ್ಸು – ಆತ್ಮ – ವ್ಯಕ್ತಿತ್ವಗಳಲ್ಲಿ ಇದು ನೆಲೆಗೊಳ್ಳಲಿ ಎಂದು ಆಶಿಸುತ್ತಾ………………….

 ಈ ಸೌಂದರ್ಯ ಜಾಹೀರಾತು ಮಾಡೆಲ್ ಗಳಿಗೆ……
, ಹಾಲು ಬಿಳುಪಿನ ಸುರಸುಂದರಾಂಗಿಣಿಯೇ, ಹಾಯ್ಚೆಲುವಾಂತ ಚೆನ್ನಿಗ ಮನ್ಮಥನೇ, Fair & Lovely – Fair & Handsome ಜಾಹೀರಾತುಗಳ ಸಪ್ತಲೋಕದಲ್ಲೂ ಮಿಂಚುವ ಮಾಡಲ್ ಗಳೇ, ನಿಮ್ಮ ಸೌಂದರ್ಯಕ್ಕೆ – ಅದೃಷ್ಟಕ್ಕೆ ಅಭಿನಂದನೆಗಳು. ಆ Product ಗಳ Brand Ambassador ಆಗಿರುವುಕ್ಕೆ ಸಂತೋಷ.

ಆದರೆ,……
ಪಕ್ಕದ ಮನೆಯ ಆ ಕಪ್ಪಗಿನ ಹುಡುಗಿಯೊಬ್ಬಳು, ಈ ನೆಲದಲ್ಲಿ ಹುಟ್ಟಿರುವುದಕ್ಕೆ, ತನ್ನ ನಿಯಂತ್ರಣದಲ್ಲಿಲ್ಲದ ದೇಹದ ಬಣ್ಣದ ಕಾರಣಕ್ಕಾಗಿ ಮದುವೆಯಾಗದೆ ತನ್ನೊಳಗೇ ಕೊರಗುತ್ತಿದ್ದಾಳೆ, ಮೊದಲು ಅವಳಿಗೆ ಹೇಳಿ, ” ಬಣ್ಣಗಳಲ್ಲಿ ಯಾವುದು ಶ್ರೇಷ್ಠ ಎಂದು “……..ಆಕರ್ಷಕ ದೇಹದ ಮಾಡಲ್ ಲೋಕದ ದೇವಾನು ದೇವತೆಗಳೇ, ಸೂಟು ಬೂಟಿನ ಮಿರಿಮಿರಿ ಮಿಂಚುವ ಬಟ್ಟೆಗಳ ದಿಗ್ಗಜರೇ…..

 ರೈಲು ನಿಲ್ದಾಣದ ಆ ಕಲ್ಲು ಬೆಂಚಿನ ಮೇಲೆ ಅರೆ ಬಟ್ಟೆಯಲ್ಲಿ ಮಲಗಿರುವ ನಮ್ಮದೇ ಕಂದಮ್ಮಗಳಿಗೆ ಒಮ್ಮೆ ತಿಳಿ ಹೇಳಿ, ಅವರ ಬದುಕಿನ Brand ambassador ಯಾರೆಂದು….Shampoo – Soap – Perfume ಗಳ ಘಮಲುಗಳಲ್ಲಿ ಮುಳುಗೇಳುವ ರಾಜಕುಮಾರ ರಾಜಕುಮಾರಿಯರೇ, ನಮ್ಮ ಹಳ್ಳಿಯ ಅಜ್ಜಿಯ ಹೇನು ಬಿದ್ದ ತಲೆಯ ಕೆರೆತ ಕಡಿಮೆಯಾಗಲು ಏನು ಮಾಡಬೇಕೆಂದು ಸ್ವಲ್ಪ ಹೇಳಿ‌.

ಅದಕ್ಕೂ ಪ್ರಚಾರ ರಾಯಭಾರಿಗಳಾಗುವಿರೇ ….ಚಿನ್ನ ವಜ್ರ ಒಡವೆಗಳ ರಾಯಭಾರಿಗಳೇ, ಅಪ್ಸರೆಯರೇ, ವಿಧವೆಯರಿಗೆ ಮಾಸಾಶನ ಅರ್ಜಿ ಎಲ್ಲಿ ಸಿಗುತ್ತದೆ , ಅದನ್ನು ಭರ್ತಿ ಮಾಡುವುದು ಹೇಗೆ ಸ್ವಲ್ಪ ತಿಳಿಸಿಕೊಡಿ.

ಅವರಿಗಾರು Brand ambassador ಗಳು…..ಏಕೆಂದರೆ ಅವರೂ ಇದೇ ನೆಲದಲ್ಲಿ ಹುಟ್ಟಿದ್ದಾರೆ. ನಿಮ್ಮಂತೆಯೇ ಗಂಡು ಹೆಣ್ಣಿನ ಮಿಲನದ ಕೂಸುಗಳು . ನಿಮ್ಮ ಹತ್ತುಪಟ್ಟು ಶಕ್ತಿ ಸಾಮರ್ಥ್ಯ ಶ್ರಮ ಪ್ರಾಮಾಣಿಕತೆ ಅವರಿಗಿದೆ.

ಆದರೆ….ನಿಮ್ಮಂತ ಮುಖವಾಡಗಳಿಲ್ಲ. ಅವರು ಕೇವಲ ಮನುಷ್ಯ ಜೀವಿಗಳು. ಕಪಟ ಅರಿಯದ ಸೃಷ್ಟಿಯ ಕೂಸುಗಳು. ಶ್ರೀಮಂತರ  ಅವಶ್ಯಕತೆಗಳನ್ನು ಪೂರೈಸಲು ಎಲ್ಲಾ ವ್ಯವಸ್ಥೆಗಳು ಇವೆ. ಆದರೆ ಸಂಕಷ್ಟದ ಜನರ ನೋವುಗಳನ್ನು ಆಲಿಸಲು ಇರುವುದಾದರೂ ಯಾರು…. ?

ಲೇಖನ:ವಿವೇಕಾನಂದ. ಎಚ್. ಕೆ. 9844013068……                

- Advertisement -  - Advertisement -  - Advertisement - 
Share This Article
error: Content is protected !!
";