ಚಂದ್ರವಳ್ಳಿ ನ್ಯೂಸ್, ಚಿಂತಾಮಣಿ:
ಉದ್ಯಮಿಗಳು ಫಾರ್ಮ್ ಗಳಲ್ಲಿ ಸಾಕಾಣಿಕೆ ಮಾಡುತ್ತಿರುವ ಹಂದಿಗಳಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆಯಾಗಿರುವುದು ದೃಢಪಟ್ಟಿದೆ. ಮುನ್ನೆಚ್ಚರಿಕಾ ಕ್ರಮವಾಗಿ 57 ಹಂದಿಗಳನ್ನು ಸಾಯಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೆಬ್ಬರಿ ಗ್ರಾಮದಲ್ಲಿರುವ ಹಂದಿಗಳ ಸಾಕಾಣಿಕೆ ಕೇಂದ್ರದಲ್ಲಿ ಆಫ್ರಿಕನ್ ಜ್ವರ ಇರುವುದು ಬೆಳಕಿಗೆ ಬಂದಿದೆ. ಆಫ್ರಿಕನ್ ಹಂದಿ ಜ್ವರ ದೃಢ: ಹಂದಿ ಫಾರ್ಮ್ನಲ್ಲಿ ಕಳೆದ ಆಗಸ್ಟ್ 19ರಿಂದ ಇಲ್ಲಿಯವರೆಗೂ 100 ಹಂದಿಗಳು ಸಾವನ್ನಪ್ಪಿವೆ. ಇದರಿಂದ ಎಚ್ಚೆತ್ತ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದರು.
ಹಂದಿಗಳ ರಕ್ತದ ಸ್ಯಾಂಪಲ್ ಅನ್ನು ಭೋಪಾಲ್ನ ರಾಷ್ಟ್ರೀಯ ಲ್ಯಾಬ್ಗೆ ಕಳುಹಿಸಲಾಗಿತ್ತು. ಲ್ಯಾಬ್ ವರದಿಯಲ್ಲಿ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಫಾರಂನಲ್ಲಿರುವ 57 ಹಂದಿಗಳನ್ನು ಸಾಯಿಸಲು ನಿರ್ಧರಿಸಲಾಗಿದೆ.
ಪಶುಪಾಲನಾ, ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ರಂಗಪ್ಪ ಪ್ರತಿಕ್ರಿಯಿಸಿ, ಫಾರ್ಮ್ನಲ್ಲಿ ಹಂದಿಗಳು ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಭೇಟಿ ನೀಡಿ ಪರಿಶೀಲಿಸಲಾಗಿತ್ತು. ಹಂದಿ ಜ್ವರ ದೃಢಪಟ್ಟ ಕಾರಣ ಸದ್ಯ ಫಾರ್ಮ್ನಿಂದ ಹಂದಿಗಳ ಸಾಗಟವನ್ನು ನಿಷೇಧಿಸಲಾಗಿದೆ. ಆಫ್ರಿಕನ್ ಹಂದಿ ಜ್ವರ ಸಾಂಕ್ರಾಮಿಕ ರೋಗ. ದೇಶೀಯ ಮತ್ತು ಕಾಡು ಹಂದಿಗಳಿಗೆ ಈ ರೋಗ ಹರಡುತ್ತದೆ. ರೋಗಕ್ಕೆ ತುತ್ತಾದ ಹಂದಿಗಳು ಸಾವನ್ನಪ್ಪುತ್ತವೆ.
ಈ ಜ್ವರಕ್ಕೆ ನಿರ್ದಿಷ್ಟ ಔಷಧಿ ಮತ್ತು ಚಿಕಿತ್ಸೆ ಇಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಜ್ವರ ದೃಢಪಟ್ಟ ಸ್ಥಳದಿಂದ ಒಂದು ಕಿ.ಮೀ ವ್ಯಾಪ್ತಿಯಲ್ಲಿನ ಹಂದಿಗಳನ್ನು ಕೊಲ್ಲಲಾಗುತ್ತದೆ. ಸೋಂಕಿತ ಹಂದಿಗಳಿಂದ ಮನುಷ್ಯನಿಗೆ ರೋಗ ಹರಡುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ ಜೂನ್‌ನಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿತ್ತು. ಇದರಿಂದ ಜಿಲ್ಲೆಯ ಜನ ಆತಂಕಗೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು, ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು.
ಇಳಕಲ್ ತಾಲೂಕಿನ ಗೊರಬಾಳ ಗ್ರಾಮದಲ್ಲಿರುವ ಸಾಕಾಣಿಕೆ ಕೇಂದ್ರದಲ್ಲಿ ರೋಗ ಪತ್ತೆಯಾಗಿತ್ತು. ಅನ್ಯರಾಜ್ಯದಿಂದ ಹಂದಿಗಳನ್ನು ಆಮದು ಮಾಡಿಕೊಂಡಿರುವ ವೇಳೆ ರೋಗ ಬಂದಿರುವ ಶಂಕೆ ವ್ಯಕ್ತವಾಗಿದೆ. ಮೇ 22ಕ್ಕೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಹಂದಿಗಳ ರಕ್ತದ ಮಾದರಿಯನ್ನು ಭೋಪಾಲ್ನ ಲ್ಯಾಬೊರೇಟರಿಗೆ ಕಳುಹಿಸಿ ಪರೀಕ್ಷಿಸಿದ್ದರು ಎಂದು ತಿಳಿಸಿದರು.
ಆಫ್ರಿಕನ್ ಹಂದಿ ಜ್ವರ ಇರುವುದು ಪರೀಕ್ಷಾ ವರದಿಯಲ್ಲಿ ದೃಢಪಟ್ಟಿತ್ತು. ಹೀಗಾಗಿ ಪಶು ಸಂಗೋಪನೆ ಇಲಾಖೆ ಅಧಿಕಾರಿಗಳು ಮೂರು ರ‍್ಯಾಪಿಡ್ ಟೀಮ್ಗಳನ್ನು ಕಾರ್ಯಾಚರಣೆಗೆ ಇಳಿಸಿದ್ದರು.
0-1 ಕಿ.ಮೀ ವರೆಗೆ ರೋಗ ಪೀಡಿತ ವಲಯ ಹಾಗೂ 1-10 ಕಿ.ಮೀ ವರೆಗೆ ಜಾಗೃತ ವಲಯ ಎಂದು ಘೋಷಿಸಿದ್ದರು. ರೋಗ ಹರಡಿರುವ ಹಂದಿಗಳನ್ನು ಜೀವಂತ ಸಮಾಧಿ ಮಾಡಲಾಗಿತ್ತು ಎನ್ನಲಾಗಿದೆ.

