ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪೊಲೀಸ್ ಇಲಾಖೆಯ ನೇಮಕಾತಿಗೆ ವಯೋಮಿತಿ ಸಡಿಲಿಕೆ ಮಾಡಲು ಸದ್ಯದಲ್ಲೇ ವಯೋಮಿತಿ ಸಡಿಲಿಕೆ ಪ್ರಕಟಿಸುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಂಗಳವಾರ ಅವರು ಸುದ್ದಿಗಾರರ ಜೊತೆ ಮಾತನಾಡಿ, ಸರ್ಕಾರಿನೌಕರರ ವಯೋಮಿತಿ ಸಡಿಲಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಒಂದು ಸಲಕ್ಕೆ ಅನ್ವಯ ಆಗುವಂತೆ ಸಡಿಲಿಕೆ ಮಾಡಲಾಗಿದೆ. 2027ರವರೆಗೆ ವಯೋಮಿತಿ ಸಡಿಲಿಸಿದ್ದೇವೆ. ಪೊಲೀಸ್ ಇಲಾಖೆಯಲ್ಲಿ ಶಾಶ್ವತ ವಯೋಮಿತಿ ಸಡಿಲಿಕೆಗೆ ಮುಂದಾಗಿದ್ದೇವೆ. ಕಾನ್‌ಸ್ಟೇಬಲ್, ಪಿಎಸ್‌ಐ, ಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳ ವಯೋಮಿತಿ ಸಡಿಲಿಕೆ ಬಗ್ಗೆ ಪರಿಶೀಲನೆ ನಡೆದಿದೆ ಎಂದು ಅವರು ತಿಳಿಸಿದರು. ಈಗಾಗಲೇ ದೇಶದ ಇತರೆ ರಾಜ್ಯಗಳಲ್ಲಿ ಎಷ್ಟು ವಯೋಮಿತಿ ಇದೆ ಎಂಬ ಮಾಹಿತಿ ತರಿಸಿಕೊಂಡಿದ್ದು ಸದ್ಯದಲ್ಲೇ ವಯೋಮಿತಿ ಸಡಿಲಿಕೆ ಆದೇಶ ಪ್ರಕಟಿಸುತ್ತೇವೆ ಎಂದು ಡಾ. ಪರಮೇಶ್ವರ್ ತಿಳಿಸಿದರು.
ಕಾನೂನು ತೊಡಕು: ಧರ್ಮಸ್ಥಳ ತಲೆಬುರಡೆ ಪ್ರಕರಣದ ತನಿಖೆ ವಿಳಂಬ, ಷಡ್ಯಂತ್ರ ಮಾಡಿದವರನ್ನು ಬಂಧಿಸದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್, ಷಡ್ಯಂತ್ರ ಮಾಡಿದವರ ಬಂಧನಕ್ಕೆ ಕಾನೂನು ತೊಡಕುಗಳಿವೆ. ಎಫ್ಎಸ್ಎಲ್ ವರದಿ ಇನ್ನೂ ಬಂದಿಲ್ಲ. ಎಸ್ಐಟಿಯವರು ಅವರ ಕೆಲಸ ಮಾಡುತ್ತಿದ್ದಾರೆ. ಇತ್ತೀಚಿನ ಸಾಕ್ಷ್ಯಗಳನ್ನು ಎಫ್ಎಸ್ಎಲ್ಗೆ ಕಳಿಸಲಾಗಿದೆ. ಎಲ್ಲವನ್ನೂ ಅಂತಿಮಗೊಳಿಸಬೇಕು. ಆಮೇಲೆ ಎಸ್‌ಐಟಿ ವರದಿ ನೀಡಲಿದೆ. ತನಿಖೆ ಬೇಗ ಮುಗಿಸುವಂತೆ ಸೂಚಿಸಿದ್ದೇವೆ. ಬಂದವರೆಲ್ಲ ದೂರು, ಅರ್ಜಿ ಕೊಡೋದು ಆಗುತ್ತಿದೆ. ಇದಕ್ಕೆಲ್ಲ ಅಂತ್ಯ ಹಾಡಲು ಬಯಸಿದ್ದೇವೆ ಎಂದು ಸಚಿವ ಪರಮೇಶ್ವರ್ ತಿಳಿಸಿದರು.
ಮಹೇಶ್ ಶೆಟ್ಟಿ ತಿಮರೋಡಿ ನಾಪತ್ತೆ ವಿಚಾರವಾಗಿ ಮಾತನಾಡಿ, ತಿಮರೋಡಿ ಅವರು ಗಡಿಪಾರು ವಿಚಾರವನ್ನು ಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ. ಅದೇನಾಗಲಿದೆ ಮೊದಲು ನೋಡಬೇಕು. ತಿಮರೋಡಿ ಬಂಧನ, ಕ್ರಮಕ್ಕೆ ಕಾನೂನು ಚೌಕಟ್ಟಿದೆ. ಅದರ ಪ್ರಕಾರವೇ ಎಲ್ಲವನ್ನೂ ಮಾಡಬೇಕು. ನಾವು ಕಾನೂನು ಚೌಕಟ್ಟಿನಲ್ಲೇ ಮಾಡಬೇಕು. ಇದರ ಬಗ್ಗೆ ಸರ್ಕಾರ ಎಸ್ಐಟಿಗೆ ಸೂಚನೆ ನೀಡಲಾಗುವುದಿಲ್ಲ. ಅಂತಿಮ ತೀರ್ಮಾನ ಎಸ್ಐಟಿಯವರದ್ದು. ತನಿಖೆ ನಾಳೆಯೇ ಮುಗಿಸಿ ಅಂತ ಹೇಳಲಾಗುವುದಿಲ್ಲ. ಎಲ್ಲವನ್ನೂ ನೋಡಿ ಎಸ್‌ಐಟಿ ತೀರ್ಮಾನಿಸುತ್ತದೆ ಎಂದು ಸಚಿವರು ಹೇಳಿದರು.
ಜಾತಿ ಸಮೀಕ್ಷೆಯ ಗೊಂದಲದ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡುವ ಮೂಲಕ ಸ್ಥಿತಿಗತಿ ತಿಳಿಯಲಿದೆ. ಸಮುದಾಯಗಳ ಆರ್ಥಿಕ ಸಾಮಾಜಿಕ ಸ್ಥಿತಿ ಗೊತ್ತಾಗಲಿದೆ ಎಂದು ಸಚಿವ ಪರಮೇಶ್ವರ್ ತಿಳಿಸಿದರು.
ಕೇಂದ್ರ ಸರ್ಕಾರ ಕೂಡ ಜನ ಗಣತಿ ಮಾಡುತ್ತದೆ. ಆಗ ನಾವು ಭಾಗವಹಿಸಲ್ಲ ಅಂದ್ರೆ ಆಗುತ್ತಾ?. ಬಿಜೆಪಿ ನಾಯಕರಿಗೆ ಇದು ಅರ್ಥವಾಗಲ್ವಾ?. ನಿಗದಿತ ಗಡುವಿನೊಳಗೆ ಸಮೀಕ್ಷೆ ಮುಗಿಸ್ತೇವೆ. ನಮ್ಮ ಜಿಲ್ಲೆಯಲ್ಲೂ ವೇಗವಾಗಿ ಸಮೀಕ್ಷೆ ನಡೆದಿದೆ ಎಂದು ಅವರು ತಿಳಿಸಿದರು.
ಸಚಿವ ಜಮೀರ್ ಅವರು ಸಂಪುಟ ಪುನಾರಚನೆ ಬಗ್ಗೆ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಪರಮೇಶ್ವರ್, ಸಂಪುಟ ಪುನಾರಚನೆ ಕಾರ್ಯ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಮಗೆ ಗೊತ್ತು ಸಹ ಆಗುವುದಿಲ್ಲ. ಕೆಲವರು ಅವರ ಅಭಿಪ್ರಾಯ ಹೇಳಿರಬಹುದು. ಎರಡೂವರೆ ವರ್ಷಕ್ಕೆ ಸಂಪುಟ ಪುನಾರಚನೆ ಅಂತ ಆ ರೀತಿ ಹೇಳಿಕೊಂಡೇ ಬರಲಾಗುತ್ತಿದೆ. ಇದರ ಬಗ್ಗೆ ನಮಗ್ಯಾರಿಗೂ ಗೊತ್ತಿಲ್ಲ. ಇದರ ಬಗ್ಗೆ ಹೈಕಮಾಂಡ್ ಕೂಡ ಹೇಳಿಲ್ಲ. ಸಿಎಂ, ಕೆಪಿಸಿಸಿ ಅಧ್ಯಕ್ಷರು ಹೇಳಿಲ್ಲ. ಒಳಗೆ ಏನು ಅಂಡರ್ಸ್ಟ್ಯಾಂಡಿಂಗ್ ಆಗಿದೆ ಗೊತ್ತಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಅವರು ತಿಳಿಸಿದರು.

