ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಭಾರತೀಯ ಸಂಸ್ಕೃತಿಯಲ್ಲಿ ಜಾತ್ರೆ ಮತ್ತು ಉತ್ಸವಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಮೂಲಕ ಜನರು ಸಂಭ್ರಮ ಸಡಗರವನ್ನು ಅನುಭವಿಸುತ್ತಾರೆ ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಮಹಾಸ್ವಾಮಿಗಳು ಹೇಳಿದರು.
ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಹೋಬಳಿಯ ಕಲ್ಕುಂಟೆ ಗ್ರಾಮದಲ್ಲಿ ಶ್ರೀ ಅಹೋಬಲ ನರಸಿಂಹಸ್ವಾಮಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಯಕ ಸಮಾಜದಲ್ಲಿ ೬೦೦ ಕ್ಕೂ ಹೆಚ್ಚು ಬೆಡಗುಗಳು ಇವೆ. ನಾಯಕ ಸಮಾಜದಲ್ಲಿ ಹೆಚ್ಚಿನ ಬುಡಕಟ್ಟು ಸಂಸ್ಕೃತಿಯನ್ನು ನಾವು ಕಾಣುತ್ತಿದ್ದೇವೆ. ನಾವು ಯಾರು ಸಹ ಜಾತಿಗೆ ಅರ್ಜಿ ಹಾಕಿ ಹುಟ್ಟಿಲ್ಲ. ನಾವೆಲ್ಲರೂ ಎಲ್ಲಾ ಜಾತಿಗಳೊಂದಿಗೆ ಒಟ್ಟಾಗಿ ಹೋಗಬೇಕಿದೆ.
ಭಾರತದಲ್ಲಿ ಸ್ವಾತಂತ್ರ್ಯ ಬಂದು ೭೬ ವರ್ಷಗಳಾದರೂ ಸಹ ಪರಿಶಿಷ್ಟರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ.ಇಂತಹ ಎಲ್ಲಾವನ್ನೂ ಗಮನ ಹರಿಸಿದ ಡಾ.ಅಂಬೇಡ್ಕರ್ ಅವರು ನಮ್ಮನ್ನು ಮೇಲೆತ್ತಲು ಸಂವಿಧಾನದಲ್ಲಿ ಮೀಸಲಾತಿ ದೊರಕಿಸಿ ಕೊಟ್ಟರು.
ನಾಯಕ ಸಮಾಜದಲ್ಲಿ ೪೮ ಬುಡಕಟ್ಟು ಸಮುದಾಯಗಳಿವೆ. ಪರಿಶಿಷ್ಟ ಪಂಗಡಕ್ಕೆ ೧೫ ಶಾಸಕರು ರಾಜ್ಯದಲ್ಲಿ ಆಯ್ಕೆ ಆಗುವ ಮೂಲಕ ಸಮಾಜಕ್ಕೆ ಶಕ್ತಿ ಬಂದಿದೆ. ಮೀಸಲಾತಿ ಹೆಚ್ಚಳದಿಂದ ೭ ರಿಂದ ೮ ಜನರಿಗೆ ಮೆಡಿಕಲ್ ಸೀಟು ಮೀಸಲಿಡುತ್ತಿದ್ದಾರೆ. ೩೦ ವರ್ಷಗಳಿಂದ ನಾವು ಶಿಕ್ಷಣ ಮತ್ತು ಉದ್ಯೋಗದಿಂದ ವಂಚಿತರಾಗುತ್ತಿದ್ದರು ಆದರೆ ಮೀಸಲಾತಿ ಹೋರಾಟದಿಂದ ನಮಗೆ ಸಾಕಷ್ಟು ಅನುಕೂಲವಾಯಿತು ಎಂದರು.
ನಮ್ಮ ಸಮಾಜದ ಜಾಗೃತಿಗಾಗಿ ವಾಲ್ಮೀಕಿ ಗುರುಪೀಠದಲ್ಲಿ ವಾಲ್ಮೀಕಿ ಜಾತ್ರೆ ಮಾಡುತ್ತಿದ್ದೇವೆ. ಸಮಾಜದ ಮಕ್ಕಳು ಶಿಕ್ಷಣವನ್ನು ಪಡೆದು ಜಾಗೃತಿಯಿಂದ ತಮ್ಮ ಊರುಗಳಲ್ಲಿ ಅರಿವು ಮೂಡಿಸಬೇಕು. ಸಮಾಜ ಸಂಘಟನೆ ಮಾಡುವ ಕೆಲಸವನ್ನು ನಾವೆಲ್ಲರೂ ಮಾಡೋಣ ಎಂದು ಕರೆ ನೀಡಿದರು.
ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡಿ ಬುಡಕಟ್ಟು ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ನಮ್ಮ ಸಮಾಜ ಮುನ್ನೆಸಿಕೊಂಡು ಹೋಗುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಿ ಜಾತಿ ವ್ಯವಸ್ಥೆ ಹೆಚ್ಚು ಕಾಣುತ್ತಿದ್ದೇನೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಉತ್ತಮ ಅಭ್ಯಾಸ ಮಾಡಿ ಉನ್ನತ ಹುದ್ದೆಗಳನ್ನು ಅಲಂಕಾರ ಮಾಡಿ ತಮ್ಮ ಹಳ್ಳಿಗಳಲ್ಲ ಜಾಗೃತಿ ಮೂಡಿಸಿ ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಶ್ರಮಿಸಬೇಕು ಎಂದು ತಿಳಿಸಿದರು.
ವಾಲ್ಮೀಕಿ ಸಮಾಜದ ನಮ್ಮ ಗುರುಗಳಾದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಾಗಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಕೊಡಿಸುವ ಮೂಲಕ ಇಡೀ ರಾಜ್ಯದ ಸಾವಿರಾರು ಯುವ ಸಮೂಹಕ್ಕೆ ಬದುಕು ಕಟ್ಟಿಕೊಡುವಲ್ಲಿ ಸ್ವಾಮೀಜಿ ಶ್ರಮಿಸಿದ್ದಾರೆ.
ನಮ್ಮ ಕ್ಷೇತ್ರದ ನನ್ನಿವಾಳ ಕಟ್ಟೆಮನೆಗಳಲ್ಲಿ ನಾವು ಇನ್ನೂ ಕಟ್ಟೆಮನೆ ಸಂಸ್ಕೃತಿ ಇದೆ. ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಾವು ನಡೆಯುತ್ತಿದ್ದೇವೆ. ಬುಡಕಟ್ಟು ಸಂಸ್ಕೃತಿಗಳ ತವರೂರು ಚಿತ್ರದುರ್ಗ ಜಿಲ್ಲೆಯಾಗಿದೆ. ಅಹೋಬಲ ನರಸಿಂಹಸ್ವಾಮಿ ದೇವರು ದೇವಸ್ಥಾನ ಬಂದಿರುವುದು ನನಗೆ ಸಂತೋಷ ತಂದಿದೆ. ಒಂದಲ್ಲ ಒಂದು ಕಷ್ಟ ಇರುತ್ತದೆ. ಶ್ರೀಮಂತರಿಗೆ ಕಷ್ಟವಿದೆ. ಬಡವರಿಗೆ ಕಷ್ಟವಿದೆ. ಆದರೆ ಇದ್ದಿದ್ದರಲ್ಲಿ ತೃಪ್ತಿಪಟ್ಟುಕೊಂಡು ಬದುಕು ನಡೆಸಿಕೊಂಡು ಮುಂದೆ ಸಾಗಬೇಕು ಎಂದರು. ದೇವರು ಉತ್ತಮ ಮಳೆ ಬೆಳೆಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡಿ ಅಹೋಬಲ ನರಸಿಂಹ ಸ್ವಾಮಿ ದೇವರಿಗೆ ಮತ್ತು ನಮ್ಮಕುಟುಂಬಕ್ಕೆ ಅವಿನಾಭಾವ ಸಂಬಂಧವಿದೆ. ಬುಡಕಟ್ಟು ಸಂಪ್ರದಾಯಗಳು ಭಕ್ತಿಯಿಂದ ನಡೆಯುತ್ತದೆ. ಯಾವುದೇ ಅದ್ದೂರಿ ಆಡಂಬರ ಇಲ್ಲದೆ, ಶೋಷಣೆ ಇಲ್ಲದೇ ಬುಡಕಟ್ಟು ದೇವರ ಕಾರ್ಯ ನಡೆಯುತ್ತದೆ ಎಂದು ತಿಳಿಸಿದರು.
ಮಾಜಿ ನಗರಸಭೆ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ನಮ್ಮ ಮನೆ ದೇವರು ಶ್ರೀ ಅಹೋಬಲ ನರಸಿಂಹ ಸ್ವಾಮಿ ದೇವರ ಜಾತ್ರೆ ಪ್ರತಿ ಮೂರು ವರ್ಷಕ್ಕೆ ನಡೆಯುತ್ತದೆ. ಜಾತ್ರೆಯಲ್ಲಿ ಬುಡಕಟ್ಟು ಸಂಸ್ಕೃತಿ ಸಾರುತ್ತೇವೆ. ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಬುಡಕಟ್ಟು ಸಂಸ್ಕೃತಿಯನ್ನು ನಾವು ಕಾಣುತ್ತೇವೆ ಎಂದರು.
ಮುಖಂಡರಾದ ಲಿಂಗವ್ವನಾಯಕನಹಳ್ಳಿ ತಿಪ್ಪೇಸ್ವಾಮಿ, ಸೊಂಡೇಕೊಳ ಶ್ರೀನಿವಾಸ್, ಶೇಖರಪ್ಪ, ಮದ್ದಣ್ಣ, ಹಳದರ ತಿಪ್ಪೇಸ್ವಾಮಿ, ವಕೀಲ ನಾಗರಾಜ್ ಇದ್ದರು.
“ಚಳ್ಳಕೆರೆ ಕ್ಷೇತ್ರದಲ್ಲಿ ಬುಡಕಟ್ಟು ವಿಶ್ವ ವಿದ್ಯಾಲಯ ಮಾಡಲು ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ. ಇದರ ಜೊತೆಗೆ ಚಿತ್ರದುರ್ಗ ಜಿಲ್ಲೆ ಕೇಂದ್ರದಲ್ಲಿ ಕಿತ್ತೂರು, ಹಂಪಿ ಉತ್ಸವ ರೀತಿಯಲ್ಲಿ ದುರ್ಗೋತ್ಸವ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದ್ದು ಸ್ವಾಮೀಜಿ ನೇತೃತ್ವದಲ್ಲಿ ಸಭೆ ಸಹ ನಡೆಸಲಾಗಿದೆ”.
ಟಿ.ರಘುಮೂರ್ತಿ, ಅಧ್ಯಕ್ಷರು, ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ , ಶಾಸಕರು ಚಳ್ಳಕೆರೆ ಕ್ಷೇತ್ರ