ಚಂದ್ರವಳ್ಳಿ ನ್ಯೂಸ್, ನವದೆಹಲಿ:
ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ನೂತನ ಬೃಹತ್ ಪ್ರಧಾನ ಕಚೇರಿ ಇಂದಿರಾ ಭವನವನ್ನು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಬುಧವಾರ ಉದ್ಘಾಟಿಸಿದರು.
ಪ್ರಜಾಪ್ರಭುತ್ವ, ರಾಷ್ಟ್ರೀಯತೆ, ಜಾತ್ಯಾತೀತತೆ, ಸಮಗ್ರ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಅಡಿಪಾಯದ ಮೇಲೆ ಎಐಸಿಸಿ ನೂತನ ಕೇಂದ್ರ ಕಚೇರಿ ನಿರ್ಮಿಸಲಾಗಿದೆ.
ಕಾಂಗ್ರೆಸ್ ನ 140 ವರ್ಷಗಳ ವೈಭವಯುತ ಇತಿಹಾಸವನ್ನು ಪಾಲಿಸುತ್ತಾ, ಇಲ್ಲಿನ ಗೋಡೆಗಳು ಸತ್ಯ, ಅಹಿಂಸೆ, ತ್ಯಾಗ, ಹೋರಾಟ ಮತ್ತು ದೇಶಭಕ್ತಿಯ ಕಥೆಯನ್ನು ನಿರೂಪಿಸುತ್ತವೆ. ಕಾಂಗ್ರೆಸ್ ಪಕ್ಷ ಹೊಸ ಶಕ್ತಿ, ಹೊಸ ಸಂಕಲ್ಪ, ಹೊಸ ವಿಶ್ವಾಸದೊಂದಿಗೆ ಭಾರತದ ಉಜ್ವಲ ಭವಿಷ್ಯ ರೂಪಿಸಲು ಶ್ರಮಿಸುವುದರ ಜೊತೆಗೆ ‘ನ್ಯಾಯ‘ದ ಧ್ವಜವನ್ನು ಹಾರಿಸಲು ಸಿದ್ಧವಾಗಿದೆ.
ಕಾರ್ಯಕ್ರಮದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಹಿರಿಯ ಕಾಂಗ್ರೆಸ್ ನಾಯಕರು ಮತ್ತು ದೇಶಾದ್ಯಂತದ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೂತನ ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಕರ್ನಾಟಕದ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಪ್ರಧಾನ ಕಚೇರಿ: ಮವದೆಹಲಿಯ ಕೋಟ್ಲಾ ರಸ್ತೆಯ 9ಎ ವಿಳಾಸದಲ್ಲಿ ನೂತನ ಪ್ರಧಾನ ಕಚೇರಿ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷದ ಪ್ರಧಾನ ಕಚೇರಿಯು ಪ್ರಜಾಪ್ರಭುತ್ವ, ರಾಷ್ಟ್ರೀಯತೆ, ಜಾತ್ಯತೀತತೆ, ಅಂತರ್ಗತ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ತತ್ವಗಳ ಆಧಾರದಲ್ಲಿ ನಿರ್ಮಾಣವಾಗಿರುವ ಸ್ಮಾರಕವಾಗಿದೆ ಎಂದು ಕಾಂಗ್ರೆಸ್ ಪಕ್ಷ ಬಣ್ಣಿಸಿದೆ.
ಹೊಸ ಶಕ್ತಿ, ಸಂಕಲ್ಪ ಮತ್ತು ವಿಶ್ವಾಸದೊಂದಿಗೆ, ಭಾರತದ ಉಜ್ವಲ ಭವಿಷ್ಯವನ್ನು ರೂಪಿಸಲು, ಜನರ ಒಳಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನ್ಯಾಯದ ಧ್ವಜವನ್ನು ಹಾರಿಸಲು ಕಾಂಗ್ರೆಸ್ ಸಿದ್ಧವಾಗಿದೆ ಎಂದು ಕಾಂಗ್ರೆಸ್ ಪಕ್ಷ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಈ ಕಟ್ಟಡವು ಸೇವೆ, ಸಾಮರಸ್ಯ, ಸಮರ್ಪಣೆ ಮತ್ತು ದೇಶಭಕ್ತಿಯ ಸಂಕೇತವಾಗಿದೆ ಎಂದು ಪಕ್ಷ ಹೇಳಿದೆ.
ಹೋರಾಟದ ಪ್ರತೀಕ-
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕಾಂಗ್ರೆಸ್ ಪಕ್ಷದ ಹೊಸ ಪ್ರಧಾನ ಕಚೇರಿಗೆ ಇಂದಿರಾ ಭವನ ಎಂದು ನಾಮಕಾರಣ ಮಾಡಲಾಗಿದೆ. ಇದು ಪ್ರಜಾಪ್ರಭುತ್ವ, ರಾಷ್ಟ್ರೀಯತೆ, ಜಾತ್ಯತೀತತೆ, ಅಂತರ್ಗತ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಅಡಿಪಾಯದ ಮೇಲೆ ನಿರ್ಮಾಣವಾಗಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ 140 ವರ್ಷಗಳ ಭವ್ಯ ಇತಿಹಾಸವನ್ನು ಸಂಕೇತಿಸುವ ಇಲ್ಲಿನ ಗೋಡೆಗಳು ಸತ್ಯ, ಅಹಿಂಸೆ, ತ್ಯಾಗ, ಹೋರಾಟ ಮತ್ತು ದೇಶಭಕ್ತಿಯ ಮಹಾನ್ ಕಥೆಯನ್ನು ಹೇಳುತ್ತವೆ ಎಂದು ಖರ್ಗೆ ತಿಳಿಸಿದರು.
ಸಮಾರಂಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಚೇರಿಯನ್ನು ಬಹಳ ಮಹತ್ವದ ಸಮಯದಲ್ಲಿ ಉದ್ಘಾಟಿಸುತ್ತಿದ್ದೇವೆ. ಭಾರತಕ್ಕೆ 1947 ರಲ್ಲಿ ನಿಜವಾದ ಸ್ವಾತಂತ್ರ್ಯ ಸಿಗಲಿಲ್ಲ, ಬದಲಾಗಿ ರಾಮ ಮಂದಿರ ನಿರ್ಮಾಣದ ನಂತರ ನಿಜವಾದ ಸ್ವಾತಂತ್ರ್ಯ ಸಿಕ್ಕಿದ್ದು ಎಂದು ನಿನ್ನೆ ಆರ್ಎಸ್ಎಸ್ ಮುಖ್ಯಸ್ಥರು ಹೇಳಿರುವುದು ಸಾಂಕೇತಿಕವಾಗಿದೆ. ಈ ಕಟ್ಟಡವು ಸಾಮಾನ್ಯ ಕಟ್ಟಡವಲ್ಲ. ಇದು ನಮ್ಮ ದೇಶದ ಮಣ್ಣಿನಿಂದ ಹೊರಹೊಮ್ಮಿದೆ, ಇದು ಲಕ್ಷಾಂತರ ಜನರ ಕಠಿಣ ಪರಿಶ್ರಮ ಮತ್ತು ತ್ಯಾಗ ಪ್ರತಿನಿಧಿಸುತ್ತದೆ.
ಸ್ವಾತಂತ್ರ್ಯ ಚಳವಳಿಯ ಫಲ ನಮ್ಮ ಸಂವಿಧಾನ. ಆದರೆ ಮೋಹನ್ ಭಾಗವತ್ ನಮ್ಮ ಸಂವಿಧಾನವನ್ನೇ ಸಾಂಕೇತಿಕವಾಗಿ ಟೀಕಿಸಿದ್ದಾರೆ. ಸಂವಿಧಾನವು ನಮ್ಮ ಸ್ವಾತಂತ್ರ್ಯವನ್ನು ಸಂಕೇತಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷವು ಯಾವಾಗಲೂ ಒಂದು ನಿರ್ದಿಷ್ಟ ಮೌಲ್ಯಗಳ ಪರವಾಗಿ ನಿಂತಿದೆ, ಅದು ಈ ಕಟ್ಟಡದಲ್ಲಿ ಪ್ರತಿಬಿಂಬಿತವಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಗೌರವಾರ್ಥ ಇಂದಿರಾ ಭವನ್ ಎಂದು ಹೆಸರಿಸಲಾದ ಪ್ರಧಾನ ಕಚೇರಿ 15 ವರ್ಷಗಳಿಂದ ನಿರ್ಮಾಣ ಹಂತದಲ್ಲಿತ್ತು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು, ಖಾಯಂ ಮತ್ತು ವಿಶೇಷ ಆಹ್ವಾನಿತರು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು, ಪಕ್ಷದ ಹಾಲಿ ಸಂಸದರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಪಿಸಿಸಿ ಅಧ್ಯಕ್ಷರು, ಮಾಜಿ ಸಿಎಲ್ಪಿ ನಾಯಕರು ಮತ್ತು ಮಾಜಿ ಕೇಂದ್ರ ಸಚಿವರು ಸೇರಿದಂತೆ 400ಕ್ಕೂ ಹೆಚ್ಚಿನ ಕಾಂಗ್ರೆಸ್ ಮುಖಂಡರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.