ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಕಿಡಿ ಹೊತ್ತಿಕೊಂಡಿದ್ದು ಈ ಕಿಚ್ಚು ದೆಹಲಿಗೂ ವ್ಯಾಪಿಸಿದೆ. ದೆಹಲಿ ನಾಯಕರ ಎದುರೇ ಅಧಿಕಾರ ಹಂಚಿಕೆ ಒಪ್ಪಂದ ಆಗಿರುವ ವಿಚಾರವಿದ್ದು ದೆಹಲಿಯಲ್ಲೇ ಲೆಕ್ಕ ಚುಕ್ತಾ ಮಾಡಲು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಬಣ ತಂತ್ರ ಹೂಡಿದೆ.
ಈಗಾಗಲೇ ಡಿ ಕೆ ಶಿವಕುಮಾರ್ ಬೆಂಬಲಿಗ ಶಾಸಕರ ಒಂದು ಗುಂಪು ಇದೇ ಕಾರಣಕ್ಕೆ ದೆಹಲಿಗೆ ತಲುಪಿ ಹೈಕಮಾಂಡ್‌ನಾಯಕರ ಮುಂದೆ ಹಾಜರಾತಿ ಹಾಕಿತ್ತು.
ಇದೀಗ ಮತ್ತೊಂದು ತಂಡ ದೆಹಲಿಯಲ್ಲಿ ಬೀಡುಬಿಟ್ಟಿದೆ. ಮಾಗಡಿ ಶಾಸಕ ಹೆಚ್ಸಿ ಬಾಲಕೃಷ್ಣ, ಮದ್ದೂರು ಶಾಸಕ ಕದಲೂರು ಉದಯ್, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.
ಮತ್ತೊಂದೆಡೆ, ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣಗಳ ಮಧ್ಯೆ ಸಿಎಂ ಕುರ್ಚಿಗಾಗಿ ನಡೆಯುತ್ತಿರುವ ಶೀತಲ ಸಮರ ಹೈಕಮಾಂಡ್ ನಾಯಕರಿಗೆ ತಲೆನೋವು ತಂದಿಟ್ಟಿದೆ.
ಹೀಗಾಗಿ, ಮೂರು ದಿನ ರಾಜ್ಯ ನಾಯಕರ ಅಹವಾಲು ಆಲಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಂಗಳವಾರ ದೆಹಲಿಗೆ ತೆರಳಿದ್ದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಜೊತೆಗೆ ಸಭೆ ನಡೆಸುವ ಸಾಧ್ಯತೆ ದಟ್ಟವಾಗಿದೆ.

