ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉದ್ಯಮಿ ಮೇಲೆ ಅಪರಿಚಿತ ದುಷ್ಕರ್ಮಿ ಒಬ್ಬ ಏರ್ ಗನ್ ಮೂಲಕ ಫೈರಿಂಗ್ ಮಾಡಿರುವ ಘಟನೆ ಬೆಂಗಳೂರು ನಗರದಲ್ಲಿ ನಡೆದಿದ್ದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸವನಗುಡಿಯ ಕೃಷ್ಣರಾವ್ ಪಾರ್ಕ್ ಬಳಿ ಡಿಸೆಂಬರ್-10ರಂದು ರಾತ್ರಿ 8:30ರ ಸುಮಾರಿಗೆ ಗುಂಡಿನ ದಾಳಿ ನಡೆದಿದೆ ಎಂದು ಉದ್ಯಮಿ ರಾಜಗೋಪಾಲ್ ಬಸವನಗುಡಿ ಠಾಣೆಗೆ ದೂರು ನೀಡಿದ್ದಾರೆ. ಏರ್ ಗನ್ ಶೂಟರ್‌ಗಾಗಿ ಹುಡುಕಾಟ ನಡೆದಿದೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಬಸವನಗುಡಿಯ ನರ್ತಕಿ ಹಾಗೂ ಕಾರ್ಗಿಲ್ ಬಾರ್‌ಆ್ಯಂಡ್ ರೆಸ್ಟೋರೆಂಟ್‌ಗಳ ಮಾಲೀಕರಾಗಿರುವ ರಾಜಗೋಪಾಲ್ ಅವರಿಗೆ ಅನಿರೀಕ್ಷಿತ ದಾಳಿಯಿಂದಾಗಿ ಕತ್ತಿನ ಭಾಗ ಗಾಯಗೊಂಡಿದೆ. ಅವರು ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಬಸವನಗುಡಿ ಪೊಲೀಸರು ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ರಾಜಗೋಪಾಲ್ ಅವರ ಹೇಳಿಕೆ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ರಾಜಗೋಪಾಲ್ ಅವರು ವಿಚಾರಣೆ ವೇಳೆ, ತಮಗೆ ಯಾರ ಮೇಲೂ ಅನುಮಾನವಿಲ್ಲ. ಯಾವುದೇ ಬೆದರಿಕೆ ಕರೆಗಳು ಬಂದಿರಲಿಲ್ಲ. ಫೈರಿಂಗ್ ಯಾಕೆ, ಯಾರು ಮಾಡಿದ್ದಾರೆ ಎನ್ನುವುದು ತಿಳಿದಿಲ್ಲ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಪೊಲೀಸರು ಪ್ರಕರಣದ ತನಿಖೆ ತೀವ್ರಗೊಳಿಸಿದ್ದು, ಏರ್ ಗನ್ ಶೂಟರ್‌ಗಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲದೆ, ಏರ್ ಗನ್ ಹೌದೋ ಅಲ್ಲವೋ ಎಂಬುದರಕುರಿತು ತನಿಖೆ ನಡೆಸುತ್ತಿರುವುದಾಗಿ ಬಸವನಗುಡಿ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.

