ಏರ್ ಇಂಡಿಯಾ ವಿಮಾನ ಅಪಘಾತದ ಸಾವಿನ ಸಂಖ್ಯೆ 265

News Desk

ಚಂದ್ರವಳ್ಳಿ ನ್ಯೂಸ್, ಅಹಮದಾಬಾದ್‌:
ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ AI 171 ವಿಮಾನ ಅಪಘಾತದ ಸ್ಥಳಕ್ಕೆ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಮಾನ ಪತನದಲ್ಲಿ ಒಟ್ಟು 265 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮೋದಿ ಅವರು ಇಲ್ಲಿನ ನಾಗರಿಕ ಆಸ್ಪತ್ರೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

- Advertisement - 

ಮೋದಿ ಅವರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ, ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ನಂತರ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಭೇಟಿ ಮಾಡಿದೆ. ವಿಮಾನ ದುರಂತದಿಂದ ನಾವೆಲ್ಲರೂ ತೀವ್ರ ಆಘಾತಗೊಂಡಿದ್ದೇವೆ. ಇಷ್ಟೊಂದು ಹಠಾತ್ ಮತ್ತು ಹೃದಯವಿದ್ರಾವಕ ರೀತಿಯಲ್ಲಿ ಹಲವಾರು ಜೀವಗಳನ್ನು ಕಳೆದುಕೊಂಡಿರುವುದು ಪದಗಳಿಗೆ ನಿಲುಕದಷ್ಟು ದೊಡ್ಡ ದುರಂತ. ಎಲ್ಲಾ ದುಃಖಿತ ಕುಟುಂಬಗಳಿಗೆ ಸಂತಾಪಗಳು ಎಂದು ಮೋದಿ ಅವರು ಬರೆದುಕೊಂಡಿದ್ದಾರೆ.
ವಿಮಾನ ಅಪಘಾತದಲ್ಲಿ ತಮ್ಮವರನ್ನು ಕಳೆದುಕೊಂಡವರ ನೋವು ನಮಗೆ ಅರ್ಥವಾಗುತ್ತದೆ. ವರ್ಷಗಳವರೆಗೆ ಈ ಆಘಾತ ನಮ್ಮನ್ನು ಕಾಡಲಿದೆ ಎಂದಿದ್ದಾರೆ.

- Advertisement - 

ಗುರುವಾರ ಮಧ್ಯಾಹ್ನ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಮೇಘನಿನಗರ ಪ್ರದೇಶದ ಬಿಜೆ ವೈದ್ಯಕೀಯ ಕಾಲೇಜಿನ ಸಂಕೀರ್ಣಕ್ಕೆ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನ (AI171) ಅಪ್ಪಳಿಸಿದ ಸ್ಥಳದಲ್ಲಿ  ಪ್ರಧಾನಿ ಸುಮಾರು 20 ನಿಮಿಷಗಳ ಕಾಲ ಪರಿಶೀಲಿಸಿ ಮಾಹಿತಿ ಪಡೆದುಕೊಂಡರು.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಮತ್ತು ಗುಜರಾತ್ ಗೃಹ ಸಚಿವ ಹರ್ಷ ಸಾಂಘವಿ ಅವರು ವಿಮಾನ ಕಾಲೇಜು ಹಾಸ್ಟೆಲ್ ಹೇಗೆ ಅಪ್ಪಳಿಸಿತು ಎಂಬುದರ ಬಗ್ಗೆ ಮೋದಿಗೆ ವಿವರಿಸಿದರು.

- Advertisement - 

ನಂತರ ಪ್ರಧಾನಿಯವರು ನಗರದ ಸಿವಿಲ್ ಆಸ್ಪತ್ರೆಗೆ ತೆರಳಿ ಅಪಘಾತದಲ್ಲಿ ಗಾಯಗೊಂಡವರನ್ನು ಭೇಟಿಯಾದರು. ಅಪಘಾತದಲ್ಲಿ ಪವಾಡ ಸದೃಶವಾಗಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಶ್‌ ಕುಮಾರ್ ರಮೇಶ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಅಲ್ಲದೆ 25 ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ಸಿ7 ವಾರ್ಡ್‌ಗೆ ಅವರು ಭೇಟಿ ನೀಡಿ ವೈದ್ಯರೊಂದಿಗೆ ಸಂವಾದ ನಡೆಸಿದರು. ಮೋದಿ ಅವರು ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಗುಜ್‌ಸೈಲ್ ಕಚೇರಿಯಲ್ಲಿ ರಾಜ್ಯ ಮತ್ತು ನಾಗರಿಕ ವಿಮಾನಯಾನ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಪೊಲೀಸ್ ಉಪ ಆಯುಕ್ತ ಕಾನನ್ ದೇಸಾಯಿ ಅವರು ಅಪಘಾತದ ಸ್ಥಳವನ್ನು ತೆರವುಗೊಳಿಸುವ ಕಾರ್ಯಾಚರಣೆ ರಾತ್ರಿಯಿಡೀ ಮುಂದುವರೆದಿದ್ದು, ಕೆಲವು ಅವಶೇಷಗಳನ್ನು ಇನ್ನೂ ತೆಗೆದುಹಾಕಬೇಕಾಗಿದೆ ಎಂದು ಹೇಳಿದರು. ಶವಗಳು ಗುರುತಿಸಲಾಗದಷ್ಟು ಸುಟ್ಟುಹೋಗಿವೆ ಎಂದು ಅವರು ತಿಳಿಸಿದರು.

 

Share This Article
error: Content is protected !!
";