ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಂದಿನಂತೆ ದೇವೇಗೌಡರು ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸಲು ಏರ್ ಇಂಡಿಯಾ ವಿಮಾನಕ್ಕೆ ತೆರಳಿದ್ದರು. ದೇವೇಗೌಡರಿಗೆ ಯಾವುದೇ ಸುಳಿವು ನೀಡದೆ ಒಂದು ದಿನ ಮುಂಚಿತವಾದಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರ ಹುಟ್ಟುಹಬ್ಬವನ್ನು ಏರ್ ಇಂಡಿಯಾ ಸಿಬ್ಬಂದಿ ವಿಮಾನದಲ್ಲಿಯೇ ವಿಶೇಷವಾಗಿ ಆಚರಿಸುವ ಮೂಲಕ ಅಚ್ಚರಿ ಜೊತೆಗೆ ಮೆಚ್ಚುಗೆಗೂ ಪಾತ್ರರಾಗಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣ ಮಾಡುವ ವೇಳೆ 35 ಸಾವಿರ ಅಡಿ ಎತ್ತರದಲ್ಲಿಯೇ ಕೇಕ್ ಕತ್ತರಿಸಿ ಏರ್ ಇಂಡಿಯಾ ಪರವಾಗಿ ಸಿಬ್ಬಂದಿ ದೇವೇಗೌಡರ ಜನ್ಮದಿನಕ್ಕೆ ಶುಭ ಕೋರಿ ಸಂಭ್ರಮಿಸಿದ್ದಾರೆ.
ಮೃತ್ಯುಂಜಯ ಹೋಮ : ಹೆಚ್. ಡಿ. ದೇವೇಗೌಡರ 93ನೇ ಹುಟ್ಟುಹಬ್ಬದ ನಿಮಿತ್ತ ಬೆಂಗಳೂರು ಮಹಾನಗರ ಜನತಾದಳ, ಜೆಡಿಎಸ್ ಹಾಗೂ ಮಹಿಳಾ ವಿಭಾಗದಿಂದ ಮಲ್ಲೇಶ್ವರದ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ದೇವೇಗೌಡರ ಹೆಸರಿನಲ್ಲಿ ಪೂಜೆ ಸಲ್ಲಿಸಿ, ಮೃತ್ಯುಂಜಯ ಹೋಮ ನಡೆಸಲಾಗುತ್ತದೆ.
ಈ ಪೂಜಾ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಪದಾಧಿಕಾರಿಗಳು, ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು, ವಿವಿಧ ವಿಭಾಗಗಳ ಅಧ್ಯಕ್ಷರು, ವಾರ್ಡ್ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ಜೆಡಿಎಸ್ ತಿಳಿಸಿದೆ.
ದೇವೇಗೌಡರು ಹಾಗೂ ಕುಟುಂಬದವರು ಹುಟ್ಟುಹಬ್ಬದ ಪ್ರಯುಕ್ತ ಬೆಳಗಿನ ಜಾವ ತಿರುಮಲದ ವೆಂಕಟೇಶ್ವರಸ್ವಾಮಿ ದರ್ಶನ ಪಡೆಯಲಿದ್ದಾರೆ.
ಹೆಚ್ಎಎಲ್ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದಲ್ಲಿ ದೇವೇಗೌಡರು ತಿರುಪತಿಗೆ ಪ್ರಯಾಣ ಮಾಡಲಿದ್ದಾರೆ. ಅವರ ಜೊತೆ ಪತ್ನಿ ಚನ್ನಮ್ಮ ದೇವೇಗೌಡರು ಸೇರಿದಂತೆ ಅವರ ಕುಟುಂಬದ 20ಕ್ಕೂ ಹೆಚ್ಚು ಸದಸ್ಯರು ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತಿರುಮಲದಲ್ಲಿ ರಾತ್ರಿ ವಾಸ್ತವ್ಯ ಹೂಡಲಿರುವ ಗೌಡರು ಮತ್ತು ಕುಟುಂಬದವರು ಮುಂಜಾನೆ ವೆಂಕಟೇಶ್ವರಸ್ವಾಮಿ ದರ್ಶನ ಪಡೆಯಲಿದ್ದಾರೆ. ನಂತರ ಅತಿಥಿ ಗೃಹವೊಂದನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.