ದಾವಣಗೆರೆಗೆ ಬ್ರಾಂಡ್ ಹೆಸರು ತಂದು ಕೊಟ್ಟ ಅಜಾತಶತ್ರು ಶಾಮನೂರು ಶಿವಶಂಕರಪ್ಪ

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಕಾಂಗ್ರೆಸ್ ಹಿರಿಯರು, ಮುತ್ಸದ್ದಿ ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಿ
, ಬಳಿಕ ವಿಧಾನಸಭೆ ಕಲಾಪವನ್ನು ಮಂಗಳವಾರಕ್ಕೆ ಮುಂದೂಡಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂತಾಪ ಸೂಚನೆ ಮೇಲೆ ಮಾತನಾಡಿ, ಶಾಮನೂರು ಶಿವಶಂಕರಪ್ಪ 1969ರಲ್ಲಿ ದಾವಣಗೆರೆ ನಗರಸಭೆಯ ಸದಸ್ಯರಾಗಿದ್ದರು. ಆರು ಬಾರಿ ಶಾಸಕರಾಗಿ ಹಾಗೂ ಒಂದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಧೀರ್ಘಕಾಲ ರಾಜಕೀಯದಲ್ಲಿದ್ದ ಅವರು ದಾವಣಗೆರೆಯ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ತಿಳಿಸಿದರು.

- Advertisement - 

ರಾಜ್ಯದಲ್ಲಿ ದಾವಣಗೆರೆ ಹೆಸರುವಾಸಿಯಾಗಲು ಶಾಮನೂರು ಅವರ ಕೊಡುಗೆ ಹೆಚ್ವಿದೆ. ದಾವಣಗೆರೆಗೆ ಬ್ರಾಂಡ್ ಹೆಸರು ಕೊಟ್ಟಿದ್ದಾರೆ. ದೀರ್ಘಕಾಲ ಕಾಂಗ್ರೆಸ್​​ನ ಖಜಾಂಜಿಯಾಗಿದ್ದರು.

ದಾವಣಗೆರೆಗೆ ಹೋದಾಗಲೆಲ್ಲಾ ಅವರು ತಮ್ಮ ಮನೆಗೆ ಊಟಕ್ಕೆ ಕರೆಯುತ್ತಿದ್ದರು. ನಾನು ಅವರ ಮನೆಯಲ್ಲೇ ಊಟ ಮಾಡುತ್ತಿದ್ದೆ. ನಾನು ಹುಟ್ಟಿದ ತಾರೀಖು ನನಗೆ ಗೊತ್ತಿರಲಿಲ್ಲ‌. ನನ್ನ ಅಮ್ಮ, ಅಪ್ಪ ಅವಿದ್ಯಾವಂತರು. ಹಾಗಾಗಿ ನನಗೆ ಹುಟ್ಟಿದ ತಾರೀಕು ಗೊತ್ತಿರಲಿಲ್ಲ. ಮೇಷ್ಟ್ರು ಕೊಟ್ಟಿದ್ದ ದಿನನೇ ನನ್ನ ಹುಟ್ಟಿದ ಹಬ್ಬದ ದಿನವಾಗಿದೆ. ನನ್ನ ಹುಟ್ಟುಹಬ್ಬ ಆಚರಣೆಗಾಗಿ ದಾವಣಗೆರೆಯನ್ನು ಆಯ್ಕೆ ಮಾಡಿದ್ದೆ. ನನಗೆ 75 ವರ್ಷ ಮುಗಿದಾಗ ಅವರ ಜಾಗದಲ್ಲೇ ನಾನು ಹುಟ್ಟಿದ ಹಬ್ಬ ಮಾಡಿಕೊಂಡಿದ್ದೆ ಎಂದು ಸಿಎಂ ಸ್ಮರಿಸಿದರು.

- Advertisement - 

ಅಜಾತಶತ್ರು ಎಂದು ಕರೆಯಬಹುದಾದ ವ್ಯಕ್ತಿ. ನಾನು ದಾವಣಗೆರೆಗೆ ಹೋದಗಲೆಲ್ಲ ಅವರ ಗೆಸ್ಟ್ ಹೌಸ್​​ನಲ್ಲೇ ಉಳಿಯುತ್ತಿದ್ದೆ‌. ಕೋವಿಡ್ ಟೈಮ್​ನಲ್ಲಿ ಆಕ್ಸಿಜನ್ ಸಹಾಯ ಮಾಡಿದಂತವರು. 10-15 ದಿನಗಳ ಹಿಂದೆಯಷ್ಟೇ ನಾನು ಆಸ್ಪತ್ರೆಗೆ ಹೋಗಿದ್ದೆ. ಆವಾಗಲೇ ಅವರಿಗೆ ಮಾತಾನಾಡುವುದಕ್ಕೆ ಆಗುತ್ತಿರಲಿಲ್ಲ. ಅಪರೂಪದ ರಾಜಕಾರಣಿ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಅವರದ್ದು ದೊಡ್ಡ ಕುಟುಂಬ. ಲಕ್ಷಾಂತರ ಅಭಿಮಾನಿಗಳನ್ನು ಅಗಲಿದ್ದಾರೆ ಎಂದು ಸಂತಾಪ ವ್ಯಕ್ತಪಡಿಸಿದರು.

ಯುವ ಶಾಸಕರು ಅವರಿಂದ ಪಾಠ ಕಲಿಯಬೇಕು: ಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ಶಾಮನೂರು ಶಿವಶಂಕರಪ್ಪ ಒಬ್ಬ ವ್ಯಕ್ತಿಯಾಗಿರದೇ ರಾಜಕಾರಣ, ಶಿಕ್ಷಣ, ಸಾಹಿತ್ಯ, ಆರೋಗ್ಯ, ಅಭಿವೃದ್ಧಿ, ಶಕ್ತಿ ಸೇರಿದಂತೆ ಎಲ್ಲಾ ಅಪೂರ್ವ ಗುಣಗಳ ಸಂಗಮವಾಗಿದ್ದರು. ದಾವಣಗೆರೆಯಲ್ಲಿ ಜವಳಿ ಗಿರಣಿಗಳು ಅವನತಿಗೆ ಹೋದಾಗ ಆ ಊರಿಗೆ ಒಂದು ಬ್ರಾಂಡ್ ಇಮೇಜ್ ತಂದು ಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು‌. ಅವರು ಅಪಾರ ಧೈವ ಭಕ್ತರಾಗಿದ್ದರು. ನಾಡಿನ ಬಹುತೇಕ ದೇವಸ್ಥಾನಗಳ, ಗೋಪುರಗಳ ರಥಗಳ ನಿರ್ಮಾಣಕ್ಕೆ ಕೊಡುಗೆ ನೀಡಿದ್ದರು ಎಂದು ಸ್ಮರಿಸಿದರು.

ಹಿರಿಯ ರಾಜಕಾರಣಿ ಶಿವಶಂಕರಪ್ಪ ಅವರು ಸಮಾಜಮುಖಿಯಾಗಿದ್ದರು. ಅವರ ರಾಜಕೀಯ ಹಿಮಾಲಯದ ಬೆಟ್ಡದಷ್ಟು ಎತ್ತರ ಇದೆ.‌ನನ್ನ ತಂದೆಯವರಿಗೆ ಅವರು ಆತ್ಮೀಯರಾಗಿದ್ದರು.‌ಎಷ್ಟೇ ಜಟಿಲ ಸಮಸ್ಯೆ ಇದ್ದರೂ ಅದನ್ನು ತಾಳ್ಮೆಯಿಂದ, ನಗುಮುಖದಿಂದ ಪರಿಹರಿಸುತ್ತಿದ್ದರು. ಯುವ ಶಾಸಕರಿಗೆ ಅವರಿಂದ ಪಾಠ ಕಲಿಯಬೇಕಾಗಿದೆ ಎಂದರು.

ನೇರ ವ್ಯಕ್ತಿತ್ವ:
ವಿಪಕ್ಷ ನಾಯಕ ಆರ್.ಅಶೋಕ್ ಸಂತಾಪ ಸೂಚನೆ ಮೇಲೆ ಮಾತನಾಡಿ
, ಶಾಮನೂರು ಶಿವಶಂಕರಪ್ಪ ಅವರು ಸಾಯುವವರೆಗೂ ಅಧಿಕಾರದಲ್ಲಿ ಇರಬೇಕು ಅಂತ ಬಯಸಿದ್ದರು. 1972ರಲ್ಲಿ ಬಾಪೂಜಿ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಆಗಿ ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ದಾವಣಗೆರೆ ಹೋದರೆ ಎರಡೂ ಕಡೆ ವಿದ್ಯಾಸಂಸ್ಥೆ ಕಾಣುತ್ತದೆ. ಕ್ಯಾನ್ಸರ್ ಆಸ್ಪತ್ರೆ ಕೂಡ ಸ್ಥಾಪನೆ ಮಾಡಿದ್ದಾರೆ. ನಗರಸಭೆ ಅಧ್ಯಕ್ಷರಾಗಿ, ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ ಎಂದು ಅಶೋಕ್ ಸ್ಮರಿಸಿದರು.

ಶಿವಶಂಕರಪ್ಪ ಅವರು ಇನ್ನೊಮ್ಮೆ ಚುನಾವಣೆಗೆ ನಿಲ್ಲುತ್ತೇನೆ ಅಂತಿದ್ದರು. ಇರುವಷ್ಟು ದಿನ ತಾನು ಅಧಿಕಾರದಲ್ಲಿ ಇರಬೇಕು ಎಂದು ಹೇಳುತ್ತಿದ್ದರು. ಆ ತರದ ಗಟ್ಟಿ ಮನುಷ್ಯರಾಗಿದ್ದರು. ಸಿದ್ದರಾಮಯ್ಯ ಆಡಳಿತದಲ್ಲಿ ತೋಟಗಾರಿಕೆ ಸಚಿವರಾಗಿದ್ದರು. ಬೊಮ್ಮಾಯಿ ಸಿಎಂ ಆಗಿದ್ದಾಗ ಅವರ ಚೇಂಬರ್​​ನಲ್ಲಿ ಸದಾ ಇರುತ್ತಿದ್ದರು. ಅವರ ಕ್ಷೇತ್ರದ ಕೆಲಸಕ್ಕಾಗಿ ಬರುತ್ತಿದ್ದರು. ನೇರ ನುಡಿಯ ವ್ಯಕ್ತಿತ್ವದವರು ಎಂದು ಹೇಳಿದರು.

ವೀರ ಶೈವ ಲಿಂಗಾಯತ ವಿಚಾರವಾಗಿ ಧೈರ್ಯದಿಂದ ಮಾತನಾಡುತ್ತಿದ್ದರು. ಯಾರೂ ಅದನ್ನು ವಿರೋಧ ಮಾಡುತ್ತಿರಲಿಲ್ಲ. ದೇಶದಲ್ಲಿ ಇವರೇ ಅತ್ಯಂತ ಹಿರಿಯ ಶಾಸಕರಾಗಿದ್ದಾರೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.

ಶಾಸಕ ಎಸ್.ಸುರೇಶ್ ಕುಮಾರ್ ಮಾತನಾಡಿ, ಇಡೀ ಭಾರತದ ಭೂ ಪಟದಲ್ಲಿ ದಾವಣಗೆರೆಗೆ ವಿಶಿಷ್ಟ ಸ್ಥಾನ ಸಿಗಲು ಶಾಮನೂರು ಅವರ ಪಾತ್ರ ದೊಡ್ಡದಿದೆ. 95 ವರ್ಷ ವಯಸ್ಸಿನಲ್ಲೂ ಅವರು ಜೀವನೋತ್ಸವ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ದಾವಣೆಗೆರೆಯಲ್ಲಿ ವಿದ್ಯಾಕಾಶಿಯನ್ನೇ ಅವರು ನಿರ್ಮಾಣ ಮಾಡಿದ್ದಾರೆ. ಅವರಿಂದ ಪಾಠ ಕಲಿಯಲು ಅನೇಕ ಸಂಗತಿಗಳಿವೆ. ಅವರ ಆತ್ಮಕ್ಕೆ ಸದ್ಗತಿ ದೊರಕಲಿ ಎಂದು ಸಂತಾಪ ಸೂಚಿಸಿದರು.

ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ಬಡ ಬಗ್ಗರ ಮೇಲೆ ವಿಶೇಷ ಕಾಳಜಿ ಹೊಂದಿದ್ದಲ್ಲದೆ ಅವರೊಬ್ಬ ಧೀಮಂತ ನಾಯಕರಾಗಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಹೆಚ್ಷು ಒತ್ತು ಕೊಟ್ಟವರು. ಅವರ ಆತ್ಮಕ್ಕೆ ದೇವರು ಶಾಂತಿ ಸಿಗಲಿ. ಅವರ ಬಂಧು – ಬಳಗದವರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸಿದರು.

ಶಾಸಕ ಸಿ.ಸಿ.ಪಾಟೀಲ್ ಮಾತನಾಡಿ, ನಾವು ಇಬ್ಬರು ಹಿರಿಯ ಶಾಸಕರನ್ನು ಕಳೆದುಕೊಂಡೆವು. ಇದೇ ಬೆಳಗಾವಿ ಅಧಿವೇಶನದ ವೇಳೆ ಇಬ್ಬರು ಶಾಸಕರಿಗೆ ಸಂತಾಪ ಸಲ್ಲಿಸುವಂತಾಯಿತು.
ಶಾಮನೂರು‌ಮೌಲ್ಯಾಧಾರಿತ ರಾಜಕಾರಣಿ. ಅವರ ಕುಟುಂಬ ಸದಸ್ಯರಿಗೆ ಧೈರ್ಯ ಸಿಗಲಿ. ಅವರ ಬಂದುಬಳಕ್ಕೆ ದುಃಖ ತಡೆಯುವ ಶಕ್ತಿ ಸಿಗಲಿ ಎಂದು ಸಂತಾಪ ಸೂಚಿಸಿದರು.

 

 

 

Share This Article
error: Content is protected !!
";