ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಜ್ಜಪ್ಪ

News Desk

ಎಂ.ಎಲ್.ಗಿರಿಧರ, ಮಲ್ಲಪ್ಪನಹಳ್ಳಿ.
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರಸಭಾಧ್ಯಕ್ಷ ಅಜಯ್ ಕುಮಾರ್ ಕೊನೆಗೂ ಜಿಲ್ಲಾಧಿಕಾರಿಗಳಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರಿಗೆ ಮಣಿದಂತೆ ಕಾಣುತ್ತಿದೆ.
ನಗರಸಭಾಧ್ಯಕ್ಷ ಅಜಯ್ ಕುಮಾರ್ ಮಂಗಳವಾರ ಜಿಲ್ಲಾಧಿಕಾರಿ ವೆಂಕಟೇಶ್ ಅವರಿಗೆ ನಗರಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅಜ್ಜರಿ ಮೂಡಿಸಿದ್ದಾರೆ.

ರಾಜೀನಾಮೆ ಸಲ್ಲಿಸಿದ ನಂತರ ಚಂದ್ರವಳ್ಳಿ ಪತ್ರಿಕೆಯೊಂದಿಗೆ ಮಾತನಾಡಿದ ಅಜ್ಜಪ್ಪ ಅಲಿಯಾಸ್ ಅಜಯ್ ಕುಮಾರ್, ನನ್ನ ಮತ್ತು ಸಚಿವರ ಮಧ್ಯ ಕೆಲ ತೊಡಕುಗಳಿದ್ದವು. ಸಚಿವರು ಮತ್ತು ನಾನು ಇಬ್ಬರು ಒಂದು ಕಡೆ ಕೂತು ಚರ್ಚಿಸಿದೆವು. ಸಚಿವರು ಎಲ್ಲ ರೀತಿಯಲ್ಲೂ ಸ್ಪಂದಿಸಿದರು. ಹಾಗಾಗಿ ಸ್ವಯಂ ಪ್ರೇರಣೆಯಿಂದ ನಾನು ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದೇನೆ. ಇದರಲ್ಲಿ ಯಾರ ಒತ್ತಡ ಇಲ್ಲ ಎಂದು ಅಜ್ಜಪ್ಪ ತಿಳಿಸಿದರು.

- Advertisement - 

ಇಬ್ಬರ ಮಧ್ಯ ವಾಕ್ಸಮರ-
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಕಳೆದ ಭಾನುವಾರ ದಿಢೀರ್ ಎಂದು
ನಗರಸಭೆ ಅಧ್ಯಕ್ಷ ಅಜ್ಜಪ್ಪನವರ ಮನೆ ಹೋಗಿದ್ದ ಸಂದರ್ಭದಲ್ಲಿ ಇಬ್ಬರ ಮಧ್ಯ ವಾಕ್ಸಮರ ನಡೆಯಿತು ಎನ್ನಲಾಗಿದೆ.
ನೀವು(ಸುಧಾಕರ್) ಸುಮ್ನೆ ರಾಜೀನಾಮೆ ನೀಡು ಎಂದು ಹೇಳಿದ್ದರೆ ಕೊಟ್ಟು ಬಿಡುತ್ತಿದೆ. ಆದರೆ ನೀವು 26 ಸದಸ್ಯರ ಸಹಿಯೊಂದಿಗೆ ಅವಿಶ್ವಾಸ ಮಂಡನೆ ಪತ್ರ ಕೊಡಿಸಿದ್ದು ಎಷ್ಟು ಸರಿ, ಮೊದಲು ಇದಕ್ಕೆ ಸ್ಪಷ್ಟನೆ ನೀಡಿ ಎಂದು ನಗರಸಭೆ ಅಧ್ಯಕ್ಷ ಪಟ್ಟು ಹಿಡಿದು ಕೇಳಿದರು ಎನ್ನಲಾಗಿದೆ.

ಅಜ್ಜಪ್ಪನವರ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಏನೂ ಹೇಳದ ಸಚಿವ ಸುಧಾಕರ್, ನಾನು ಈಗ ಇಲ್ಲಿಗೆ ಬಂದಿದ್ದು ನೀನು ರಾಜೀನಾಮೆ ನೀಡು ಎಂದು ಹೇಳಲು ಅಲ್ಲ. ರಾಜೀನಾಮೆ ನೀಡುವುದು, ಬಿಡುವುದು ನಿನಗೆ ಬಿಟ್ಟಿದ್ದು, ಸೌಜನ್ಯಕ್ಕಾಗಿ ಬಂದು ಭೇಟಿ ಮಾಡಿದ್ದೇನೆ ಎಂದು ಸಚಿವರು ಅಜ್ಜಪ್ಪನವರಿಗೆ ತಿಳಿಸಿದ್ದಾರೆ ಅಷ್ಟೇ, ಇದರಲ್ಲಿ ಒತ್ತಡ ಹಾಕುವುದಿರಲಿ, ರಾಜೀನಾಮೆ ವಿಷಯವನ್ನೇ ಸಚಿವ ಸುಧಾಕರ್ ಅಜ್ಜಪ್ಪನವರ ಬಳಿ ಚರ್ಚಿಸಿಲ್ಲ ಎಂದು ಆಪ್ತರೊಬ್ಬರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.

- Advertisement - 

ಸಚಿವರು ಮತ್ತು ಅಧ್ಯಕ್ಷರ ಮಧ್ಯ ಏನು ಕೊಡು ಕೊಳ್ಳುವಿಕೆ ನಡೆಯಿತೋ, ಯಾವ ವಿಷಯ ಪ್ರಸ್ತಾಪ ಆಯಿತೋ ಬಿಟ್ಟಿತೋ ಗೊತ್ತಿಲ್ಲ. ಸಚಿವರ ಭಾನುವಾರ ದಿಢೀರ್ ಭೇಟಿ ನಂತರ ಅಧ್ಯಕ್ಷ ಅಜ್ಜಪ್ಪ ಜಿಲ್ಲಾಧಿಕಾರಿಗೆ ರಾಜೀನಾಮೆ ನೀಡುವ ಮೂಲಕ ನಗರಸಭೆಯ ರಾಜಕಾರಣದಲ್ಲಿ ವಿಚಿತ್ರ ತಿರುವುಗಳು ಶುರುವಾಗಿವೆ.

 ಸಚಿವ ಡಿ.ಸುಧಾಕರ್ ಅವರು ಸಾಮಾಜಿಕ ನ್ಯಾಯ ಪರಿಪಾಲನೆ ಮಾಡಬೇಕು ಎನ್ನುವ ತೀರ್ಮಾನದಂತೆ ನಗರಸಭೆ ಅಧ್ಯಕ್ಷ ಸ್ಥಾನ ಬಿಸಿಎಂ-ಎ ವರ್ಗಕ್ಕೆ ಮೀಸಲಾಗಿದ್ದು ಆರಂಭದಲ್ಲಿ ಮುಸ್ಲಿಂ, ಕಾಡುಗೊಲ್ಲ ಸಮಾಜಕ್ಕೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದರು. ಈ ಇಬ್ಬರ ನಂತರ ಈಡಿಗ ಸಮಾಜದ ಅಜಪ್ಪನವರಿಗೆ ಅಧ್ಯಕ್ಷರನ್ನಾಗಿ ಮಾಡಿದ್ದರು. ಇದೇ ಮಾನದಂಡ ಇಟ್ಟುಕೊಂಡರೆ ಮುಂದಿನ ಮೂರುವರೆ ತಿಂಗಳ ಅವಧಿಗೆ ಬಾಲಕೃಷ್ಣಾಚಾರ್ ಎನ್ನುವ ಸದಸ್ಯರಿಗೆ ಮಣೆ ಹಾಕುವ ಸಾಧ್ಯತೆ ಇದೆ.

10ನೇ ವಾರ್ಡ್ ನಿಂದ ಆಯ್ಕೆಯಾಗಿರುವ ಬಾಲಕೃಷ್ಣಾಚಾರ್ ಬಿಜೆಪಿ ಪಕ್ಷದ ವತಿಯಿಂದ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎನ್ನುವ ಆರೋಪ ಕೂಡ ಇದ್ದು ಇದಕ್ಕೆ ನಾನು ಪೂರ್ಣಿಮಾ ಶ್ರೀನಿವಾಸ್ ಜೊತೆಯಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದೇನೆ ಎನ್ನುವ ಮಾತು ಕೂಡ ಕೇಳಿ ಬರುತ್ತಿದೆ. ಇತ್ತೀಚೆಗೆ ಉಪಾಧ್ಯಕ್ಷರನ್ನಾಗಿ ಭೋವಿ ಸಮಾಜ ಮಂಜುಳಾ ಅವರನ್ನ ಆಯ್ಕೆ ಮಾಡಿದ್ದರು. ಇವರು ಪಕ್ಷೇತರರಾಗಿ ಆಯ್ಕೆಯಾಗಿದ್ದರು. ಕಳೆದ ಸ್ಥಾಯಿ ಸಮಿತಿಗೆ ಎನ್.ಮಮತಾ ಅವರನ್ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ತಮಿಳಿಯನ್ ಗೌಂಡರ್ ಸಮಾಜಕ್ಕೆ ಸಚಿವರು ಮನ್ನಣೆ ನೀಡುವ ಮೂಲಕ ಸಣ್ಣ ಸಣ್ಣ ಸಮುದಾಯಗಳಿಗೆ ಆದ್ಯತೆ ನೀಡಿದ್ದರು.

ಕಾಂಗ್ರೆಸ್ ಪಕ್ಷದಲ್ಲೇ ಸಮೀವುಲ್ಲಾ, ಜಬೀವುಲ್ಲಾ, ಪಕ್ಷೇತರ ಸದಸ್ಯ ಚಿತ್ರಜಿತ್ ಯಾದವ್ ಸೇರಿದಂತೆ ಮತ್ತಿರರು ಆಕಾಂಕ್ಷಿಗಳಾಗಿದ್ದರೂ, ಬಾಲಕೃಷ್ಣಾಚಾರ್ ಬಿಜೆಪಿ ಸದಸ್ಯರಾಗಿದ್ದರೂ ಸುಧಾಕರ್ ಇದ್ಯಾವುದಕ್ಕೂ ತಲೆ ಕೆಡೆಸಿಕೊಳ್ಳುವುದಿಲ್ಲ. ಹಾಗಾಗಿ ವಿಶ್ವಕರ್ಮ ಸಮಾಜಕ್ಕೆ ಸೇರಿದ ಬಾಲಕೃಷ್ಣಾಚಾರ್ ಅವರಿಗೆ ಅಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಆದರೆ ಬಹುತೇಕ ಬಾಲಕೃಷ್ಣ ಅವರ ಹೆಸರು ಅಂತಿಮ ಆಗಿದೆ ಎನ್ನುವ ಮಾಹಿತಿಗಳು ನಗರಸಭೆ ಸದಸ್ಯರುಗಳಿಂದಲೇ ಹೊರ ಬರುತ್ತಿವೆ.

ಆದರೆ ಹಾಲಿ ಅಧ್ಯಕ್ಷ ಅಜ್ಜಪ್ಪನವರು ನನ್ನ ರಾಜೀನಾಮೆ ಪಡೆದು ಬಿಜೆಪಿ ಚಿಹ್ನೆಯಿಂದ ಗೆದ್ದು ಕಾಂಗ್ರೆಸ್‌ಗೆ ಬಂದಿರುವ ಸದಸ್ಯನನ್ನು ಅಧ್ಯಕ್ಷರನ್ನಾಗಿ ಮಾಡುವ ಹುನ್ನಾರ ನಡೆದಿದೆ. ಕಳೆದ ಲೋಕಸಭೆ ಚುನಾವಣೆಯಲ್ಲೂ ಅವರು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದರು. ಅಂತವರಿಗೆ ಅಧ್ಯಕ್ಷ ಹುದ್ದೆ ನೀಡಲು ಮುಂದಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿದಂತೆ ಎಂದೂ ಅಜ್ಜಪ್ಪ ಆರೋಪಿಸಿದ್ದರು.

ಹಾಲಿ ಅಧ್ಯಕ್ಷ ಅಜ್ಜಪ್ಪನವರ ಮನೆಗೆ ಸಚಿವ ಸುಧಾಕರ್ ದಿಢೀರ್ ಭೇಟಿ ನೀಡಿದ ನಂತರ ಈಗ ಇದೆಲ್ಲವೂ ಸಖಾಂತ್ಯ ಕಂಡಿದೆ. ಈಗ ಯಾವ ಆರೋಪವೂ ಕೇಳಿ ಬರುತ್ತಿಲ್ಲ. ಬಾಲಕೃಷ್ಣಾಚಾರ್ ಅಧ್ಯಕ್ಷರಾಗುವುದು ನೂರಷ್ಟು ದಿಟ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು ಚೆಂಡು ಈಗ ಸಚಿವರ ಅಂಗಳದಲ್ಲಿದೆ. ಮುಂದೇನಾಗುತ್ತೋ ಕಾದು ನೋಡಬೇಕಿದೆ.

 

Share This Article
error: Content is protected !!
";