ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಿಲ್ಲಾ ಪಂಚಾಯತ್ ಆವರಣದಲ್ಲಿ “ಅಕ್ಕ ಕೆಫೆ” ಕಟ್ಟಡದ ನಿರ್ಮಾಣ ಪೂರ್ಣಗೊಳಿಸಲಾಗಿದ್ದು, ಇದೇ ಆಗಸ್ಟ್ 04ರಂದು ಜಿಲ್ಲಾ ಉಸ್ತುವಾರಿ ಸಚಿವರು ಅಕ್ಕ ಕೆಫೆ ಕ್ಯಾಂಟಿನ್ ಉದ್ಘಾಟನೆ ನೆರವೇರಿಸುವರು.
“ಅಕ್ಕ ಕೆಫೆ” ನಿರ್ವಹಣೆಗೆ ಎನ್‌ಆರ್‌ಎಲ್‌ಎಂ ಒಕ್ಕೂಟದ ವ್ಯಾಪ್ತಿಯ ಸ್ವ-ಸಹಾಯ ಗುಂಪನ್ನು ಆಯ್ಕೆ ಮಾಡಲಾಗಿರುತ್ತದೆ. ಸ್ವ-ಸಹಾಯ ಗುಂಪಿನ ಸದಸ್ಯರ ಮೂಲಕ “ಅಕ್ಕ ಕೆಫೆ” ನಿರ್ವಹಣೆ ಮಾಡಲಾಗುತ್ತಿದ್ದು, ಇದರಲ್ಲಿ ಗುಣಮಟ್ಟ, ಶುಚಿ ಮತ್ತು ರುಚಿ ಆಹಾರವನ್ನು ಕೈಗೆಟಕುವ ದರದಲ್ಲಿ ಪೂರೈಸಲು ಉದ್ದೇಶಿಸಲಾಗಿದೆ.
“ಅಕ್ಕ ಕೆಫೆ”ಯಲ್ಲಿ ಯಾವುದೇ ರೀತಿಯ ರಾಸಾಯನಿಕ ವಸ್ತುಗಳನ್ನು, ಕೃತಕ ಬಣ್ಣ, ಕೃತಕ ರುಚಿಕಾರಕಗಳನ್ನು ಬಳಸದಂತೆ ಕ್ರಮವಹಿಸಲಾಗುತ್ತದೆ. ಟೇಸ್ಟಿಂಗ್ ಪೌಡರ್, ಸೋಡಾ ಸೇರಿದಂತೆ ಇತರೆ ರಾಸಾಯನಿಕ ಪದಾರ್ಥ ಬಳಸದೆ, ರುಚಿಕರ ಅಡುಗೆ ತಯಾರಿಸುವ ನಿಟ್ಟಿನಲ್ಲಿ ಮತ್ತು ಅಕ್ಕಾ ಕೆಫೆಯಲ್ಲಿ ಶುಚಿ, ರುಚಿ, ಸ್ವಚ್ಛತೆ ಕಾಯ್ದುಕೊಳ್ಳುವ ಕುರಿತು ಈಗಾಗಲೆ ತರಬೇತಿ ನೀಡಲಾಗಿದೆ.
ಮಹಿಳೆಯರೇ ಆಹಾರ ಪದಾರ್ಥಗಳನ್ನು ಸಿದ್ದಪಡಿಸಿ “ಅಕ್ಕ ಕೆಫೆ” ನಿರ್ವಹಿಸುತ್ತಿರುವುದರಿಂದ ಶುಚಿ-ರುಚಿಯಾದ ಗುಣಮಟ್ಟದ ಮನೆ ಊಟದಂತೆ ಅಕ್ಕ ಕೆಫೆಯಲ್ಲಿ ಸವಿಯನ್ನು ನಿರೀಕ್ಷಿಸಬುಹುದಾಗಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು, ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡುವ ಪ್ರವಾಸಿಗರು ಈ ಅಕ್ಕ ಕೆಫೆಯ ಸೌಲಭ್ಯ ಪಡೆಯಬಹುದು.
ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ರಾಷ್ಟ್ರೀಯ ಜೀವನೋಪಾಯ ಅಭಿಯಾನವನ್ನು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಅಭಿಯಾನದ ಉದ್ದೇಶ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಡತನದ ಪ್ರಮಾಣವನ್ನು ಕಡಿಮೆ ಮಾಡುವುದಾಗಿರುತ್ತದೆ.
ಈ ನಿಟ್ಟಿನಲ್ಲಿ ಅಭಿಯಾನದಡಿ ಮಹಿಳೆಯರನ್ನು ಸ್ವಸಹಾಯ ಗುಂಪುಗಳಡಿ ಸಂಘಟಿಸಿ, ಅವರಿಗೆ ಕೃಷಿ ಮತ್ತು ಕೃಷಿಯೇತರ ವಿಭಾಗಗಳಡಿ ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ಒದಗಿಸುವುದರ ಜೊತೆಗೆ ಅವರು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿ ಪಥದೊಂದಿಗೆ ಸ್ವಾವಲಂಬನೆಯ ಜೀವನವನ್ನು ನಿರ್ವಹಿಸುವಲ್ಲಿ ನಿರಂತರ ಬೆಂಬಲ ನೀಡಲಾಗುತ್ತಿದೆ.
ಪ್ರಮುಖವಾಗಿ ಮಹಿಳೆಯರು ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಜೀವನೋಪಾಯದೊಂದಿಗೆ ಸಬಲೀಕರಣದ ಬದುಕು ರೂಪಿಸಿಕೊಳ್ಳುವಲ್ಲಿ ಅವಶ್ಯಕ ಸಾಮರ್ಥ್ಯಾಭಿವೃದ್ಧಿ ತರಬೇತಿಗಳನ್ನು ಏರ್ಪಡಿಸಿ, ಪ್ರತಿಯೊಬ್ಬ ಮಹಿಳೆಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ 2024-25ನೇ ಸಾಲಿನ ಆಯವ್ಯದಲ್ಲಿ ಘೋಷಣೆಯಂತೆ ಸ್ವ ಸಹಾಯ ಗುಂಪುಗಳ ಸದಸ್ಯರ ಮೂಲಕ “ಅಕ್ಕ ಕೆಫೆ”ಯನ್ನು ತೆರೆಯಲಾಗುತ್ತಿದೆ.
ಆ.04ರಂದು ಅಕ್ಕ ಕೆಫೆ ಮತ್ತು ಜಿಲ್ಲಾ ನೀರು ಪರೀಕ್ಷಾ ಪ್ರಯೋಗಾಲಯ ಉದ್ಘಾಟನೆ:
ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‌ಆರ್‌ಎಲ್‌ಎಂ)-ಸಂಜೀವಿನಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ್ ವತಿಯಿಂದ “ಅಕ್ಕ ಕೆಫೆ” ಮತ್ತು ಜಿಲ್ಲಾ ನೀರು ಪರೀಕ್ಷಾ ಪ್ರಯೋಗಾಲಯ ಉದ್ಘಾಟನಾ ಸಮಾರಂಭ ಇದೇ ಆಗಸ್ಟ್ 04ರಂದು ಬೆಳಿಗ್ಗೆ 11ಕ್ಕೆ ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಉದ್ಘಾಟನೆ ನೆರವೇರಿಸುವರು. ಸಂಸದ ಗೋವಿಂದ ಎಂ.ಕಾರಜೋಳ ಘನ ಉಪಸ್ಥಿತಿವಹಿಸುವರು. ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಹೊಸದುರ್ಗ ಶಾಸಕರು ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಅಧ್ಯಕ್ಷ ಬಿ.ಜಿ.ಗೋವಿಂದಪ್ಪ, ಚಳ್ಳಕೆರೆ ಶಾಸಕರು ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ಅಧ್ಯಕ್ಷ ಟಿ.ರಘುಮೂರ್ತಿ, ಮೊಳಕಾಲ್ಮುರು ಶಾಸಕ ಎನ್.ವೈ.ಗೋಪಾಲಕೃಷ್ಣ, ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಚಿದಾನಂದ ಎಂ.ಗೌಡ, ಕೆ.ಎಸ್.ನವೀನ್, ಡಿ.ಟಿ.ಶ್ರೀನಿವಾಸ್, ಕರ್ನಾಟಕ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷ ಜಿ.ಎಸ್.ಮಂಜುನಾಥ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ನಗರಸಭೆ ಅಧ್ಯಕ್ಷೆ ಸುಮಿತಾ ಬಿ.ಎನ್.ರಾಘವೇಂದ್ರ, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ ಭಾಗವಹಿಸುವರು.
ವಿಶೇಷ ಆಹ್ವಾನಿತರಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತೆ ಉಮಾ ಮಹದೇವನ್, ಸರ್ಕಾರದ ಕಾರ್ಯದರ್ಶಿ ಸಮೀರ್ ಶುಕ್ಲಾ, ಜಿಲ್ಲಾ ಪಂಚಾಯತ್ ಆಡಳಿತಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ, ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ
ಮತ್ತು ಜೀವನೋಪಾಯ ಇಲಾಖೆ ಸರ್ಕಾರದ ಕಾರ್ಯದರ್ಶಿ ಮನೋಜ್ ಕುಮಾರ ಮೀನಾ, ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕರಾದ ಪಿ.ಐ.ಶ್ರೀವಿದ್ಯಾ, ಜಿಲ್ಲಾಧಿಕಾರಿ ವೆಂಕಟೇಶ್ ಟಿ., ಜಿ.ಪಂ. ಸಿಇಒ ಡಾ. ಆಕಾಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ ಕುಮಾರ ಬಂಡಾರು ಸೇರಿದಂತೆ ಹಲವು ಅಧಿಕಾರಿಗಳು, ಗಣ್ಯರು ಭಾಗವಹಿಸುವರು.

