ಎಸಿ ಕೋರ್ಟ್ ನಲ್ಲಿರುವ ಎಲ್ಲ ಪ್ರಕರಣಗಳು 6 ತಿಂಗಳಲ್ಲಿ ಇತ್ಯರ್ಥ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳಲ್ಲಿ ಅವಧಿ ಮೀರಿ ಬಾಕಿ ಇರುವ ಎಲ್ಲ ಪ್ರಕರಣಗಳನ್ನೂ ಮುಂದಿನ ಆರು ತಿಂಗಳೊಳಗಾಗಿ ನ್ಯಾಯಯುತ ಇತ್ಯರ್ಥಕ್ಕೆ ಒಳಪಡಿಸಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಕಂದಾಯ ಇಲಾಖೆ ಅಧಿಕಾರಿಗಳಿಗೆ ಗಡುವು ನೀಡಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿ ಸೋಮವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಜೊತೆಗೆ ಸಚಿವರು ಏಕ ಕಾಲದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ಎಸಿ ನ್ಯಾಯಾಲಯಗಳಲ್ಲಿ ಯಾವ ಪ್ರಕರಣಗಳನ್ನೂ ಆರು ತಿಂಗಳ ಅವಧಿಗಿಂತ ಹೆಚ್ಚಿನ ಕಾಲ ಇಟ್ಟುಕೊಳ್ಳುವಂತಿಲ್ಲ ಎಂಬ ಕಾನೂನಿದೆ. ಆದರೆ
, ಕಳೆದ ವರ್ಷ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೇರಿದ ವೇಳೆ ಎಸಿ ನ್ಯಾಯಾಲಯಗಳಲ್ಲಿ ಅವಧಿ ಮೀರಿದ 60 ಸಾವಿರಕ್ಕೂ ಅಧಿಕ ಪ್ರಕರಣಗಳಿದ್ದವು. ಈ ಎಲ್ಲ ಪ್ರಕರಣಗಳನ್ನೂ ಮುಂದಿನ ಒಂದು ವರ್ಷದಲ್ಲಿ ಇತ್ಯರ್ಥಗೊಳಿಸಿ, ಸರ್ಕಾರಿ ಕಚೇರಿಗಳಿಗೆ ಜನರ ಅನಗತ್ಯ ಅಲೆದಾಟಕ್ಕೆ ಬ್ರೇಕ್ ಹಾಕಬೇಕು ಎಂಬುದು ನಮ್ಮ ಸರ್ಕಾರದ ಉದ್ದೇಶವಾಗಿತ್ತು ಎಂದು ಗೌಡರು ತಿಳಿಸಿದರು.

ಒಂದೂವರೆ ವರ್ಷ ಕಳೆದರೂ ನಮ್ಮ ಈ ಉದ್ದೇಶ ಈಡೇರಿಲ್ಲ. ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ಉಪ – ವಿಭಾಗಾಧಿಕಾರಿಗಳನ್ನು ನೇಮಕ ಮಾಡಿದರೂ ಸಹ ಶೇ.55ರಷ್ಟು ಪ್ರಕರಣಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ. ಎಸಿ ನ್ಯಾಯಾಲಯಗಳಲ್ಲಿ ಇನ್ನೂ 29,000ಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ. ಇದರಿಂದ ಜನಸಾಮಾನ್ಯರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದು, ಮುಂದಿನ ಆರು ತಿಂಗಳೊಳಗಾಗಿ ಎಲ್ಲ ಬಾಕಿ ಪ್ರಕರಣಗಳನ್ನು ನ್ಯಾಯಯುತವಾಗಿ ವಿಲೇವಾರಿ ಮಾಡಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಅಭಿಯಾನ ಮಾದರಿಯಲ್ಲಿ ಕೆಲಸ ಮಾಡಬೇಕು ಎಂದು ಸಚಿವರು ಸೂಚನೆ ನೀಡಿದರು.

ಆರು ತಿಂಗಳಲ್ಲಿ ಎಲ್ಲ ಪ್ರಕರಣಗಳನ್ನು ತಹಬದಿಗೆ ತರಬೇಕು ಎಂಬುದು ಸರ್ಕಾರದ ಸಂಕಲ್ಪ. ಒಂದು ವರ್ಷದಲ್ಲಿ ಆಗಬೇಕಾದ ಕೆಲಸ ಎರಡು ವರ್ಷ ಆದ್ರೂ ಆಗಿಲ್ಲ ಅಂದ್ರೆ ಸರ್ಕಾರ ಮತ್ತು ನಿಮಗೆ ಶೋಭೆ ತರಲ್ಲ. ಹೀಗಾಗಿ ಈ ವಾರದಿಂದಲೇ ರೆಗ್ಯುಲರ್ ಎಸಿಗಳು ತಿಂಗಳೊಂದಕ್ಕೆ 200 ರಿಂದ 250 ಪ್ರಕರಣಗಳನ್ನು ವಿಲೇವಾರಿ ಮಾಡಿದರೆ, ವಿಶೇಷ ಉಪ – ವಿಭಾಗಾಧಿಕಾರಿಗಳು ಕನಿಷ್ಠ 70 ರಿಂದ 100 ಪ್ರಕರಣಗಳನ್ನು ವಿಲೇವಾರಿ ಮಾಡಬೇಕು. ಆರು ತಿಂಗಳ ನಂತರವೂ ಪ್ರಕರಣಗಳನ್ನು ಬಾಕಿ ಉಳಿಸಿಕೊಂಡಿದ್ದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ವಹಿಸಲಾಗುವುದು. ಅಲ್ಲದೆ, ಈ ಸಂಬಂಧ ಪ್ರತಿ ತಿಂಗಳೂ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.

ನ್ಯಾಯಾಲಯಗಳ ತಕರಾರು ಪ್ರಕರಣಗಳ ವಿಲೇವಾರಿಯ ಜೊತೆಗೆ ಪೋಡಿ ದುರಸ್ತಿ, ನಮೂನೆ 3 – 9 ಮಿಸ್ಮ್ಯಾಚ್ ಹಾಗೂ ಫೌತಿ ಖಾತೆ ಆಂದೋಲನ ಉಪ ವಿಭಾಗಾಧಿಕಾರಿಗಳ ಮಟ್ಟದಲ್ಲೇ ನಡೆಯಬೇಕು. ಹೀಗಾಗಿ ಅಧಿಕಾರಿಗಳು ಜನರ ಸಮಸ್ಯೆ ಹಾಗೂ ತಮ್ಮ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಕೆಲಸಗಳನ್ನೂ ಅಭಿಯಾನ ಮಾದರಿಯಲ್ಲಿ ನಡೆಸಬೇಕು ಎಂದು ಸಚಿವರು ಕಿವಿಮಾತು ಹೇಳಿದರು.

ಸಭೆಯಲ್ಲಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಸುನೀಲ್ ಕುಮಾರ್, ಸರ್ವೇ ಇಲಾಖೆ ಆಯುಕ್ತ ಮಂಜುನಾಥ್ ಉಪಸ್ಥಿತರಿದ್ದರು.

 

- Advertisement -  - Advertisement - 
Share This Article
error: Content is protected !!
";