ಫೆಬ್ರವರಿ 10 ರಿಂದ 12 ರವರೆಗೆ ಕುಂಭಮೇಳಕ್ಕೆ ಸಕಲ ಸಿದ್ಧತೆ

News Desk

ಚಂದ್ರವಳ್ಳಿ ನ್ಯೂಸ್, ಮೈಸೂರು:
ಮೈಸೂರು ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮದ ಬಳಿ ಫೆಬ್ರವರಿ 10 ರಿಂದ 12 ರವರೆಗೆ ಕುಂಭಮೇಳ-2025 ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.
ಕುಂಭ ಮೇಳ -2025ರ ಆಚರಣೆಯ ಸಂಬಂಧ ಜಲದರ್ಶಿನಿ ಅಥಿತಿ ಗೃಹದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಥಮ ಬಾರಿಗೆ 1989ರಲ್ಲಿ ಈ ಕುಂಭಮೇಳ ಪ್ರಾರಂಭವಾಯಿತು. ಇದು 3 ವರ್ಷಗಳಿಗೆ ಒಮ್ಮೆ ನಡೆಯುವ ಮೇಳವಾಗಿದೆ ಎಂದು ಅವರು ತಿಳಿಸಿದರು.

- Advertisement - 

ಕುಂಭ ಮೇಳಕ್ಕೆ ಆಗಮಿಸುವ ಎಲ್ಲ ಭಕ್ತಾದಿಗಳಿಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು. ಕುಂಭಮೇಳದಲ್ಲಿ ಸ್ವಚ್ಛತೆ ಕಾಪಾಡಬೇಕು. ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಣೆ ಮಾಡಬೇಕು. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಸಚಿವರು ಕಟ್ಟು ನಿಟ್ಟಿನ ಸೂಚನೆ ನೀಡಿದರು.

ಸಾಂಸ್ಕೃತಿಕ ಹಾಗೂ ಜನಪದ ಸಂಗೀತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬೇಕು. ಕೆಎಸ್​ಆರ್​ಟಿಸಿ ವತಿಯಿಂದ ವಿವಿಧ ಭಾಗಗಳಿಂದ ಹೆಚ್ಚಿನ ಬಸ್​ಗಳ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

- Advertisement - 

ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಮಾತನಾಡಿ, 3 ದಿನಗಳ ಕಾಲ ನಡೆಯಲಿರುವ ಕುಂಭಮೇಳಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಫೆಬ್ರವರಿ 11 ರಂದು ಕಾವೇರಿ ಆರತಿ ಮಾಡಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ದೇಶೀಯ ಸಂಸ್ಕೃತಿಯನ್ನು ಬಿಂಬಿಸುವಂತೆ ಮಾಡಬೇಕು.

ಸ್ನಾನ ಘಟ್ಟಗಳಲ್ಲಿ ಸ್ವಚ್ಛತೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ನಿಗದಿತ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಉಚಿತ ಅನ್ನದಾನ ಮಾಡುವ ಕಡೆ ಸ್ವಚ್ಛತೆ ಕಾಪಾಡಬೇಕು. ಫೈರ್ ಸೇಪ್ಟಿ ಕೈಗೊಳ್ಳಬೇಕು. ಕುಟೀರಗಳ ಬಳಿ ಭದ್ರತೆ ವ್ಯವಸ್ಥೆ ಕೈಗೊಳ್ಳಬೇಕು. ರಸ್ತೆಗಳು ಉತ್ತವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, 2021ರಲ್ಲಿ ನಡೆಯಬೇಕಿದ್ದ ಕುಂಭಮೇಳ ಕೋವಿಡ್ ಕಾರಣದಿಂದ ನಡೆದಿರಲಿಲ್ಲ. 2019ರಲ್ಲಿ ಕುಂಭಮೇಳ ನಡೆದಿತ್ತು. ಈಗ 2025ರ ಫೆಬ್ರವರಿಯಲ್ಲಿ ಕುಂಭಮೇಳ ನಡೆಯಲಿದೆ. ಕುಂಭ ಮೇಳಕ್ಕೆ ಆಗಮಿಸುವ ಭಕ್ತರಿಗೆ ನದಿಯಲ್ಲಿ ಸ್ಥಾನ ಮಾಡಲು 5 ಕಡೆ ಜಾಗ ಗುರುತಿಸಲಾಗಿದೆ. 1 ಯಾಗ ಶಾಲೆ ನಿರ್ಮಾಣ ಮಾಡಲಾಗುವುದು. 6 ಕುಟೀರಗಳನ್ನು ನಿರ್ಮಾಣ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

 

Share This Article
error: Content is protected !!
";