ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಮಣ್ಣಲ್ಲಿ ಮಣ್ಣಾಗಿ ದುಡಿದು ಚಿನ್ನದಂತಹ ಬದುಕನ್ನು ಕಟ್ಟಿಕೊಂಡವರು. ಓದಿದವರಲ್ಲದಿದ್ದರೂ ಈ ಜೀವನ ಹೇಗೆ ? ಏಕೆ ಜೀವಿಸಬೇಕು ? ಹೇಗೆ ಜೀವಿಸಬೇಕು ಎಂಬ ಪರಮ ಸತ್ಯವನ್ನು ಅರಿತು ಆನಂದಿಸಿ ನಮಗೆ ಮಾರ್ಗದರ್ಶಿ ಆಗಿರುವವರು 12ನೇ ಶತಮಾನದ ಶಿವ ಶರಣರಾದ ಒಕ್ಕಲಿಗ ಮುದ್ದಣ್ಣನವರು ನಮಗೆ ಮಾರ್ಗದರ್ಶಿಯಾಗಿದ್ದಾರೆ ಎಂದು ಚಿತ್ರದುರ್ಗದ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ ಜೆ ಎಂ ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳವರು ಅಭಿಪ್ರಾಯಪಟ್ಟರು.
ಅವರು ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮುರುಗಿಯ ಶಾಂತವೀರ ಮಹಾ ಸ್ವಾಮಿಗಳವರ ಲೀಲಾ ವಿಶ್ರಾಂತಿ ತಾಣದ ಮುಂಭಾಗದಲ್ಲಿ ಏರ್ಪಡಿಸಿದ್ದ ಒಕ್ಕಲಿಗರ ಮುದ್ದಣ್ಣನವರ ಜಯಂತಿ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡುತ್ತಾ ಸತ್ಯ -ಶುದ್ಧ ಕಾಯಕಕ್ಕೆ ಹೆಸರಾದವರು ಒಕ್ಕಲಿಗ ಮುದ್ದಣ್ಣನವರು. ಬೇಸಾಯದ ಪರಿಭಾಷೆಯಲ್ಲಿ ಆಧ್ಯಾತ್ಮಿಕ ವಿಷಯಗಳನ್ನು ತಮ್ಮ ವಚನಗಳಲ್ಲಿ ಪ್ರಸ್ತಾಪಿಸುತ್ತ ಜಂಗಮ ದಾಸೋಹ ನಡೆಸುವುದು ಇವರ ನಿತ್ಯ ವ್ರತವಾಗಿತ್ತು. ಒಮ್ಮೆ ರಾಜರು ಇವರಿಗೆ ತೆರಿಗೆಯನ್ನು ಕೇಳಿದಾಗ ಕೊಡದೆ ಆ ಹಣವನ್ನು ದಾಸೋಹಕ್ಕಾಗಿ ವಿನಯೋಗಿಸುವ ಪಥ ಅನುಸರಿಸಿದವರು. ಪರಮ ಜ್ಞಾನಿಗಳು ಸಂಶೋಧಕರಾದವರು ಒಂದು ಹೂವನ್ನು ಕಂಡಾಗ ಅದರ ಬಗ್ಗೆ ವರ್ಣನೆಗೆ, ಸಂಶೋಧನೆಗೆ ತೊಡಗುತ್ತಾರೆ .
ಹಾಗೆಯೇ ಈ ಪ್ರಪಂಚವನ್ನು ನೋಡಿ ಅದರ ಮೂಲ ಯಾವುದು? ಈ ಜಗತ್ತು ಹೇಗೆ ನಿರ್ಮಾಣವಾಯಿತು? ಏಕೆ ನಿರ್ಮಾಣವಾಯಿತು ಎಂಬ ಸಂಶೋಧನೆಗೆ ತೊಡಗಿದವರು ಒಂದು ದಿನ ಆ ಪರಮಸತ್ಯ, ಪರಮಾತ್ಮನನ್ನು ಅರಿತು ಅವಿರಳಾನಂದನವನ್ನು ಪಡೆಯುತ್ತಾರೆ. ಅವರೇ ಸಂತರು ಶರಣರು. ಅಂತಹ ಶರಣರಲ್ಲಿ ಒಬ್ಬರಾದ ಒಕ್ಕಲಿಗ ಮುದ್ದಣ್ಣನವರು ಮಾನವ ಜೀವನದ ಸಾರ್ಥಕತೆಯನ್ನು ತಮ್ಮ ಒಂದು ವಚನದಲ್ಲಿ ಹೀಗೆ ಹೇಳುತ್ತಾರೆ ಅಂಗವೇ ಭೂಮಿಯಾಗಿ, ಲಿಂಗವೇ ಬೆಳೆಯಾಗಿ, ವಿಶ್ವಾಸವೆಂಬ ಬಿತ್ತ ಬಲಿದು, ಉಂಡು ಸುಖಿಯಾಗಿರಬೇಕೆಂದ ಕಾಮ-ಭೀಮ ಜೀವನದೊಡೆಯ.ಹೀಗೆ ಪರಮ ಸುಖ ಪರಮಾನಂದ ಅಥವಾ ಆತ್ಮಾನಂದವೇ ಬದುಕಿನ ಗುರಿ ಎನ್ನುತ್ತಾರೆ ಮುದ್ದಣ್ಣನವರು ಮತ್ತು ಅದನ್ನು ಗಳಿಸುವ ವಿಧಾನವನ್ನು ವಚನದಲ್ಲಿ ವಿವರಿಸುತ್ತಾ ಹೋಗುತ್ತಾರೆ. ಸಿರಿ, ಸಂಪದ, ದನ ,ಕನಕ, ಅಧಿಕಾರ ಅಂತಸ್ತುಗಳೇ ಬದುಕಿನ ಗುರಿಯಲ್ಲ.
ಈ ಪ್ರಾಪಂಚಿಕ ವಿಷಯಗಳ ಗಳಿಕೆಯಿಂದ ದೊರೆಯುವ ಸುಖವು ಅತ್ಯಂತ ಕ್ಷಣಿಕವಾದದ್ದು. ಆದರೆ ಪರಮ ಸತ್ಯ ಪರಮಾತ್ಮನ ಸಾಕ್ಷಾತ್ಕಾರ ಶಾಶ್ವತವಾದದ್ದು ಎಂದು ಮನದಟ್ಟು ಮಾಡುತ್ತಾರೆ. ಅಂಗವೇ ಭೂಮಿಯಾಗಿ ಅಂಥ ಆತ್ಮಾನಂದವನ್ನು ಪಡೆಯುವುದಕ್ಕೆ ನಾವೆಲ್ಲರೂ ಬದುಕಿನ ಭೌತಿಕ ದೇಹಾರೋಗ್ಯ ಚಟುವಟಿಕೆಯ ಕೃಷಿಯ ಜತೆಗೆ ಆಧ್ಯಾತ್ಮಿಕ ಕೃಷಿಯನ್ನು ಮಾಡಬೇಕೆನ್ನುತ್ತಾರೆ ಮುದ್ದಣ್ಣನವರು ಎಂದು ನುಡಿದರು.
ನಿವೃತ್ತ ಪ್ರಾಚಾರ್ಯ, ಜಾಗತಿಕ ಲಿಂಗಾಯತ ಮಹಾಸಭಾದ ಮುಖ್ಯಸ್ಥ ಜಿ.ಟಿ. ನಂದೀಶ್ ಮಾತನಾಡಿ ನುಡಿಗೆ ತಕ್ಕ ನಡೆ ಇರಬೇಕಾಗುತ್ತದೆ. ಹಾಗೆ ಜ್ಞಾನಕ್ಕೆ ತಕ್ಕ ಕ್ರಿಯೆ ಇಲ್ಲದಿದ್ದರೆ ಅವರ ಜೀವನ ವ್ಯರ್ಥವೆಂದು ಒಕ್ಕಲಿಗ ಮುದ್ದಣನವರು ತಮ್ಮ ಜೀವನ ಮತ್ತು ಕಾಯಕದ ಮೂಲಕ ನಡೆದು ತೋರಿ ಸಾರಿದ್ದಾರೆ. ಅವರು ವೇದ , ಶಾಸ್ತ್ರ ಓದಿರಲಿಲ್ಲ .ನನಗೆ ಗೊತ್ತಿರುವುದು ವ್ಯವಸಾಯ ವೃತ್ತಿ ಒಂದೇ .ಅದನ್ನೇ ತಾನು ತನು, ಮನಗಳಿಂದ ನಿರ್ವಹಿಸುತ್ತೇನೆ ಎಂದು ಹೇಳುವ ಮೂಲಕ ತಾನು ನಂಬಿದ ಬದುಕಿನ ಆದಾರ ವ್ಯವಸಾಯದ ಜೊತೆಗೆ ಆಧ್ಯಾತ್ಮಿಕ ಕೃಷಿಯನ್ನು ಮಾಡುತ್ತ 12ನೇ ಶತಮಾನದ ಬಸವಾದಿ ಶಿವಶರಣರ ಸಂಕುಲದಲ್ಲಿದ್ದು ತಮ್ಮದೇ ಆದ ಇರುವಿಕೆಯನ್ನು ತೋರಿಸಿದ ಮಹನೀಯರಾಗಿದ್ದರೆ ಎಂದು ಬಣ್ಣಿಸಿದರು.
ವೇದಿಕೆಯಲ್ಲಿ ನಿಪ್ಪಾಣಿ ಬಸವ ಕೇಂದ್ರದ ಮಲ್ಲಿಕಾರ್ಜುನ ಸ್ವಾಮಿಗಳವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ,ಜೆ.ಎಸ್. ಮುರುಘೇಶ್, ಪ್ರಾಧ್ಯಾಪಕರುಗಳಾದ ಡಾ. ಆನಂದ್, ನವೀನ್ ಮಸ್ಕಲ್, ನಾಗಲಾಂಬಿಕಾ, ಎಸ್ ಜೆ ಎಂ ಕನ್ನಡ ಶಾಲೆಯ ಮುಖ್ಯ ಶಿಕ್ಷಕ ವೀರಭದ್ರಪ್ಪ, ನಿವೃತ್ತ ಪ್ರಾಚಾರ್ಯ ಟಿ.ಪಿ .ಜ್ಞಾನಮೂರ್ತಿ ಸೇರಿದಂತೆ ಶಾಲಾ ಕಾಲೇಜುಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಮಾರಂಭದ ಆರಂಭಕ್ಕೆ ವಚನ ಹಾಗೂ ರೈತ ಗೀತೆಗಳನ್ನು ವಿದ್ಯಾರ್ಥಿಗಳು ಹಾಡಿದರು. ಶಿಕ್ಷಕ ಟಿ. ನಾಗರಾಜ್ ಸ್ವಾಗತಿಸಿದರು. ಶಿಕ್ಷಕ ಎಂ. ಶಿವಮೂರ್ತಿಯ್ಯ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ಗಿರೀಶ್ ವಂದಿಸಿದರು. ಬೃಹನ್ಮಠದ ಆವರಣದಲ್ಲಿರುವ ಎಸ್ ಜೆ ಎಂ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯರು ಈ ಕಾರ್ಯಕ್ರಮ ಸಂಘಟಿಸಿದ್ದರು.