ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಶೋಷಿತರ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಹಣವನ್ನು ಅನ್ಯ ಕಾರ್ಯಗಳಿಗೆ ಬಳಸಿಕೊಂಡಿದ್ದ ಕಾಂಗ್ರೆಸ್ ಸರ್ಕಾರ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಲೂಟಿ, ಮೈಸೂರು ಮುಡಾ ಬಹುಕೋಟಿ ಹಗರಣಗಳು ತನಿಖೆಯ ಹಂತದಲ್ಲಿರುವಾಗಲೇ ಇದೀಗ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿಯೂ 16.85 ಕೋಟಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ವಿಜಯಪುರ ಜಿಲ್ಲೆಯೊಂದರಲ್ಲೇ ಈ ಪರಿಯ ಅವ್ಯವಹಾರ ನಡೆದಿದೆ ಎಂದರೆ ಇನ್ನು ರಾಜ್ಯದೆಲ್ಲೆಡೆ ಇರುವ ಜಿಲ್ಲೆಗಳಲ್ಲಿ ಯಾವ ಮಟ್ಟಕ್ಕೆ ಅಕ್ರಮಗಳು ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.
ದಿನದಿಂದ ದಿನಕ್ಕೆ ನಾಡಿನ ಜನರ ಮೇಲೆ ಬೆಲೆ ಏರಿಕೆಯ ಬರೆ ಎಳೆಯುತ್ತಾ, ಅವ್ಯವಹಾರ, ಭ್ರಷ್ಟಾಚಾರಗಳು ಅಕ್ರಮಗಳ ಮೂಲಕ ದೇಶದ ಅತೀ ಕಡುಭ್ರಷ್ಟ ರಾಜ್ಯವೆಂಬ ಅಪಕೀರ್ತಿ ತರುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ನಿಮ್ನ ವರ್ಗಗಳ ಹಾಗೂ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುದು ಪದೇ ಪದೇ ಬಯಲಾಗುತ್ತಿದೆ ಎಂದು ವಿಜಯೇಂದ್ರ ದೂರಿದ್ದಾರೆ.