ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಇಂದಿನ ಪೀಳಿಗೆಗೆ ಹಿಂದಿನ ಸುಧಾರಕರ ಸಾಮಾಜಿಕ ಕಾಳಜಿಯ ಆಶಯಗಳೇನು ಎನ್ನುವುದನ್ನು ತಿಳಿಸಬೇಕಿದೆ. ಕೇವಲ ಅಂಕ ಗಳಿಸುವ ನಿಟ್ಟಿನಲ್ಲಿ ಮಕ್ಕಳನ್ನ ಪ್ರೇರೇಪಿಸಿ ಉಳಿದ ವಿಚಾರಗಳನ್ನು ಗೌಣ ಮಾಡಿದಲ್ಲಿ ಅವರಿಗೆ ನಮ್ಮ ಹಿಂದಿನವರು ಸುಭದ್ರ ಸಮಾಜ ಕಟ್ಟಲು ಪಟ್ಟ ಶ್ರಮ ಏನೂ ಎನ್ನುವುದನ್ನು ಅರ್ಥೈಸಿ ಆ ಮಾರ್ಗದಲ್ಲಿ ಸಾಗಲು ನಾವು ಪ್ರೇರಣೆ ನೀಡಬೇಕೆಂದು, ಅಂತಹ ಸಾಲಿನಲ್ಲಿ ಬರುವ ಡಾ. ಬಿ. ಆರ್. ಅಂಬೇಡ್ಕರ್ ಅವರು ಸರ್ವರು ಆದರಿಸಬಹುದಾದ ಸಂವಿಧಾನ ನೀಡಿರುವ ಅವರ ವ್ಯಕ್ತಿತ್ವವನ್ನು ನಾವು ಸ್ಮರಿಸುತ್ತ ಸಾಗಬೇಕಿದೆ ಎಂದು ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್ ಪ್ರಾಧ್ಯಾಪಕ ಗಂಗಾಧರ್ ಅಭಿಪ್ರಾಯಪಟ್ಟರು.
ಅವರು ನಗರದ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್ ನಲ್ಲಿ ಏರ್ಪಡಿಸಿದ್ದ ಅಂಬೇಡ್ಕರ್ ಅವರ 134ನೇಜಯಂತಿ ಏರ್ಪಡಿಸಿದ್ದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ ನಾವು ಮಕ್ಕಳನ್ನು ಸಾಂಸ್ಕೃತಿಕವಾಗಿ ಹದಗೊಳಿಸಿ ಅವರಿಗೆ ಬೇರೆ ಬೇರೆ ವಿಚಾರಗಳ ಕಡೆಗೆ ಗಮನ ಹರಿಸಲು ಸಹಕಾರ ನೀಡಿದರೆ ಓದಿನೊಂದಿಗೆ ಹಲವು ವಿಚಾರಗಳ ಮನನ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಮ್ಮ ಮಕ್ಕಳಿಗೆ ಅಂಬೇಡ್ಕರ್ ಅವರು ಮಾದರಿಯಾಗಬೇಕೆಂದು ಸಲಹೆ ಮಾಡಿದರು.
ಪ್ರಾಧ್ಯಾಪಕ ಗೋವಿಂದರಾಜ್ ಮಾತನಾಡಿ, ಅಂಬೇಡ್ಕರ್ ಕೇವಲ ಆರ್ಥಿಕ ತಜ್ಞರಾಗಿರದೆ, ತತ್ವಜ್ಞಾನಿ, ರಾಜಕೀಯ ಮುತ್ಸದ್ದಿ, ನ್ಯಾಯವಾದಿ ,ಪ್ರಗತಿಪರ ಚಿಂತಕ ಹೀಗೆ ವಿಶೇಷ ಗುಣಗಳ ಗಣಿ ಆಗಿದ್ದವರು. ಸಮಾನತೆ ಅನ್ನುವುದು ಕೇವಲ ಒಂದು ಜನಾಂಗಕ್ಕೆ ಅಲ್ಲ, ಯಾರು ಹಿಂದುಳಿದಿದ್ದಾರೆ ಅವರೆಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದು ಪ್ರತಿಪಾದಿಸಿದವರು ಅಂಬೇಡ್ಕರ್ ರವರಾಗಿದ್ದರು ಎಂದು ತಿಳಿಸಿದರು.
ಕಾಲೇಜಿನ ಅಧೀಕ್ಷಕ ಸಿ.ಎನ್. ಮೋಹನ್ ಮಾತನಾಡಿ ಅಂಬೇಡ್ಕರ್ ಅವರು ಚಿಂತನೆಗಳು ಒಂದು ವರ್ಗ, ಜಾತಿ ,ಧರ್ಮಕ್ಕೆ ಸೀಮಿತವಾದದಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುವ ಎಲ್ಲರಿಗೂ ಅನ್ವಯವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಗ್ರಂಥಪಾಲಕ ವೀರಯ್ಯ .ಎಂ, ಜಿ. ಕೊಟ್ರಪ್ಪ, ಲಿಂಗರಾಜು ಟಿ.ಎನ್., ರುದ್ರಮೂರ್ತಿ ಎಂ.ಜೆ. ಮಾತನಾಡಿ ಶ್ರೇಣಿಕೃತ ವ್ಯವಸ್ಥೆಯಲ್ಲಿ ಉಚ್ಛ, ನೀಚ ಎಂಬ ತರತಮ ಭಾವನೆಯಿಂದ ನೊಂದು ಬೆಂದವರಿಗಾಗಿ ಬೆಳಕಾಗಿ ಬಂದವರು ಅಂಬೇಡ್ಕರ್ ಅವರು. ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.ಎಂದು ಅವರ ಕಾರ್ಯಗಳನ್ನು ಸ್ಮರಿಸಿಕೊಂಡರು.
ಯಾವುದೇ ಸಮಾಜ ಸುಧಾರಕರ ಜಯಂತಿ,ಸ್ಮರಣೆ ಇತರ ಕಾರ್ಯಕ್ರಮ ಕೇವಲ ಶಿಷ್ಟಾಚಾರ ರೂಪದಲ್ಲಿರದೆ ಅವನ್ನ ಎಲ್ಲರೂ ಭಾವನಾತ್ಮಕವಾಗಿ ಶ್ರದ್ದೆ, ನಿಷ್ಠೆಯಿಂದ ಆಚರಿಸಿದಾಗ ಅದಕ್ಕೊಂದು ಅರ್ಥ ಬರುತ್ತದೆ. ಕೇವಲ ಸಾಂಕೇತಿಕ ಆಗಬಾರದು ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಭಾಗದ ಮುಖ್ಯಸ್ಥರಾದ ವಿ. ಟಿ .ರವಿ,ಸಿ.ಮಲ್ಲಿಕಾರ್ಜುನ, ಹಾಗೂ ಜಿ.ಎಸ್. ಗುರುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.