ಚಂದ್ರವಳ್ಳಿ ನ್ಯೂಸ್, ತುಮಕೂರು:
ತಂದೆಯ ಅಂತ್ಯ ಸಂಸ್ಕಾರ ಮಾಡುವ ಮೂಲಕ 6ನೇ ತರಗತಿಯಲ್ಲಿ ಓದುತ್ತಿರುವ ಯುವತಿಯೊಬ್ಬಳು ಗಮನ ಸೆಳೆದಿದ್ದಾಳೆ.
ತುಮಕೂರು ತಾಲೂಕಿನ ಪೆಮ್ಮನಹಳ್ಳಿ ಗ್ರಾಮದ 11 ವರ್ಷದ ಪುತ್ರಿ ತನ್ನ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಗಮನ ಸೆಳೆದಿದ್ದಾಳೆ. 6ನೇ ತರಗತಿ ಓದುತ್ತಿರುವ ಮೋನಿಷಾ, ತಂದೆಯ ಅಂತಿಮ ವಿಧಿವಿಧಾನಗಳನ್ನು ಮುಂದೆ ನಿಂತು ನೆರವೇರಿಸಿ ಗಮನ ಸೆಳೆದಿದ್ದಾಳೆ.
ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಕೆಂಪರಾಜು (48) ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಮೋನಿಷಾ ಹಿರಿಯ ಪುತ್ರಿ.
ಮೃತಪಟ್ಟ ತಂದೆಯ ಅಂತ್ಯಸಂಸ್ಕಾರ ನೆರವೇರಿಸಿದ ಬಾಲಕಿ ಮೋನಿಷಾ ಧೈರ್ಯವಂತೆ. ಆಕೆ ಸಮಾಜಕ್ಕೆ ಮಾದರಿ ಮಗು ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುಟುಂಬದ ಪೋಷಣೆಯನ್ನು ಮಗುವಿನ ಸಂಬಂಧಿಕರು ನೋಡಿಕೊಳ್ಳಲು ಮುಂದಾಗಿದ್ದಾರೆ. ಹೆಣ್ಣು ಬರೀ ಆರತಿಗೆ ಮಾತ್ರವೇ ಸೀಮಿತವಾಗಿರದೇ ಕೀರ್ತಿ ತಂದುಕೊಡುವಲ್ಲಿಯೂ ಸಹ ಯಾವುದೇ ಕಾರಣಕ್ಕೂ ಹಿಂದೆ ಬೀಳುವುದಿಲ್ಲ ಎನ್ನುವುದಕ್ಕೆ ಮೋನಿಷಾ ಸಾಕ್ಷಿಯಾಗಿದ್ದಾಳೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.