ನಿಧಿ ಆಸೆಗೆ 8 ತಿಂಗಳ ಗಂಡು ಮಗು ಬಲಿ ಕೊಡಲು ಯತ್ನ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹೊಸಕೋಟೆ:
ನಿಧಿ ಆಸೆಗಾಗಿ 8 ತಿಂಗಳ ಗಂಡು ಮಗುವನ್ನು ಬಲಿ ಕೊಡಲು ಸಿದ್ಧತೆ ನಡೆಯುತ್ತಿದೆ ಎನ್ನುವ ದೂರಿನ ಮೇಲೆ ಮಕ್ಕಳ ರಕ್ಷಣಾ ಘಟಕ ಮತ್ತು ಪೊಲೀಸ್ ತಂಡ ದಾಳಿ ಮಾಡಿ
, ಮಗುವನ್ನು ರಕ್ಷಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಜನತಾ ಕಾಲೊನಿಯಲ್ಲಿ ಜರುಗಿದೆ. ಮಕ್ಕಳ ರಕ್ಷಣಾ ಘಟಕ, ಚೈಲ್ಡ್ ಲೈನ್, ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ಸೂಲಿಬೆಲೆ ಪೊಲೀಸರು ಸೈಯದ್ ಇಮ್ರಾನ್ ಎಂಬಾತನ ಮನೆ ಮೇಲೆ ದಾಳಿ ಮಾಡಿ ಮಗುವನ್ನ ರಕ್ಷಿಸಿದ್ದಾರೆ.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮ್ಮ ಮಾಧ್ಯಮದೊಂದಿಗೆ ಮಾತನಾಡಿ, ಈ ವಿಚಾರ ಕುರಿತು ಮಕ್ಕಳ ಸಹಾಯವಾಣಿಗೆ ಕರೆ ಬಂದಿತ್ತು. ನಿಧಿ ತೆಗೆಯುವ ಉದ್ದೇಶಕ್ಕೆ ಮಗುವನ್ನು ಬಲಿಕೊಡಲು ಒಂದು ಮನೆಯಲ್ಲಿ 8 ತಿಂಗಳ ಮಗು ಸಾಕಿದ್ದಾರೆ ಎಂದು ದೂರು ನೀಡಿದ್ದರು.

- Advertisement - 

ಇದರ ಆಧಾರದ ಮೇರೆಗೆ ಮಕ್ಕಳ ರಕ್ಷಣಾ ಘಟಕ, ಚೈಲ್ಡ್ ಲೈನ್ ಹಾಗೂ ನಾವು ದಾಳಿ ಮಾಡಿ ಮಗುವನ್ನು ರಕ್ಷಣೆ ಮಾಡಿದೆವು. ಆ ಮನೆಯ ಕೋಣೆಯೊಂದರಲ್ಲಿ ಗುಂಡಿ ತೋಡಿದ್ದರು. ಸ್ಥಳದಲ್ಲಿ ಪೂಜಾ ಸಾಮಗ್ರಿ ಸಿಕ್ಕಿದೆ. ಇವುಗಳು ಮೇಲ್ನೋಟಕ್ಕೆ ಅನುಮಾನಾಸ್ಪದವಾಗಿ ಕಂಡುಬಂದಿವೆ ಎಂದು ಅವರು ತಿಳಿಸಿದರು.

ಸಿಡಬ್ಲೂಸಿ ಮುಂದೆ ಸೋಮವಾರ ಮಗುವನ್ನು ನೀಡುತ್ತೇವೆ. ಅಲ್ಲಿ ಪೋಷಕರು ಬಂದು ಏನು ಹೇಳುತ್ತಾರೆ ಎಂಬುದನ್ನು ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಸದ್ಯ ಮಗುವನ್ನು ಬಾಲ ಮಂದಿರದಲ್ಲಿ ಇರಿಸಲಾಗಿದೆ. ಅವರ ಮನೆಯಿಂದ ಜಪ್ತಿ ಮಾಡುವಂಥದ್ದು ಏನೂ ಇರಲಿಲ್ಲ ಎಂದು ಅವರು ತಿಳಿಸಿದರು.

- Advertisement - 

ಘಟನಾ ಸ್ಥಳಕ್ಕೆ ನಾವು ತೆರಳಿದಾಗ ಮಗುವನ್ನು ನಮಗೆ ಒಪ್ಪಿಸಲು ತುಂಬಾ ವಿರೋಧ ಮಾಡಿದರು. ನಾವು ಮಗುವನ್ನು ಸಾಕುತ್ತಿದ್ದೇವೆ, ಯಾವುದೇ ಬಲಿ ಕೊಡುತ್ತಿಲ್ಲ ಎಂದು ಹೇಳಿದರು. ಆದರೆ ದೂರು ಬಂದಿದ್ದರಿಂದ ಮಗುವನ್ನು ರಕ್ಷಿಸಿದ್ದೇವೆ ಎಂದು ತಿಳಿಸಿದರು.

ಪೋಷಕರು ದತ್ತು ತೆಗೆದುಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ, ಅದು ಕಾನೂನು ಬದ್ಧವಾಗಿಲ್ಲ. ದತ್ತು ತೆಗೆದುಕೊಂಡಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ. ಸೋಮವಾರ ಮಕ್ಕಳ ಕಲ್ಯಾಣ ಸಮಿತಿಯಲ್ಲಿ ವಿಚಾರಣೆ ಮಾಡಲಾಗುವುದು. ಇಲ್ಲಿ ಸೈಯದ್ ಇಮ್ರಾನ್‌ನ ಹೇಳಿಕೆ ಪಡೆದುಕೊಳ್ಳಲಾಗುವುದು. ಆ ನಂತರ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.

ಘಟನೆಯ ಬಗ್ಗೆ ನಾವು ಪ್ರಾಥಮಿಕ ವರದಿ ಮಾಡಿಕೊಂಡಿದ್ದೇವೆ. ಈ ರೀತಿ ಮಕ್ಕಳ ರಕ್ಷಣೆಯಾದಾಗ ಅದನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆಯೇ ಬಿಡಬೇಕು. ಮುಂದಿನ ನಿರ್ಧಾರವನ್ನು ಅವರು ಕೈಗೊಳ್ಳಲಿದ್ದಾರೆ. ಸಭೆಯ ನಂತರ ಪೊಲೀಸ್ ಇಲಾಖೆಗೆ ದೂರು ಕೊಟ್ಟು ಅಲ್ಲಿ ಎಫ್​​ಐಆರ್​ ದಾಖಲಿಸುತ್ತೇವೆ ಎಂದು ಹೇಳಿದರು.

 

 

 

Share This Article
error: Content is protected !!
";