ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸಕಾಲಕ್ಕೆ ವೇತನ ನೀಡದ ರಾಜ್ಯ ಕಾಂಗ್ರೆಸ್ ಸರ್ಕಾರದ ಅಮಾನವೀಯ ವ್ಯವಸ್ಥೆಗೆ ಬೇಸತ್ತು ನೇಣಿಗೆ ಶರಣಾಗಿದ್ದ ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಗ್ರಂಥಪಾಲಕಿ ಭಾಗ್ಯವತಿ ವಿಶ್ವೇಶ್ವರಯ್ಯ ಅಗ್ಗಿಮಠ ಅವರ ಹೃದಯವಿದ್ರಾವಕ ಘಟನೆ ಹಸಿಯಾಗಿರುವಾಗಲೇ ವೇತನವನ್ನೇ ನಂಬಿ ಬದುಕು ಕಟ್ಟಿಕೊಂಡಿರುವ
ಚಾಮರಾಜನಗರ ತಾಲೂಕಿನ ಹೊಂಗನೂರು ಗ್ರಾಮ ಪಂಚಾಯ್ತಿಯಲ್ಲಿ ಅರೆಕಾಲಿಕ ವಾಟರ್ ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಚಿಕ್ಕೂಸನಾಯಕ ಅವರು ಗ್ರಾಮ ಪಂಚಾಯ್ತಿ ಕಚೇರಿಯ ಮುಂದೆಯೇ ನೇಣಿಗೆ ಶರಣಾಗಿರುವ ಹೃದಯ ಕಲಕುವ ಘಟನೆ ಸರ್ಕಾರದ ದುರಾವಸ್ಥೆಗೆ ಹಿಡಿದ ಕನ್ನಡಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಟೀಕಾಪ್ರಹಾರ ಮಾಡಿದ್ದಾರೆ.
ಈ ಸರ್ಕಾರದ ವ್ಯವಸ್ಥೆಯಲ್ಲಿ 3 ಮತ್ತು 4 ದರ್ಜೆ ಹಾಗೂ ಹೊರಗುತ್ತಿಗೆ ನೌಕರರು ಸರ್ಕಾರದ ಸಂಬಳವನ್ನೇ ಆಶ್ರಯಿಸಿ ಬದುಕು ಕಟ್ಟಿಕೊಂಡಿರುತ್ತಾರೆ. ಇಂಥವರ ಬಗ್ಗೆ ಕನಿಷ್ಠ ಮಾನವೀಯತೆ ಪ್ರದರ್ಶಿಸದೆ, ಸಕಾಲಕ್ಕೆ ವೇತನ ಪಾವತಿಸಲಾಗದ ಹೀನಾಯ ಸ್ಥಿತಿಗೆ ತಲುಪಿರುವುದು ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ. ಇಂತಹ ಪರಿಸ್ಥಿತಿ ವೇತನ ತಲುಪದೇ ಸಂಕಷ್ಟ ಪಡುತ್ತಿರುವ ನೌಕರರು ಸಾಲುಗಟ್ಟಿ ನಿಂತಿದ್ದಾರೆ.
ಮೊನ್ನೆಯ ಗ್ರಂಥ ಪಾಲಕಿ ಆತ್ಮಹತ್ಯೆಯ ಘಟನೆಯಿಂದಾದರೂ ಸರ್ಕಾರ ಎಚ್ಚೆತ್ತುಕೊಂಡು ವೇತನ ಸಮಸ್ಯೆಯನ್ನು ಬಗೆಹರಿಸಬೇಕಿತ್ತು, ಆದರೆ ದಪ್ಪ ಚರ್ಮದ ಕಿವುಡು ಸರ್ಕಾರಕ್ಕೆ ಬಡವರ ಹಾಗೂ ಸಂಕಷ್ಟಿತರ ಯಾತನೆಯ ನೋವು ಕೇಳಿಸುವುದೇ ಇಲ್ಲ. ಸರ್ಕಾರದ ದುರವಸ್ಥೆ ಸುಸ್ಥಿತಿಗೆ ಬಂದು ನೌಕರರಿಗೆ ಸಕಾಲಕ್ಕೆ ಸಂಬಳ ಸಿಗುವಂತಾಗಲು ಇನ್ನೂ ಎಷ್ಟು ಜನ ಅಮಾಯಕರ ಪ್ರಾಣ ಈ ಸರ್ಕಾರಕ್ಕೆ ಬೇಕಾಗಿದೆಯೋ ತಿಳಿಯುತ್ತಿಲ್ಲ.
ಸರ್ಕಾರ ಈ ಕೂಡಲೇ ಸರ್ಕಾರಿ ಹಾಗೂ ಅರೆ ಸರ್ಕಾರಿ ಸಂಸ್ಥೆಗಳಲ್ಲಿ ಅದರಲ್ಲೂ ಸ್ಥಳೀಯ ಸಂಸ್ಥೆಗಳಲ್ಲಿ, ವಿವಿಧ ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಯಾವುದೇ ತಾರತಮ್ಯವಿಲ್ಲದೆ ಸಕಾಲಕ್ಕೆ ಸಂಬಳ ಸಿಗುವಂತಹ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸುತ್ತೇನೆ. ದೀಪಾವಳಿ ಹಬ್ಬದ ಸಡಗರದ ದೀಪ ಕರ್ನಾಟಕದ ಪ್ರತಿಯೊಂದು ಮನೆಯನ್ನೂ ಬೆಳಗಬೇಕು. “ದುರಂತ ದೌರ್ಭಾಗ್ಯವೆಂದರೆ ಸರ್ಕಾರಿ ನೌಕರಿಯನ್ನು ಆಶ್ರಯಿಸಿರುವ ಅನೇಕರ ಬದುಕಲ್ಲಿ ಸರ್ಕಾರ ದೀಪಾವಳಿಯ ಬೆಳಕು ಬೆಳಗದಂತೆ ನಿರ್ದಯತೆಯಿಂದ ವರ್ತಿಸುತ್ತಿದೆ” ಎಂದು ವಿಜಯೇಂದ್ರ ವಾಗ್ದಾಳಿ ಮಾಡಿದ್ದಾರೆ.

