ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸರ್ಕಾರ ೨೦೧೪ ರಲ್ಲಿ ನಡೆಸಿದ ಜಾತಿ ಗಣತಿಯಲ್ಲಿ ನಮ್ಮ ಸಮುದಾಯಕ್ಕೆ ವಂಚನೆಯಾಗಿರುವುದರಿಂದ ನಮ್ಮ ಸ್ವಂತ ಖರ್ಚಿನಿಂದ ರಾಜ್ಯಾದ್ಯಂತ ಆಪ್ ಮೂಲಕ ಸಮೀಕ್ಷೆ ನಡೆಸಿ ನಿಖರವಾದ ಮಾಹಿತಿಯನ್ನು ರಾಜ್ಯ ಸರ್ಕಾರಕ್ಕೆ ನೀಡುತ್ತೇವೆಂದು ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಸೋಮಶೇಖರ್ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ೩೧ ಜಿಲ್ಲೆ ೨೨೪ ವಿಧಾನಸಭಾ ಕ್ಷೇತ್ರಗಳಲ್ಲಿ ಐವತ್ತು ಲಕ್ಷದಷ್ಟು ಜನಸಂಖ್ಯೆಯಿದೆ. ಸರ್ಕಾರ ನಡೆಸಿರುವ ಜಾತಿ ಗಣತಿಯಲ್ಲಿ ೯ ಲಕ್ಷ ೨೮ ಸಾವಿರ ಜನಸಂಖ್ಯೆ ತೋರಿಸಿ ಅನ್ಯಾಯ ಮಾಡಿದೆ. ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ನೇಕಾರ ಜನರಲ್ಲಿ ಜಾಗೃತಿ ಮೂಡಿಸುವುದಲ್ಲದೆ ಗಣತಿಗೆ ಎಲ್ಲರ ಸಾನಿಧ್ಯದಲ್ಲಿ ಸಭೆ ನಡೆಸಿ ತೀರ್ಮಾನಿಸಿದ್ದೇವೆ. ಮರು ಸಮೀಕ್ಷೆ ನಡೆಸಲು ಕೇಂದ್ರ ರಾಜ್ಯಕ್ಕೆ ನಮ್ಮ ಒತ್ತಾಯವಿದೆ ಎಂದರು.
ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಹಿಂದುಳಿದಿರುವ ನೇಕಾರ ಜನಾಂಗ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕಾಗಿರುವುದರಿಂದ ನಾವುಗಳು ಗಣತಿ ಕಾರ್ಯ ಕೈಗೊಂಡಿದ್ದು, ಸರ್ಕಾರಕ್ಕೆ ನಿಖರವಾದ ಮಾಹಿತಿ ನೀಡಲಿದ್ದೇವೆಂದು ಹೇಳಿದರು.
ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಉಪಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ ಎಲ್ಲಾ ಜಿಲ್ಲೆ, ತಾಲ್ಲೂಕು, ಗ್ರಾಮಗಳಲ್ಲಿ ನೇಕಾರ ಸಮುದಾಯದ ೨೯ ಒಳ ಪಂಗಡಗಳಿವೆ. ಐವತ್ತು ಲಕ್ಷ ಜನಸಂಖ್ಯೆಯಿದ್ದರೂ ಸರ್ಕಾರ ನಡೆಸಿರುವ ಗಣತಿಯಲ್ಲಿ ಸರಿಯಾದ ಲೆಕ್ಕ ತೋರಿಸಿಲ್ಲ. ವ್ಯತ್ಯಾಸವಿರುವುದನ್ನು ಸರಿಪಡಿಸುವುದಕ್ಕಾಗಿ ಒಕ್ಕೂಟದಿಂದ ಗಣತಿ ಆರಂಭಿಸಿದ್ದು, ಪಕ್ಕಾ ಲೆಕ್ಕ ಕೊಡುತ್ತೇವೆ. ಸಮುದಾಯದ ಅಳಿವು-ಉಳಿವಿನ ಪ್ರಶ್ನೆಯಾಗಿರುವುದರಿಂದ ಆಪ್ ಮೂಲಕ ನಮೂನೆಗಳನ್ನು ಭರ್ತಿ ಮಾಡಿ ಮಾಹಿತಿ ಕಲೆ ಹಾಕುತ್ತಿದ್ದೇವೆಂದರು.
ನೇಕಾರ ಸಮುದಾಯಗಳ ಮುಂದಿನ ಪೀಳಿಗೆಯ ಭವಿಷ್ಯದ ಹಿತದೃಷ್ಟಿಯಿಂದ ಜಾತಿ ಗಣತಿ ಅತಿ ಮುಖ್ಯ. ಹಾಗಾಗಿ ಒಕ್ಕೂಟದ ವತಿಯಿಂದ ರಾಜ್ಯಾದ್ಯಂತ ಸುತ್ತಾಡಿ ಗಣತಿ ಮೂಲಕ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ನಿರ್ಧಿಷ್ಟ ಅಂಕಿ ಸಂಖ್ಯೆಗಳನ್ನು ನೀಡಲಾಗುವುದೆಂದು ಹೇಳಿದರು.
ನೇಕಾರರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಗೋವಿಂದಪ್ಪ, ಜಗದೀಶ್, ಶಿವಪ್ಪಶೆಟ್ರು, ದಯಾನಂದ ಶೆಟ್ಟಿಗಾರ್ ಇವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.