ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕವಾಡಿಗರಹಟ್ಟಿಯ ಸುಮಾರು 50 ಮನೆಗಳನ್ನು ಚಿತ್ರದುರ್ಗ ಜಿಲ್ಲಾಡಳಿತ ದಿಢೀರ್ ಧ್ವಂಸ ಮಾಡಿದ್ದು ಪರಿಹಾರ ಮತ್ತು ನಿವೇಶನ ಹಾಗೂ ಮನೆ ನೀಡಬೇಕೆಂದು ನಿವಾಸಿಗಳು ಒತ್ತಾಯಿಸಿ ಪ್ರತಿಭಟನೆ ಮಾಡಿಲ್ಲದೆ ತಮ್ಮ ಚಪ್ಪಲೆಗಳಿಂದ ತಾವೇ ಹೊಡೆದುಕೊಂಡು ವಿನೂತನವಾಗಿ ಪ್ರತಿಭಟಿಸಿದ ಘಟನೆ ಮಂಗಳವಾರ ಜರುಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಚಿತ್ರದುರ್ಗದಿಂದ ಶಿವಮೊಗ್ಗ ರಸ್ತೆಯನ್ನು ಅಗಲೀಕರಣ ಮಾಡುತ್ತಿದ್ದು ಮುರುಘಾಮಠದ ಸಮೀಪ ಇರುವ ಕವಾಡಿಗರಹಟ್ಟಿಯ 50ಕ್ಕೂ ಹೆಚ್ಚಿನ ಮನೆಗಳ ನಿವಾಸಿಗಳಿಗೆ ಕಳೆದ 15 ದಿನಗಳಿಂದೆ ಖಾಲಿ ಮಾಡುವಂತೆ ನೋಟಿಸ್ ನೀಡಿತ್ತು. ಆದರೆ ಯಾರೊಬ್ಬರೂ ಖಾಲಿ ಮಾಡಿರಲಿಲ್ಲ.
ಹೀಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಜೆಸಿಬಿಗಳೊಂದಿಗೆ ಮನೆಗಳನ್ನು ಧ್ವಂಸ ಮಾಡಿದ್ದು ಇದರಿಂದ ರೊಚ್ಚಿಗೆದ್ದ ನಿವಾಸಿಗಳು ಕೂಡಲೇ ಪರಿಹಾರ ನೀಡಬೇಕು. ಅಲ್ಲದೆ 50 ಕುಟುಂಬಗಳಿಗೆ ಪರ್ಯಾಯವಾಗಿ ನಿವೇಶನ ಮತ್ತು ಮನೆಗಳನ್ನು ನಿರ್ಮಿಸಿಕೊಡುವಂತೆ ಒತ್ತಾಯಿಸಿ ಪ್ರತಿಭಟಿಸಿದರು.
ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗಳು ಒಂದು ಹಂತದಲ್ಲಿ ಟೀ-ಶರ್ಟ್ ಮೇಲೆ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿಯ ಭಾವಚಿತ್ರವಿದ್ದ ಸ್ಥಳಕ್ಕೆ ಚಪ್ಪಲೆಯಿಂದ ಬಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ಕವಾಡಿಗರ ಹಟ್ಟಿಯಲ್ಲಿ ಬಹುತೇಕ ಪರಿಶಿಷ್ಟ ವರ್ಗದವರೇ ಹೆಚ್ಚಾಗಿದ್ದು ಈಗ ಈ ಎಲ್ಲ ಕುಟುಂಬಗಳು ಬೀದಿಗೆ ಬಿದ್ದಿವೆ.
ನಗರಸಭೆ ಪೌರಾಯುಕ್ತೆ ಲಕ್ಷ್ಮೀ ಅವರು 15 ದಿನಗಳಲ್ಲಿ ನಿವೇಶನ ನೀಡುವುದಾಗಿ ಭರವಸೆ ನೀಡಿದರೂ ನಿವಾಸಿಗಳು ಮಾತ್ರ ಪ್ರತಿಭಟನೆಯಿಂದ ಹಿಂದೆ ಸರಿಯಲಿಲ್ಲ. ಕೊನೆಗೆ ಪೊಲೀಸರು ಮತ್ತು ಜೆಸಿಬಿ ಗಳು ವಾಪಸ್ ತೆರಳಿದ ಮೇಲೆ ಪ್ರತಿಭಟನೆಯನ್ನು ಹಿಂಪಡೆದು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

