ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರ ವ್ಯಾಪ್ತಿಯ ವಸತಿ ರಹಿತ ಕುಟುಂಬಗಳಿಗೆ ಭಾರತ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 ಯೋಜನೆಯನ್ನು ಸರ್ವರಿಗೂ ಸೂರು ಒದಗಿಸಲು ಯೋಜನೆಯನ್ನು ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಮುಂದಿನ 05 ವರ್ಷಗಳಲ್ಲಿ ದೇಶಾದ್ಯಂತ ನಗರ ಪ್ರದೇಶಗಳಲ್ಲಿ ಬಡವರು, ಕೊಳಚೆ ನಿವಾಸಿಗಳನ್ನು ಒಳಗೊಂಡಂತೆ, ಮಧ್ಯಮ ವರ್ಗದವರಿಗೆ ಸೂರು ಒದಗಿಸಲು ಸಹಾಯಧನ ನೀಡಲಾಗುವುದು.
ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿವೇಶನ ರಹಿತ ಮತ್ತು ವಸತಿ ರಹಿತ ಕುಟುಂಬಗಳನ್ನು ರ್ಯಾಪೀಡ್ ಬೇಡಿಕೆ ಸಮೀಕ್ಷೆ ಕೈಗೊಳ್ಳಬೇಕಾಗಿದ್ದು, ಭಾರತ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 ವಿವರಗಳನ್ನು ಒದಗಿಸಲು ಕೇಂದ್ರ ಸರ್ಕಾರವು ಯುನಿಫೈಡ್ ವೆಬ್ ಪೆÇೀರ್ಟಲ್ ಆನ್‍ಲೈನ್ ವ್ಯವಸ್ಥೆಯನ್ನು ಮಾಡಿದ್ದು, ಯು.ಆರ್.ಎಲ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಫಲಾನುಭವಿಯು ವಿವಾಹಿತ ಮಹಿಳೆ ಅಥವಾ ಏಕ ಮಹಿಳಾ ಒಡೆತನದ ಗೃಹಿಣಿಯಾಗಿರಬೇಕು. ಇವರನ್ನು ಹೊರತುಪಡಿಸಿ ಪುರುಷರಾಗಿದ್ದಲ್ಲಿ ಮಾಜಿ ಯೋಧರು, ವಿಧುರರು, ಅಂಗವಿಕಲರು, ಹಿರಿಯ ನಾಗರೀಕರು ಹಾಗೂ ವಿಚ್ಚೇದಿತರು ಅರ್ಹರಾಗಿರುತ್ತಾರೆ.
ಫಲಾನುಭವಿಯು 9 ಲಕ್ಷದ ಒಳಗಡೆ ಆದಾಯ ಹೊಂದಿರಬೇಕು. ಇದರಲ್ಲಿ ಆರ್ಥಿಕ ದುರ್ಬಲ ವರ್ಗದವರು 3 ಲಕ್ಷದವರೆಗೆ, ಕಡಿಮೆ ಆದಾಯ ಗುಂಪಿನವರು 3 ಲಕ್ಷದಿಂದ 6 ಲಕ್ಷದವರೆಗೆ ಹಾಗೂ ಮಧ್ಯಮ ವರ್ಗದ ಗುಂಪಿನವರು 6 ಲಕ್ಷದಿಂದ 9 ಲಕ್ಷದವರೆಗೆ ವಾರ್ಷಿಕ ಆದಾಯ ಹೊಂದಿರಬೇಕು.
ಕಳೆದ 20 ವರ್ಷದಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಬೇರೆ ಯಾವುದೇ ವಸತಿ ಯೋಜನೆಯಡಿ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಸಹಾಯಧನ ಪಡೆದು ಮನೆ ನಿರ್ಮಾಣ ಮಾಡಿರಬಾರದು. ಚಿತ್ರದುರ್ಗ ನಗರಸಭೆ ವ್ಯಾಪ್ತಿಯಲ್ಲಿ ವಾಸವಿರುವ ಫಲಾನುಭವಿಯು ಸಮಿಕ್ಷೆಯಲ್ಲಿ ಅರ್ಜಿಯನ್ನು ಸಲ್ಲಿಸಲು ಅರ್ಹರಾಗಿರುತ್ತಾರೆ. ರಾಜ್ಯದ ಯಾವುದೇ ಭಾಗದಲ್ಲಿ ನಿವೇಶನ/ವಸತಿ ಹೊಂದಿರದ ಕುಟುಂಬವನ್ನು ನಿವೇಶನ ರಹಿತರು ಎಂದು ಪರಿಗಣಿಸಲಾಗುವುದು.
ಫಲಾನುಭವಿಯು ಸ್ವಂತ ನಿವೇಶನ ಹೊಂದಿದ್ದಲ್ಲಿ ನಿವೇಶನಕ್ಕೆ ಸಂಬಂಧಿಸಿದ ಹಕ್ಕುಪತ್ರ, ದಾನ ಪತ್ರ, ಕ್ರಯಪತ್ರ, ಉಡುಗೊರೆ ಪತ್ರ ಹಾಗೂ ಖಾತಾ ಪತ್ರಗಳನ್ನು ಹೊಂದಿರಬೇಕು. ಈ ಹಿಂದೆ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಯಡಿ ಆಯ್ಕೆಯಾಗಿದ್ದಲ್ಲಿ ಬೇಡಿಕೆ ಸಮೀಕ್ಷೆಯಲ್ಲಿ ಅರ್ಜಿ ಸಲ್ಲಿಸಲು ಅನರ್ಹರಾಗಿರುತ್ತಾರೆ. ಅರ್ಜಿದಾರರು ಅಗತ್ಯ ದಾಖಲೆಗಳನ್ನು ನಗರಸಭೆಯ ವಸತಿ ಶಾಖೆಯಿಂದ ಮಾಹಿತಿ ಪಡೆದು ಸಲ್ಲಿಸಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಮಯದಲ್ಲಿ ನಗರಸಭೆಯ ವಸತಿ ಶಾಖೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಚಿತ್ರದುರ್ಗ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.