ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಬಿರುಸಿನ ಮತದಾನ ನಡೆಯಿತು. ಬೆಳಿಗ್ಗೆಯಿಂದಲೇ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ಈ ಪ್ರಕ್ರಿಯೆಯಲ್ಲಿ ಕೆಲವು ವಿಶೇಷ ಕ್ಷಣಗಳು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದವು.
ಅನಾರೋಗ್ಯ ಮರೆತು ಮತದಾನ ಮಾಡಿದ ಸೀತಾರಾಮ್-
ಚುನಾವಣಾ ಹಬ್ಬದಲ್ಲಿ 82 ವರ್ಷದ ವೃದ್ಧ ಸೀತಾರಾಮ್ ಅವರು ಮಾದರಿಯಾಗಿ ನಿಂತರು. ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರು, ತೀವ್ರ ಅನಾರೋಗ್ಯದ ನಡುವೆಯೂ ಸ್ಟ್ರೆಚರ್ ಮೂಲಕ ಕೆ.ಆರ್. ಮಾರುಕಟ್ಟೆ ಸಮೀಪದ ಎಕ್ಸ್ ಮುನ್ಸಿಪಲ್ ಕಾಲೇಜು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. “ಪ್ರಜಾಪ್ರಭುತ್ವದಲ್ಲಿ ಮತದಾನ ಅತ್ಯಂತ ಮುಖ್ಯ” ಎಂಬ ಸಂದೇಶವನ್ನು ಇವರು ಸಾರಿದರು.
ಮತಗಟ್ಟೆಯಲ್ಲಿ ‘ಪುಟಾಣಿ‘ ರಕ್ಷಕರು-
ಆಜಾದ್ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆಯ (ಚೋಟಿ ಮಿಲ್ಲತ್) ಮತಗಟ್ಟೆಗಳಲ್ಲಿ ವಿಶೇಷ ದೃಶ್ಯವೊಂದು ಕಂಡುಬಂದಿತು. ಮತದಾನಕ್ಕೆ ಬಂದಿದ್ದ ತಾಯಿಯೊಂದಿಗೆ ಇಬ್ಬರು ಮಕ್ಕಳು ಪೊಲೀಸ್ ಹಾಗೂ ಯೋಧರ ಸಮವಸ್ತ್ರ ಧರಿಸಿ ಬಂದಿದ್ದರು. ಈ ಪುಟಾಣಿ ‘ಅಧಿಕಾರಿಗಳನ್ನು‘ ಕಂಡು ಮತದಾರರು ಹಾಗೂ ಸಿಬ್ಬಂದಿ ಮುಖದಲ್ಲಿ ಮಂದಹಾಸ ಮೂಡಿತು.
ಚುನಾವಣಾ ಸಿದ್ಧತೆ ಮತ್ತು ಅಂಕಿ-ಅಂಶಗಳು-
ಕ್ಷೇತ್ರದಲ್ಲಿ ಶಾಂತಿಯುತ ಮತ್ತು ವ್ಯವಸ್ಥಿತ ಮತದಾನಕ್ಕಾಗಿ ಚುನಾವಣಾ ಆಯೋಗವು ವ್ಯಾಪಕ ಸಿದ್ಧತೆಗಳನ್ನು ಮಾಡಿಕೊಂಡಿತ್ತು.
ವಿವರ ಮಾಹಿತಿ-
ಒಟ್ಟು ಮತಗಟ್ಟೆಗಳು 284, ನಗರ ಪ್ರದೇಶದ ಮತಗಟ್ಟೆಗಳು 234, ಗ್ರಾಮೀಣ ಪ್ರದೇಶದ ಮತಗಟ್ಟೆಗಳು 50. ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ 1,500ಕ್ಕೂ ಹೆಚ್ಚು. ವಿಶೇಷ ಮತಗಟ್ಟೆಗಳು 2 ಪಿಂಕ್ ಮತಗಟ್ಟೆ, 1 ವಿಶೇಷಚೇತನರ ಮತಗಟ್ಟೆ, 1 ಯುವ ಮತದಾರರ ಮತಗಟ್ಟೆ.
ಭದ್ರತೆ: ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿತ್ತು. ಸಿಬ್ಬಂದಿಗಳ ಸುಗಮ ಸಂಚಾರಕ್ಕಾಗಿ ವಾಹನಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.

